
ವಿರಾಜಪೇಟೆ ಜು.23 NEWS DESK : ಸಂತ ಅನ್ನಮ್ಮ ವಿದ್ಯಾಸಂಸ್ಥೆಯಲ್ಲಿ ನೂತನ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನೆ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಯಿತು. ಶಾಲಾ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಸಂತ ಅನ್ನಮ್ಮ ವಿದ್ಯಾಸಂಸ್ಥೆಯ ವ್ಯವಸ್ಥಾಪಕರು ಹಾಗೂ ಸಂತ ಅನ್ನಮ್ಮ ದೇವಾಲಯದ ಪ್ರಧಾನ ಗುರುಗಳಾದ ರೆ.ಫಾ.ಜೇಮ್ಸ್ ಡೊಮಿನಿಕ್ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ವಿದ್ಯಾರ್ಥಿಗಳು ಶೈಕ್ಷಣಿಕ ಹಂತದಲ್ಲೇ ನಾಯಕತ್ವದ ಗುಣವನ್ನು ಬೆಳೆಸಿಕೊಳ್ಳಬೇಕು. ತಮ್ಮ ವ್ಯಕ್ತಿತ್ವ ವಿಕಸನವನ್ನು ಮಾಡುವುದರ ಮೂಲಕ ಶಾಲೆಗೂ ಪೋಷಕರಿಗೂ ಕೀರ್ತಿ ತರಬೇಕು ಎಂದರು. ಸಂತ ಅನ್ನಮ್ಮ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರು ಹಾಗೂ ಪದವಿ ಕಾಲೇಜಿನ ವ್ಯವಸ್ಥಾಪಕರಾದ ರೆ.ಫಾ.ಮದಲೈ ಮುತ್ತು ಮಾತನಾಡಿ, ವಿದ್ಯಾರ್ಥಿ ನಾಯಕರಿಗೆ ಸೇವಾ ಮನೋಭಾವನೆಯು ಅತೀ ಮುಖ್ಯ. ನಿಷ್ಕಲ್ಮಷ ಸೇವೆಯನ್ನು ಸಮಾಜಕ್ಕೆ ಸಲ್ಲಿಸಬೇಕು. ಅಹಂ ನ್ನು ತೊರೆದು ಸೇವಾ ಮನೋಭಾವನೆಯನ್ನು ಮೂಡಿಸಿಕೊಂಡು ಶಿಸ್ತನ್ನು ಮೈಗೂಡಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು. ಸಂತ ಅನ್ನಮ್ಮ ಪ್ರೌಢ ಶಾಲಾ ಮುಖ್ಯ ಶಿಕ್ಷಕರಾದ ಬೆನ್ನಿ ಜೋಸೆಫ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಸಿಸ್ಟರ್ ವಂದನಾ, ಕನ್ನಡ ವಿಭಾಗದ ಮುಖ್ಯಸ್ಥರಾದ ಸಿಸ್ಟರ್ ರೋಸಿ, ವಿದ್ಯಾರ್ಥಿ ಸಂಘದ ಉಪಾಧ್ಯಕ್ಷರಾದ ಶಿಕ್ಷಕ ಮುನೀರ್, ಕಾರ್ಯದರ್ಶಿ ಜ್ಯೋತಿ, ಟೀನಾ ಗೋನ್ಸಾಲ್ವೇಸ್, ದಿವ್ಯ ಡೀನ ಸಾಲ್ಡಾನ್ಹಾ ಸೇರಿದಂತೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. ಉಪಸ್ಥಿತರಿದ್ದರು. ಶಿಕ್ಷಕ ಗಂಗಾಧರ್ ನಿರೂಪಿಸಿದರು. ನಂತರ ವಿದ್ಯಾರ್ಥಿಗಳಿಂದ ಆಕರ್ಷಕವಾದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ನೂತನ ಪದಾಧಿಕಾರಿಗಳಿಗೆ ಪದಗ್ರಹಣ :: ನೂತನ ವಿದ್ಯಾರ್ಥಿ ನಾಯಕರುಗಳ ಪದಗ್ರಹಣ ವು ನಡೆಯಿತು. ಶಾಲಾ ನಾಯಕನಾಗಿ ಡೀನ್ ಸಾಲೋ ಡಿಸೋಜಾ, ಶಾಲಾ ನಾಯಕಿಯಾಗಿ ಜನನಿ, ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಸನಾ, ಕಾರ್ಯದರ್ಶಿಯಾಗಿ ಮೋನಿಷಾ, ಆರೋಗ್ಯ ಮಂತ್ರಿಯಾಗಿ ಚಹಲ್, ಉಪ ಆರೋಗ್ಯ ಮಂತ್ರಿಯಾಗಿ ಸಾರ, ಶಿಸ್ತಿನ ಮಂತ್ರಿಯಾಗಿ ಕಿರಣ್, ಉಪ ಶಿಸ್ತಿನ ಮಂತ್ರಿಯಾಗಿ ನಯನ, ಸಾಂಸ್ಕೃತಿಕ ಮಂತ್ರಿಯಾಗಿ ದಿಗಂತ್, ಉಪ ಸಾಂಸ್ಕೃತಿಕ ಮಂತ್ರಿಯಾಗಿ ವಿಮರ್ಶಾ, ಕ್ರೀಡಾ ಮಂತ್ರಿಯಾಗಿ ಅಭಿಜಿತ್, ಉಪ ಕ್ರೀಡಾ ಮಂತ್ರಿಯಾಗಿ ದೀಕ್ಷಿತ್ ಅವರಿಗೆ ಅತಿಥಿಗಳು ಬ್ಯಾಡ್ಜ್ ತೊಡಿಸಿ ಅಭಿನಂದಿಸಿದರು. ನೂತನ ಪದಾಧಿಕಾರಿಗಳು ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿದರು.









