

ಮಡಿಕೇರಿ ಜು.7 NEWS DESK : ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜು.9 ರಂದು ಹಮಾಲಿ ಕಾರ್ಮಿಕರು ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲಿದ್ದಾರೆ ಎಂದು ಕೊಡಗು ಜಿಲ್ಲಾ ಹಮಾಲಿ ಕಾರ್ಮಿಕರ ಸಂಘದ ಅಧ್ಯಕ್ಷ ಪಿ.ಆರ್.ಭರತ್ ಹಾಗೂ ಕಾರ್ಯದರ್ಶಿ ಕೆ.ಎಸ್.ಶಾಜಿ ರಮೇಶ್ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕಾರ್ಮಿಕರನ್ನು ಗುಲಾಮಗಿರಿಗೆ ತಳ್ಳುವ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಜಾರಿಗೆ ತರುವ ಮೂಲಕ ಸರ್ಕಾರ ಕಾರ್ಮಿಕ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ಇದನ್ನು ವಿರೋಧಿಸಿ ಬುಧವಾರ ಬೆಳಿಗ್ಗೆ 10.30 ಗಂಟೆಗೆ ವಿರಾಜಪೇಟೆ ಮತ್ತು ಕುಶಾಲನಗರ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಲಾಗವುದೆಂದು ಹೇಳಿದ್ದಾರೆ. *ಬೇಡಿಕೆಗಳು* ಎಲ್ಲಾ ಹಮಾಲಿ ಕಾರ್ಮಿಕರಿಗೆ ಭವಿಷ್ಯ ನಿಧಿ, ಪಿಂಚಣಿ ಸೇರಿದಂತೆ ಸಮಗ್ರ ಕಲ್ಯಾಣ ಸೌಲಭ್ಯಗಳನ್ನು ಜಾರಿ ಮಾಡಬೇಕು, ಕೇರಳ, ಮಹಾರಾಷ್ಟ್ರ ರಾಜ್ಯಗಳ ಮಾದರಿಯಲ್ಲಿ ಉದ್ಯೋಗ ಭದ್ರತೆ ಹಾಗೂ ಸಾಮಾಜಿಕ ಭದ್ರತೆ ಕಲ್ಪಿಸಲು ಕರ್ನಾಟಕ ರಾಜ್ಯದ ಹಮಾಲಿ ಕಾರ್ಮಿಕರಿಗೆ ಪ್ರತ್ಯೇಕ ಕಲ್ಯಾಣ ಮಂಡಳಿ ರೂಪಿಸಬೇಕು, ಎ.ಪಿ.ಎಂ.ಸಿ ಕಾಯಕ ನಿಧಿಯಿಂದ ನಿವೃತ್ತಿ ಪರಿಹಾರ ಮತ್ತು ಸಮವಸ್ತ್ರ ಸೌಲಭ್ಯ ನೀಡಬೇಕು, ಇ-ಶ್ರಮ್ ಪೋರ್ಟಲ್‍ನಲ್ಲಿ ನೋಂದಾಯಿಸಿದ ಹಮಾಲಿ ಕಾರ್ಮಿಕರಿಗೆ ಕೇಂದ್ರ ಸರ್ಕಾರ ಕಲ್ಯಾಣ ಸೌಲಭ್ಯ ಒದಗಿಸಬೇಕು. ಸರ್ಕಾರಿ ಹಾಗೂ ಖಾಸಗಿ ಗಿರಣಿ, ಗೋದಾಮುಗಳ ಹಮಾಲಿ ಕಾರ್ಮಿಕರಿಗೆ ಗುರುತಿನ ಚೀಟಿ, ಭವಿಷ್ಯ ನಿಧಿ, ಇಎಸ್‍ಐ, ಬೋನಸ್ ಮುಂತಾದ ಕಾನೂನಾತ್ಮಕ ಸೌಲಭ್ಯಗಳನ್ನು ಕಡ್ಡಾಯವಾಗಿ ಜಾರಿಗೆ ತರಬೇಕು, ಉದ್ಯೋಗ ಭದ್ರತೆ, ವಸತಿ ಮತ್ತು ಸಾಮಾಜಿಕ ಭದ್ರತೆ ನೀಡಬೇಕು, ಲೋಡಿಂಗ್ ಮತ್ತು ಅನ್‍ಲೋಡಿಂಗ್ ಉದ್ದಿಮೆಗೆ ಜಾರಿಯಾಗಿರುವ ಕನಿಷ್ಟ ವೇತನ ಜಾರಿಯಾಗಲು ಕಾರ್ಮಿಕ ಇಲಾಖೆ ಕ್ರಮ ಕೈಗೊಳ್ಳಬೇಕು, ಕನಿಷ್ಟ ವೇತನವನ್ನು ವೈಜ್ಞಾನಿಕವಾಗಿ ಪರಿಷ್ಕರಣೆ ಮಾಡಬೇಕು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ವಸತಿ ಯೋಜನೆಯನ್ನು ಬಳಸಿಕೊಂಡು ಸೂಕ್ತವಾದ ಗುಂಪು ವಸತಿ ಯೋಜನೆಗಳನ್ನು ರೂಪಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹಮಾಲಿ ಕೆಲಸವನ್ನು ಸ್ಥಗಿತಗೊಳಿಸಿ ಹಮಾಲಿ ಕಾರ್ಮಿಕರು ಪ್ರತಿಭಟನೆ ನಡೆಸಲಿದ್ದಾರೆ ಎಂದು ಪಿ.ಆರ್.ಭರತ್ ಹಾಗೂ ಶಾಜಿ ರಮೇಶ್ ತಿಳಿಸಿದ್ದಾರೆ.








