
ಮಡಿಕೇರಿ ಜು.23 NEWS DESK : ಸುಂಟಿಕೊಪ್ಪ ಗ್ರಾಮ ಪಂಚಾಯ್ತಿಯ ಉಪಾಧ್ಯಕ್ಷ ಸ್ಥಾನ ಮತ್ತು ಸದಸ್ಯ ಸ್ಥಾನದಿಂದ ವಜಾ ಗೊಳಿಸಿರುವ ಹಾಗೂ ಮುಂದಿನ ಆರು ವರ್ಷಗಳವರೆಗೆ ಯಾವುದೇ ಚುನಾವಣೆಯಲ್ಲಿ ಪಾಲ್ಗೊಳ್ಳದಂತೆ ನನ್ನ ವಿರುದ್ಧ ಪಂಚಾಯತ್ ರಾಜ್ ಇಲಾಖೆಯ ಅರೆ ನ್ಯಾಯಕ ನ್ಯಾಯಾಲಯ ನೀಡಿದ್ದ ಆದೇಶಕ್ಕೆ ರಾಜ್ಯ ಉಚ್ಚ ನ್ಯಾಯಾಲಯ ತಡೆಯಾಜ್ಞೆ ನೀಡಿದೆ ಎಂದು ಸುಂಟಿಕೊಪ್ಪ ಗ್ರಾ.ಪಂ ಸದಸ್ಯ ಕೆ.ಕೆ.ಪ್ರಸಾದ್ ಕುಟ್ಟಪ್ಪ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಚಾಯ್ತಿ ವ್ಯಾಪ್ತಿಯಲ್ಲಿ ನಡೆಯವ ಯಾವುದೇ ಕಾಮಗಾರಿ ಪಂಚಾಯ್ತಿ ಸಭೆ ಮತ್ತು ಗ್ರಾಮಸಭೆಯಲ್ಲಿ ಅನುಮೋದನೆಗೊಂಡು, ಇದಕ್ಕೆ ಪಿಡಿಒ, ಇಂಜಿನಿಯರ್ಗಳ ಸಮ್ಮತಿಯ ಬಳಿಕ ಜಾರಿಗೊಳ್ಳುತ್ತದೆ. ಹೀಗೆ ಅನುಷ್ಟಾನಗೊಂಡ ಕಾಮಗಾರಿಯ ಬಿಲ್ ಹಣದ ಪಾವತಿಯ ಹಕ್ಕು ತನ್ನದಾಗಿರುವುದಿಲ್ಲ. ಬದಲಾಗಿ ಅದು ಪಂಚಾಯ್ತಿಯ ಅಧಿಕಾರಿಗಳದ್ದಾಗಿರುತ್ತದೆ. ಹೀಗಿರುವಾಗ ತನ್ನ ವಿರುದ್ಧ ಬಂದಿರುವ ಆರೋಪಗಳಿಗೆ ಸಮಬಂಧಿಸಿದಂತೆ ಕಾನೂನು ಹೋರಾಟ ನಡೆಸುವುದಾಗಿ ಸ್ಪಷ್ಟಪಡಿಸಿದರು. ಸೋಲಾರ್ ದೀಪ ಅಳವಡಿಕೆಗೆ ಸಂಬಂಧಿಸಿದಂತೆ ಪರಿಶಿಷ್ಟರ ಅನುದಾನ ದುರುಪಯೋಗವಾಗಿದೆಯೆಂದು ಆರೋಪಿಸಿ ನಡೆದ ವ್ಯಾಜ್ಯದಲ್ಲಿ ಪಂಚಾಯತ್ ರಾಜ್ ಇಲಾಖೆಯ ಅರೆ ನ್ಯಾಯಕ ನ್ಯಾಯಾಲಯ ಪ್ರಸಕ್ತ ಸಾಲಿನ ಜೂ.25ರಂದು ತನ್ನ ಆದೇಶದಲ್ಲಿ, ಪಂಚಾಯ್ತಿ ಉಪಾಧ್ಯಕ್ಷ ಮತ್ತು ಸದಸ್ಯ ಸ್ಥಾನದಿಂದ ವಜಾ ಗೊಳಿಸಿ, ಚುನಾವಣೆಗೆ ನಿಲ್ಲದಂತೆ ಆದೇಶ ಹೊರಡಿಸಿತ್ತು. ಈ ತೀರ್ಪಿನ ವಿರುದ್ಧ ತಾನು ರಾಜ್ಯ ಉಚ್ಚ ನ್ಯಾಯಾಲಯದ ಮೊರೆ ಹೋಗಿದ್ದು, ಇದಕ್ಕೆ ಸಂಬಂಧಿಸಿದಂತೆ ಪಂಚಾಯತ್ ರಾಜ್ ಇಲಾಖೆಯ ಅರೆ ನ್ಯಾಯಕ ನ್ಯಾಯಾಲಯ ನೀಡಿದ್ದ ಆದೇಶಕ್ಕೆ ತಡೆಯಾಜ್ಞೆಯನ್ನು ನೀಡಲಾಗಿದೆ ಎಂದು ಕೆ.ಕೆ.ಪ್ರಸಾದ್ ಕುಟ್ಟಪ್ಪ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಗ್ರಾ.ಪಂ ಸದಸ್ಯರುಗಳಾದ ಕೆ.ಎಂ.ಆಲಿ ಕುಟ್ಟಿ, ಎ.ಶಬ್ಬೀರ್ ಹಾಗೂ ಗ್ರಾಮಸ್ಥರಾದ ಕೆ.ಕೆ. ಹರೀಶ್ ಕುಮಾರ್ ಉಪಸ್ಥಿತರಿದ್ದರು.









