
ಮಡಿಕೇರಿ ಜು.16 NEWS DESK : ಕೊಡಗು ಜಿಲ್ಲೆಯಲ್ಲಿ ಭಾರೀ ವಾಹನಗಳ ಸಂಚಾರವನ್ನು ನಿಷೇಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ, ಆದರೆ ಈ ಆದೇಶ ಹೊರ ಜಿಲ್ಲೆಯ ವಾಹನಗಳಿಗೆ ಅನ್ವಯವಾಗದೆ ಇರುವುದು ವಿಪರ್ಯಾಸ ಎಂದು ಕೂರ್ಗ್ ಲಾರಿ ಚಾಲಕರ ಮತ್ತು ಮಾಲೀಕರ ಸಂಘ ಅಸಮಾಧಾನ ವ್ಯಕ್ತಪಡಿಸಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಮಹಮ್ಮದ್ ಇಕ್ಬಾಲ್, ಮಳೆಯಿಂದ ಭೂಕುಸಿತ ಸಾಧ್ಯತೆ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಜು.6 ರಿಂದ ಆ.5ರ ವರೆಗೆ ಭಾರೀ ವಾಹನಗಳನ್ನು ನಿಷೇಧಿಸಿ ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದಾರೆ. ಆದರೂ ನಿಯಮವನ್ನು ಉಲ್ಲಂಘಿಸಿ ರಾತ್ರಿ ವೇಳೆ ಹೊರ ಜಿಲ್ಲೆಯ ಭಾರೀ ತೂಕದ ವಾಹನಗಳು ಮಡಿಕೇರಿ ಮೂಲಕ ಸಂಚರಿಸುತ್ತಿವೆ ಎಂದರು. ನಷ್ಟದ ನಡುವೆಯೂ ಜಿಲ್ಲಾಡಳಿತದ ಆದೇಶವನ್ನು ಜಿಲ್ಲೆಯ ಲಾರಿ ಚಾಲಕ ಹಾಗೂ ಮಾಲೀಕರು ಪಾಲಿಸುತ್ತಿದ್ದಾರೆ. ಆದರೆ ಹೊರ ಜಿಲ್ಲೆಯ ಭಾರೀ ವಾಹನಗಳು ಯಾವುದೇ ಆತಂಕವಿಲ್ಲದೆ ಸಂಚರಿಸುತ್ತಿವೆ. ಕೆಲವು ದಿನಗಳ ಹಿಂದೆ ಹೊರ ಜಿಲ್ಲೆಯ ವಾಹನಗಳನ್ನು ತಡೆದು ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಒಪ್ಪಿಸಲಾಗಿದೆ. ಆದರೂ ಭಾರೀ ವಾಹನಗಳು ಸಂಚರಿಸುತ್ತಿದ್ದು, ಜಿಲ್ಲಾಡಳಿತ ಯಾವುದೇ ಕಠಿಣ ಕಾನೂನು ಕ್ರಮ ಕೈಗೊಂಡಿಲ್ಲ. ಜಿಲ್ಲಾಧಿಕಾರಿಗಳ ಆದೇಶ ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ ಎಂಬಂತಾಗಿದೆ ಎಂದು ಟೀಕಿಸಿದರು. ಜಿಲ್ಲಾಡಳಿತದ ದ್ವಂದ್ವ ನಿಲುವನ್ನು ವಿರೋಧಿಸಿ ಜು.18 ರಂದು ಬೆಳಿಗ್ಗೆ 11 ಗಂಟೆಗೆ ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಕೂರ್ಗ್ ಲಾರಿ ಚಾಲಕರು ಮತ್ತು ಮಾಲೀಕರ ಸಂಘ, ಲೋಡರ್ಸ್ ಯೂನಿಯನ್, ಕ್ರೈನ್ ಚಾಲಕರು ಮತ್ತು ಮಾಲೀಕರು ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಲಾಗುವುದು. ಜಿಲ್ಲೆಯ ಭಾರೀ ವಾಹನಗಳ ಚಾಲಕರು ಮತ್ತು ಮಾಲೀಕರು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿಗಳ ಗಮನ ಸೆಳೆದು ಮನವಿ ಸಲ್ಲಿಸಲಾಗುವು ಎಂದು ಮಹಮ್ಮದ್ ಇಕ್ಬಾಲ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಕೂರ್ಗ್ ಲಾರಿ ಚಾಲಕರು ಮತ್ತು ಮಾಲೀಕರ ಸಂಘದ ಉಪಾಧ್ಯಕ್ಷ ಎಂ.ಅಶ್ರಫ್, ಕಾರ್ಯದರ್ಶಿ ಎಂ.ಅಜೀಝ್, ಕೊಡಗು ಟಿಂಬರ್ ಮರ್ಚೆಂಟ್ ಅಸೋಸಿಯೇಷನ್ ಕಾರ್ಯದರ್ಶಿ ಉರೈಸ್ ಹಾಗೂ ಖಜಾಂಚಿ ಶ್ಯಾಮ್ ಉಪಸ್ಥಿತರಿದ್ದರು.








