
ಮಡಿಕೇರಿ ಜು.23 NEWS DESK : ರಾಜ್ಯದ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯಿಂದ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಬುಡಕಟ್ಟು ಆದಿವಾಸಿ ಆಶ್ರಮ ಶಾಲೆಯಲ್ಲಿ ಆದಿವಾಸಿ ಸಮುದಾಯದ ಶಿಕ್ಷಕರಿಗೆ ಆದ್ಯತೆ ನೀಡಬೇಕು ಮತ್ತು ನಿಯಮಗಳಲ್ಲಿ ಸಡಿಲಿಕೆ ನೀಡಿ ವಿದ್ಯಾರ್ಥಿಹತೆಗೆ ಅನುಗುಣವಾಗಿ ಖಾಯಂ ಹುದ್ದೆಗಳಿಗೆ ನಿಯುಕ್ತಿಗೊಳಿಸವಂತೆ ಬುಡಕಟ್ಟು ಕೃಷಿಕರ ಸಂಘ ಒತ್ತಾಯಿಸಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಪಿ.ಕೆ.ಸಿದ್ದಪ್ಪ, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನಾ ಪ್ರದೇಶಗಳಲ್ಲಿನ ಆದಿವಾಸಿ ಹಾಡಿ, ಕಾಲೋನಿಗಳಲ್ಲಿ ಪರಿಶಿಷ್ಟ ಪಂಗಡದ ಕಲ್ಯಾಣ ಇಲಾಖೆಯಿಂದ 119 ಆಶ್ರಮ ಶಾಲೆಗಳಿಗೆ ಸರ್ಕಾರದಿಂದ ಖಾಯಂ ಶಿಕ್ಷಕರನ್ನು ನೇಮಕ ಮಾಡದೇ ಇರುವುದರಿಂದ ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಹೊರಸಂಪನ್ಮೂಲ ವ್ಯವಸ್ಥೆಯ ಮೂಲಕ 450 ಶಿಕ್ಷಕರನ್ನು ನೇಮಿಸಿಕೊಳ್ಳಲಾಗಿದೆ. ಈ ಪೈಕಿ 32 ಮಂದಿ ಕಳೆದ ಹದಿನೈದು ವರ್ಷಗಳಿಗೂ ಅಧಿಕ ಅವಧಿಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು. ಕೊಡಗು ಜಿಲ್ಲೆಯ 11 ಶಾಲೆಗಳಲ್ಲಿ 6 ಮಂದಿ ಆದಿವಾಸಿ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಆಶ್ರಮ ಶಾಲೆಗಳಿಗೆ ಶಿಕ್ಷಕರು ಮತ್ತು ಅಡುಗೆ ಸಿಬ್ಬಂದಿಗಳ ನೇಮಕಾತಿ ಮಾಡಲಾಗುತ್ತಿದ್ದು, ಹೊರ ಸಂಪನ್ಮೂಲ ಎಂಬ ವ್ಯವಸ್ಥೆಯಡಿ ನೇಮಕಗೊಂಡ ಶಿಕ್ಷಕರಿಗೆ ಹೊಸ ನಿಯಮಗಳಿಂದ ಅತಂತ್ರ ಸ್ಥಿತಿಗೆ ಸಿಲುಕಿ ಹೊರಬೀಳುವ ಆತಂಕ ಎದುರಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಮೂಲ ಸೌಕರ್ಯಗಳಿಲ್ಲದೆ ಕಡಿಮೆ ವೇತನ ಪಡೆದು ಸೇವಾ ಅವಧಿಯ ಅಂಚಿಗೆ ತಲುಪಿರುವ ಆದಿವಾಸಿ ಮಹಿಳಾ ಶಿಕ್ಷಣದ ಸೇವೆಯನ್ನ ಕಾಯಕ ಮಾಡಿಕೊಂಡಿರುವ ಅದೇ ಸಮುದಾಯದ 32 ಮಂದಿ ಆದಿವಾಸಿಗಳಿಗೆ ಅವರು ಕರ್ತವ್ಯ ನಿರ್ವಹಿಸುತ್ತಿರುವ ಶಾಲೆಗಳಲ್ಲಿ ಹುದ್ದೆಗಳಿಗೆ ಸಮಾನವಾದ ವಿದ್ಯಾರ್ಹತೆಗೆ ಅನುಗುಣವಾಗಿ ಖಾಯಂ ನಿಯುಕ್ತಿಗೊಳಿಸಿ ಮುಂದುವರೆಸುವಂತೆ ಮನವಿ ಮಾಡಿದರು. ಈ ಆದಿವಾಸಿಗಳ ಶಿಕ್ಷಕರ ಬದುಕಿನ ಬೆಂಬಲಕ್ಕಾಗಿ ಅವರ ಸೇವಾ ಅವಧಿ, ವಯೋಮಿತಿ, ವಿದ್ಯಾರ್ಹತೆ ಅನುಗುಣವಾಗಿ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯಲ್ಲಿ ಸೃಜಿಸಿರುವ ಹಾಗೂ ನೇಮಕವಾಗದೆ ಖಾಲಿ ಇರುವ ಹುದ್ದೆಗಳಿಗೆ ನಿಯುಕ್ತಿಗೊಳಿಸಿ ಎಲ್ಲಾ ಸೌಲಭ್ಯಗಳು ದೊರೆಯುವಂತೆ ಮಾಡಬೇಕೆಂದು ಪಿ.ಕೆ.ಸಿದ್ದಪ್ಪ ಒತ್ತಾಯಿಸಿದರು. ಇದು ಅಸಾಧ್ಯವಾದಲ್ಲಿ 2025-26ನೇ ಸಾಲಿನಿಂದ 12ನೇ ತರಗತಿವರೆಗೆ ಶಿಕ್ಷಣ ಮೇಲ್ದರ್ಜೆಗೇರಿಸಲಾಗುವ ಐದು ಆಶ್ರಮ ಶಾಲೆಗಳಲ್ಲಿ ವಿವಿಧ ಹುದ್ದೆಗಳಿಗೆ 32 ಶಿಕ್ಷಕರನ್ನು ಅವರ ವಿದ್ಯಾರ್ಹತೆಗೆ ಅನುಗುಣವಾದ ಹುದ್ದೆಗೆ ನೇಮಕ ಮಾಡಿಕೊಂಡು ವೇತನ ಹಾಗೂ ಇತರ ಸೌಲಭ್ಯಗಳನ್ನು ಒದಗಿಸುವಂತೆ ಮನವಿ ಮಾಡಿದರು. 119 ಆಶ್ರಮ ಶಾಲೆಗಳಲ್ಲಿ ಖಾಲಿ ಇರುವ ಡಿ ಗ್ರೂಪ್ ಅಡುಗೆ ಸಿಬ್ಬಂದಿಗಳ ನೇಮಕಾತಿಯ ಸಂದರ್ಭದಲ್ಲಿ ಪ್ರತಿ ಶಾಲೆಗೆ ಒಂದು ಡಿ ಗ್ರೂಪ್ ಹುದ್ದೆಯನ್ನು ಆದಿವಾಸಿ ಶಿಕ್ಷಕರಿಗೆ ಮೀಸಲಿರಿಸಬೇಕು, ಆದ್ಯತೆ ಹಾಗೂ ನಿಯಮಗಳಲ್ಲಿ ಸಡಿಲಿಕೆ ನೀಡಿ ನೇಮಕಾತಿ ಮಾಡಿಕೊಳ್ಳುವಂತೆ ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ವಿರಾಜಪೇಟೆ ಗಿರಿಜನ ಲ್ಯಾಂಪ್ ಸಹಕಾರ ಸಂಘದ ಅಧ್ಯಕ್ಷ ಮಣಿಕಂಞ, ಕೊತೂರು ಆಶ್ರಮ ಶಾಲೆ ಶಿಕ್ಷಕರಾದ ಲಕ್ಷ್ಮಿ, ಪಿ.ಎಸ್.ಲಕ್ಷ್ಮಿ, ಮರೂರು ಆಶ್ರಮ ಶಾಲೆ ಶಿಕ್ಷಕಿ ಪಿ.ಎಸ್.ದಿವ್ಯ ಹಾಗೂ ಸಿ.ಬಿ.ಹಳ್ಳಿ ಆಶ್ರಮಶಾಲೆ ಶಿಕ್ಷಕಿ ಎಂ.ಪವಿತ್ರ ಉಪಸ್ಥಿತರಿದ್ದರು.








