
ಮಡಿಕೇರಿ ಜು.11 NEWS DESK : ಕೊಡಗಿನ ಕಾಫಿ ಬೆಳೆಗಾರರಿಗೆ ಹಾಗೂ ರೈತರಿಗೆ ಬೆಳೆಹಾನಿ ಪರಿಹಾರದ ಹಣವನ್ನು ಬಿಡುಗಡೆ ಮಾಡಲು ಶಾಸಕದ್ವಯರು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕಾಫಿ ಮಂಡಳಿಯ ಸದಸ್ಯ ತಳೂರು ಎ.ಕಿಶೋರ್ ಕುಮಾರ್ ಅವರು ಒತ್ತಾಯಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಇತ್ತೀಚೆಗೆ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರು ಬೆಳೆಗಾರರ ನಿಯೋಗದೊಂದಿಗೆ ಕಾಫಿ ಮಂಡಳಿಯ ಅಧ್ಯಕ್ಷ ಎಂ.ಜೆ.ದಿನೇಶ್ ಅವರನ್ನು ಭೇಟಿಯಾಗಿ ಬೆಳೆಗಾರರು ಅನುಭವಿಸುತ್ತಿರುವ ಕಷ್ಟನಷ್ಟದ ಬಗ್ಗೆ ಮನವಿ ಸಲ್ಲಿಸಿರುವುದು ಹಾಸ್ಯಾಸ್ಪದವಾಗಿದೆ. ಶಾಸಕರು ಮನವಿ ಸಲ್ಲಿಸುವುದನ್ನು ಬಿಟ್ಟು ಸರಕಾರದ ಮೇಲೆ ಒತ್ತಡ ಹೇರಿ ರೈತರ ನೆರವಿಗೆ ಧಾವಿಸಬೇಕು ಎಂದು ಆಗ್ರಹಿಸಿದ್ದಾರೆ. ಇದೇ ಜು.3ರಂದು ಕಾಫಿ ಮಂಡಳಿಯ ಅಧ್ಯಕ್ಷ ಎಂ.ಜೆ.ದಿನೇಶ್ ಅವರು ಚಿಕ್ಕಮಗಳೂರು, ಉಡುಪಿ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ್ ಪೂಜಾರಿ, ಕಾಪು ವಿಧಾನಸಭಾ ಕ್ಷೇತ್ರದ ಶಾಸಕ ಸುರೇಶ್ ಶೆಟ್ಟಿ, ಕಾಫಿ ಮಂಡಳಿಯ ಸದಸ್ಯರು ಹಾಗೂ ಮಂಡಳಿಯ ಸಿ.ಇ.ಒ ಕುರ್ಮರಾವ್ ಅವರೊಂದಿಗೆ ದೆಹಲಿಗೆ ತೆರಳಿ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರನ್ನು ಭೇಟಿ ಮಾಡಿದ್ದಾರೆ. ಕಾಫಿ ಬೆಳಗಾರರು ಅನುಭವಿಸುತ್ತಿರುವ ಸಮಸ್ಯೆಗಳು ಮತ್ತು ಸವಾಲುಗಳ ಬಗ್ಗೆ ಮನವಿ ಸಲ್ಲಿಸಿ ನೆರವಿಗೆ ಬಂದು ಸಹಕಾರ ನೀಡಬೇಕೆಂದು ಕೋರಿಕೊಂಡಿದ್ದು, ಸಚಿವರು ಉತ್ತಮ ಸ್ಪಂದನೆ ನೀಡಿದ್ದಾರೆ. ಈಗಾಗಲೇ ಕೇಂದ್ರ ಸರಕಾರ ಎನ್.ಡಿ.ಆರ್.ಎಫ್ ಹಣವನ್ನು ರಾಜ್ಯ ಸರಕಾರಕ್ಕೆ ಬಿಡುಗಡೆ ಮಾಡಿದೆ. ಆದರೂ ಕೊಡಗಿನ ಇಬ್ಬರು ಶಾಸಕರು ಕಾಫಿ ಬೆಳೆಗಾರರ ನೆರವಿಗೆ ಬರುತ್ತಿಲ್ಲ ಎಂದು ಕಿಶೋರ್ ಕುಮಾರ್ ಟೀಕಿಸಿದ್ದಾರೆ. ಹಿಂದೆ ಬಿಜೆಪಿ ಸರಕಾರವಿದ್ದಾಗ ಶಾಸಕರುಗಳಾಗಿದ್ದ ಕೆ.ಜಿ.ಬೋಪಯ್ಯ ಹಾಗೂ ಎಂ.ಪಿ.ಅಪ್ಪಚ್ಚು ರಂಜನ್ ಅವರು ಕಾಫಿ ಬೆಳೆಗಾರರಿಗೆ ಕನಿಷ್ಟ 50 ಸಾವಿರ ರೂ. ಮತ್ತು 57 ಸಾವಿರ ರೂ.ಗಳನ್ನು ಎರಡು ವರ್ಷಗಳಲ್ಲಿ ಬಿಡುಗಡೆ ಮಾಡಿಸಿ ದೊಡ್ಡ ಸಾಧನೆಯನ್ನೇ ಮಾಡಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ರೈತರಿಗೆ ಯಾವುದೇ ಧನ ಸಹಾಯ ಸಿಕ್ಕಿರುವುದಿಲ ಮತ್ತು ಪರಿಹಾರದ ಹಣವನ್ನು ಕೂಡ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿದ್ದಾರೆ. ಆದ್ದರಿಂದ ಕೊಡಗಿನ ಶಾಸಕದ್ವಯರು ಕೇವಲ ಮನವಿಗಳನ್ನು ಸಲ್ಲಿಸಿ ಸುಮ್ಮನಾಗದೆ ರಾಜ್ಯ ಸರಕಾರದ ಮೇಲೆ ಒತ್ತಡ ಹೇರಿ ಕೇಂದ್ರ ಸರಕಾರ ಬಿಡುಗಡೆ ಮಾಡಿರುವ ಎನ್.ಡಿ.ಆರ್.ಎಫ್ ಹಣ ಬೆಳೆಗಾರರಿಗೆ ಹಂಚಿಕೆ ಮಾಡಲು ಕ್ರಮ ಕೈಗೊಳ್ಳಬೇಕು. ಅಲ್ಲದೆ ರಾಜ್ಯ ಸರಕಾರದಿಂದಲೂ ಪರಿಹಾರದ ಹಣವನ್ನು ಬಿಡುಗಡೆ ಮಾಡಬೇಕೆಂದು ಕಿಶೋರ್ ಕುಮಾರ್ ಒತ್ತಾಯಿಸಿದ್ದಾರೆ.









