
ನಾಪೋಕ್ಲು ಜು.16 NEWS DESK : ಯವಕಪಾಡಿ ಗ್ರಾಮದಲ್ಲಿ ಕಾಡಾನೆ ದಾಳಿಗೆ ತೆಂಗಿನ ಮರವೊಂದು ಮನೆ ಮೇಲೆ ಬಿದ್ದು ಅಪಾರ ಹಾನಿಯುಂಟಾದ ಘಟನೆ ಸೋಮವಾರ ರಾತ್ರಿ ನಡೆದಿದೆ. ಕಕ್ಕಬೆ ಕುಂಜಿಲ ಗ್ರಾಮ ಪಂಚಾಯಿತಿಯ ಯವಕಪಾಡಿ ಗ್ರಾಮದ ಕುಡಿಯರ ಕಾಲೋನಿಯಲ್ಲಿ ಸೋಮವಾರ ರಾತ್ರಿ ಕಾಡಾನೆ ದಾಂಧಲೆ ನಡೆಸಿದ್ದು, ಈ ವೇಳೆ ತೆಂಗಿನ ಮರವೊಂದು ಗ್ರಾಮದ ನಿವಾಸಿ ಕುಡಿಯರ ಗಣೇಶ್ ಅವರ ಮನೆಯ ಮೇಲೆ ಬಿದ್ದಿದೆ. ಇದರಿಂದಾಗಿ ಮನೆಯ ಒಂದು ಭಾಗಕ್ಕೆ ಸಂಪೂರ್ಣ ಹಾನಿಯಾಗಿದೆ. ಮಾತ್ರವಲ್ಲದೆ ಮನೆಯ ಸುತ್ತಮುತ್ತ ಅಡ್ಡಾಡಿ ಕೃಷಿಯನ್ನು ತಿಂದು ನಷ್ಟ ಮಾಡಿದೆ. ಕುಟುಂಬದ ಮಂದಿ ಕಾರ್ಯನಿಮಿತ್ತ ಬೇರೆಡೆ ತೆರಳಿದ್ದರಿಂದ ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ. ಮಡಿಕೇರಿ ತಾಲ್ಲೂಕು ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಕುಡಿಯರ ಮುತ್ತಪ್ಪ ಮಾತನಾಡಿ, ಕಾಡಾನೆ ದಾಳಿಯಿಂದ ಎರಡು ವರ್ಷದಿಂದ ಈ ಭಾಗದಲ್ಲಿ ವಾಸಿಸುವವರ ಮನೆ ಆಸ್ತಿ ನಾಶವಾಗಿದೆ. ಲಕ್ಷಾಂತರ ರುಪಾಯಿ ನಷ್ಟ ಸಂಭವಿಸಿದೆ. ಯವಕಪಾಡಿ, ಮರಂದೋಡ, ಕುಂಜಿಲ ಸೇರಿದಂತೆ ವಿವಿಧ ಗ್ರಾಮಗಳಲ್ಲಿನ ಕಾಫಿ ತೋಟಗಳು ಹಾನಿಯಾಗಿವೆ. ಇಲ್ಲಿ ಒಂಟಿ ಸಲಗ ಅಡ್ಡಾಡುತ್ತಿದ್ದು ಪ್ರತಿವರ್ಷ ಸಮಸ್ಯೆ ಆಗುತ್ತಿದೆ. ಒಂಟಿ ಸಲಗವನ್ನು ಹಿಡಿಯಲು ಕೇಂದ್ರ ಸರ್ಕಾರದಿಂದ ಆದೇಶವಾಗಿದ್ದರೂ ಅರಣ್ಯ ಇಲಾಖೆ ಆನೆ ಸೆರೆಹಿಡಿಯಲು ವಿಫಲವಾಗಿದೆ ಎಂದು ದೂರಿದರು. ಆನೆ ದಾಳಿಯಿಂದ ಹಾನಿಗೊಳಗಾದ ಮನೆಯನ್ನು ಪುನಃ ನಿರ್ಮಿಸಲು ಕುಟುಂಬಕ್ಕೆ ಆರ್ಥಿಕ ನೆರವು ನೀಡುವ ಅಗತ್ಯವಿದೆ. ಹತ್ತು ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಒತ್ತಾಯಿಸಿದರು. ಕಕ್ಕಬೆ ಕುಂಜಿಲ ಗ್ರಾಮ ಪಂಚಾಯಿತಿ ಸದಸ್ಯ ಕುಡಿಯರ ಭರತ್ ಚಂದ್ರ ದೇವಯ್ಯ ಮಾತನಾಡಿ, ಮನೆ ಮೇಲೆ ಮರಬಿದ್ದು ನಷ್ಟ ಸಂಭವಿಸಿದೆ. ಕಾಡಾನೆಗಳ ಉಪಟಳದಿಂದ ಸಂಕಷ್ಟ ಅರಿಯಲು ಅರಣ್ಯ ಇಲಾಖೆ ಸಿಬ್ಬಂದಿ ಯಾರೂ ಆಗಮಿಸಿಲ್ಲ. ಸಂತ್ರಸ್ತರಿಗೆ ಸ್ಥಳದಲ್ಲೇ ಪರಿಹಾರ ನೀಡುವ ಕಾರ್ಯವಾಗಬೇಕು ಎಂದು ಒತ್ತಾಯಿಸಿದರು. ಸಂತ್ರಸ್ತ ಕುಡಿಯರ ಗಣೇಶ್ ಸಹೋದರ ಕುಡಿಯರ ಬಿದ್ದಪ್ಪ ಮಾತನಾಡಿ, ಮುತ್ತಜ್ಜನ ಕಾಲದಿಂದ ಇಲ್ಲಿ ವಾಸವಿದ್ದು, ಕಳೆದ ರಾತ್ರಿ ಕಾಡಾನೆ ದಾಳಿಯಿಂದ ಮನೆ ಧ್ವಂಸವಾಗಿದೆ. ಸರ್ಕಾರ ಕಾಲೋನಿಗೆ ರಸ್ತೆ ನಿರ್ಮಿಸಿದ್ದು ಬಿಟ್ಟರೆ ಕಾಡುಪ್ರಾಣಿಗಳಿಂದ ಉಂಟಾಗುವ ಉಪಟಳಕ್ಕೆ ಯಾವುದೇ ಪರಿಹಾರ ನೀಡುತ್ತಿಲ್ಲ. ಕಾಡು ಪ್ರಾಣಿಗಳಿಂದ ಬಡಜನರು ಸಮಸ್ಯೆ ಅನುಭವಿಸುತ್ತಿದ್ದು, ಸರ್ಕಾರಕ್ಕೆ ಕಾಳಜಿ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವರದಿ : ದುಗ್ಗಳ ಸದಾನಂದ.









