
ಮಡಿಕೇರಿ ಜು.24 NEWS DESK : ಜೀವನದಿ ಕಾವೇರಿಯ ಉಗಮ ಸ್ಥಾನ ತಲಕಾವೇರಿ ಭಾಗದ ತ್ರಿವೇಣಿ ಸಂಗಮದ ಭಾಗಮಂಡಲ ಕ್ಷೇತ್ರದಲ್ಲಿ ಮಾತೆ ಕಾವೇರಿಗೆ ಬಾಗಿನ ಅರ್ಪಿಸುವ ‘ಪೊಲಿಂಕಾನ ಉತ್ಸವ’ ಶ್ರದ್ಧಾಭಕ್ತಿಯಿಂದ ಜರುಗಿತು. ಭಾಗಮಂಡಲದ ಶ್ರೀಭಗಂಡೇಶ್ವರ ದೇವಾಲಯದ ಮಹಾಗಣಪತಿ, ಮಹಾವಿಷ್ಣು, ಸುಬ್ರಹ್ಮಣ್ಯ ಹಾಗೂ ಭಗಂಡೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಬಾಳೆದಿಂಡಿನಿಂದ ತಯಾರಿಸಿದ ಸುಮಂಗಲಿ ಮಂಟಪಕ್ಕೆ ದೀಪ ಬೆಳಗಿ ಹರಶಿನ, ಕುಂಕುಮ, ಕರಿಮಣಿ, ತಾಳಿ, ಬಳೆ, ಸೀರೆ, ಬೆಳ್ಳಿತಟ್ಟೆ ಮತ್ತಿತರ ಆಭರಣವಿಟ್ಟು ಪೂಜೆ ಮಾಡಲಾಯಿತು. ನಂತರ ಶ್ರೀಭಗಂಡೇಶ್ವರ ದೇವಾಲಯದ ಸುತ್ತ ಪ್ರದಕ್ಷಿಣೆ ಬಂದು ವಾದ್ಯಗೋಷ್ಠಿಗಳೊಂದಿಗೆ ಕಾವೇರಿ, ಸುಜ್ಯೋತಿ ಹಾಗೂ ಕನ್ನಿಕೆ ನದಿಗಳ ತ್ರಿವೇಣಿ ಸಂಗಮಕ್ಕೆ ಬರಲಾಯಿತು. ನದಿಗೆ ವಿಶೇಷ ಪೂಜೆ ಸಲ್ಲಿಸಿ ಬಾಳೆದಿಂಡಿನಿಂದ ತಯಾರಿಸಿದ ಸುಮಂಗಲಿ ಮಂಟಪವನ್ನು ವಿಸರ್ಜಿಸಲಾಯಿತು. ನೂರಾರು ಭಕ್ತರು ‘ಪೊಲಿಂಕಾನ ಉತ್ಸವ’ ಕ್ಕೆ ಸಾಕ್ಷಿಯಾದರು. ಪ್ರತಿವರ್ಷ ಭೀಮನ ಅಮಾವಾಸ್ಯೆಯಂದು ‘ಪೊಲಿಂಕಾನ ಉತ್ಸವ’ ವನ್ನು ಆಚರಿಸಿ ತ್ರಿವೇಣಿ ಸಂಗಮದಲ್ಲಿ ತಾಯಿ ಕಾವೇರಿಗೆ ಬಾಗಿನ ಅರ್ಪಿಸುವ ಪದ್ಧತಿಯನ್ನು ಬಹಳ ಹಿಂದಿನಿಂದಲೂ ಆಚರಿಸಿಕೊಂಡು ಬರಲಾಗುತ್ತಿದೆ. ಉತ್ತಮ ಮಳೆಯಾಗಿ ನಾಡಿಗೆ ಸಮೃದ್ಧಿಯನ್ನು ನೀಡುವ ಕಾವೇರಿ ಮಾತೆಗೆ ವಿಶೇಷ ಪ್ರಾರ್ಥನೆಯ ಮೂಲಕ ಕೃತಜ್ಞತೆಯನ್ನು ಸಲ್ಲಿಸಲಾಗುತ್ತದೆ ಮತ್ತು ಜನರಿಗೆ ಅಭ್ಯುದಯವನ್ನು ನೀಡು ಎಂದು ಬೇಡಲಾಗುತ್ತದೆ. ಇಂದು ನಡೆದ ‘ಪೊಲಿಂಕಾನ ಉತ್ಸವ’ ದಲ್ಲಿ ತಲಕಾವೇರಿ ದೇವಾಲಯದ ತಕ್ಕ ಮುಖ್ಯಸ್ಥ ಕೋಡಿ ಮೋಟಯ್ಯ, ಶ್ರೀ ಭಗಂಡೇಶ್ವರ ದೇವಾಲಯದ ತಕ್ಕ ಮುಖ್ಯಸ್ಥ ಬಲ್ಲಡ್ಕ ಅಪ್ಪಾಜಿ, ಶ್ರೀ ಭಗಂಡೇಶ್ವರ ದೇವಾಯಲಯದ ಪ್ರಧಾನ ಅರ್ಚಕರಾದ ಹರೀಶ್ ಭಟ್, ರವಿಕುಮಾರ್ ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.









