
ವಿರಾಜಪೇಟೆ ಜು.11 NEWS DESK : ಶ್ರೀ ಮುತ್ತಪ್ಪನ್ ಮಲಯಾಳಿ ಸಮಾಜದ ವತಿಯಿಂದ 17ನೇ ವರ್ಷದ ಸ್ಥಾಪನ ದಿನದ ಅಂಗವಾಗಿ ವಿರಾಜಪೇಟೆಯ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ 30 ವಿದ್ಯಾರ್ಥಿಗಳಿಗೆ ಹಾಗೂ ಕೆದಮುಳ್ಳೂರು ವಿನ ಕಥರಿನ ಚಿತ್ತದಿನಿ ಮಕ್ಕಳ ಮನೆಯ 16 ಶಾಲಾ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷರಾದ ಸುಮೇಶ್ ಅವರ ನೇತೃತ್ವದಲ್ಲಿ ಉಚಿತ ಬ್ಯಾಗ್ ಮತ್ತು ಕೊಡೆಗಳನ್ನು ವಿತರಿಸಲಾಯಿತು. ಈ ಸಂದರ್ಭ ಕ್ಷೇತ್ರ ಶಿಕ್ಷಣ ಸಮನ್ವಯ ಅಧಿಕಾರಿ ಬಿಂದು ಮಾತನಾಡಿ, ಮುತ್ತಪ್ಪನ್ ಮಲಯಾಳಿ ಸಮಾಜ ಕಳೆದ 16 ವರ್ಷಗಳಿಂದ ಹಲವಾರು ಸಾಮಾಜಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡು ಬರುತಿದೆ.ಯಾರು ಒಳ್ಳೆಯ ಮನಸ್ಸಿನಿಂದ ಅಲ್ಪವಾದರೂ ದಾನ ಮಾಡುತ್ತಾರೋ ಅವರಲ್ಲಿ ಐಶ್ವರ್ಯ ತುಂಬುತ್ತಾ ಬರುತ್ತದೆ. ನಾವು ಹೋದ ನಂತರವೂ ನಾವು ಮಾಡಿದ ಒಳ್ಳೆಯತನವನ್ನು ಸಮಾಜ ನೆನಪಿಸಿಕೊಳ್ಳುತ್ತದೆ. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು. ಆದ್ದರಿಂದ ವಿದ್ಯಾರ್ಥಿಗಳು ಸಮಾಜಮುಖಿ ಕಾರ್ಯದಲ್ಲಿ ತೊಡಗಿಕೊಳ್ಳಬೇಕು ಎಂದು ಕರೆ ನೀಡಿದರು. ಶ್ರೀ ಮುತ್ತಪ್ಪನ್ ಮಲಯಾಳಿ ಸಮಾಜದ ಅಧ್ಯಕ್ಷ ಸುಮೇಶ್ ಮಾತನಾಡಿ, ನಮ್ಮ ಸಮಾಜ ಇಂದಿಗೆ 17 ವರ್ಷಗಳನ್ನು ಪೂರೈಸಿದೆ. ಮುಂದಿನ ಸೆ.27 ಮತ್ತು 28 ರಂದು ಸಮಾಜದ ವತಿಯಿಂದ ಓಣಂ ಹಬ್ಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಎಲ್ಲರೂ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ತಿಳಿಸಿದರು. ಮುಂದಿಯೂ ಸಮಾಜ ವತಿಯಿಂದ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಾಗಿ ಹೇಳಿದರು. ವಿದ್ಯೆಯನ್ನು ಯಾರು ಕಿತ್ತುಕೊಳ್ಳಲು ಸಾಧ್ಯವಿಲ್ಲ. ಎಲ್ಲರೂ ಚೆನ್ನಾಗಿ ವಿದ್ಯಾಭ್ಯಾಸ ಮಾಡಿ ಉನ್ನತ ಹುದ್ದೆಗಳನ್ನು ಅಲಂಕರಿಸುವ ಮೂಲಕ ಸಮಾಜಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವಂತೆ ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಶಿಕ್ಷಕ ವೃಂದದವರು ಮತ್ತು ಸಿಬ್ಬಂದಿಗಳು ಹಾಗೂ ಶ್ರೀ ಮುತ್ತಪ್ಪನ್ ಮಲಯಾಳಿ ಸಮಾಜದ ಕಾರ್ಯದರ್ಶಿ ಸಿ.ಆರ್.ಬಾಬು, ಸಲಹೆಗಾರರಾದ ಪಿ.ಜೆ.ವಿಶ್ವನಾಥ್, ಸಹ ಕಾರ್ಯದರ್ಶಿ ರಂಜಿತ್, ಸದಸ್ಯರಾದ ಮಂಜುನಾಥ್, ಪ್ರಸಾದ್, ರಾಜನ್, ಸಾಯಿ ಪ್ರಕಾಶ್, ಸುರೇಶ್ ಇನ್ನಿತರರು ಉಪಸ್ಥಿತರಿದ್ದರು.









