
ಸೋಮವಾರಪೇಟೆ ಜು.9 NEWS DESK : ಉತ್ತರ ಕೊಡಗಿನ ಸೂರ್ಲಬ್ಬಿಯಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಭತ್ತದ ಗದ್ದೆಗಳಿಗೆ ದಾಳಿ ನಡೆಸಿ ಸಸಿಮಡಿಯನ್ನು ತುಳಿದು ನಾಶಪಡಿಸಿದೆ. ಮುಟ್ಲು, ಹಮ್ಮಿಯಾಲ ಹಾಗೂ ಸೂರ್ಲಬ್ಬಿ ವ್ಯಾಪ್ತಿಯಲ್ಲಿ ಮೂರರಿಂದ ನಾಲ್ಕು ಕಾಡಾನೆಗಳು ಸಂಚರಿಸುತ್ತಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಗ್ರಾಮಸ್ಥರು ಭತ್ತದ ನಾಟಿ ಕೆಲಸಕ್ಕೆ ತಯಾರಿ ನಡೆಸಿದ್ದರು. ಸೂರ್ಲಬ್ಬಿ ಗ್ರಾಮದ ಅಪ್ಪುಡ ಉತ್ತಪ್ಪ, ಅಪ್ಪುಡ ಗಣಪತಿ ಅವರ ಗದ್ದೆಯಲ್ಲಿ ಬೆಳೆದು ನಿಂತಿದ್ದ ಸಸಿಮಡಿಯನ್ನು ಆನೆಗಳ ಹಿಂಡು ನಾಶ ಪಡಿಸಿವೆ. ಕಳೆದ ಕೆಲವು ದಿನಗಳಿಂದ ಕುಂಬಾರಗಡಿಗೆ, ಮಂಕ್ಯ, ಕಿಕ್ಕರಳ್ಳಿ ಗ್ರಾಮದಲ್ಲೂ ಆನೆಗಳ ದಾಳಿ ಮುಂದುವರೆದಿದ್ದು, ಅರಣ್ಯ ಇಲಾಖೆಗೆ ದೂರು ನೀಡಿದ್ದರೂ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಮಂಕ್ಯ ಗ್ರಾಮದ ಚಾಮೇರ ದಿನೇಶ್ ಬೆಳ್ಯಪ್ಪ ಆರೋಪಿಸಿದ್ದಾರೆ. ಅರಣ್ಯ ಇಲಾಖೆ ಕಾಡಾನೆಗಳನ್ನು ತಕ್ಷಣವೇ ಕಾಡಿಗಟ್ಟಲು ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.








