
ಮಡಿಕೇರಿ ಜು.24 NEWS DESK : ನ್ಯಾಷನಲ್ ಮೆಡಿಕೋಸ್ ಆರ್ಗನೈಸೇಷನ್(ಎನ್‍ಎಂಓ)ನ ಕೊಡಗು ಘಟಕ ಮತ್ತು ಕೊಡಗು ಸಂಸ್ಕೃತಿ ಸಿರಿ ಬಳಗ ಟ್ರಸ್ಟ್ ನ ಸಂಯುಕ್ತಾಶ್ರಯದಲ್ಲಿ ಜು.27ರಂದು ನಗರದಲ್ಲಿ ಪೌರ ಕಾರ್ಮಿಕರು ಹಾಗೂ ಇತರ ಕಾರ್ಮಿಕರಿಗಾಗಿ ಉಚಿತ ವೈದ್ಯಕೀಯ ಶಿಬಿರ ನಡೆಯಲಿದೆ ಎಂದು ಟ್ರಸ್ಟ್ ನ ಅಧ್ಯಕ್ಷರಾದ ಈರಮಂಡ ಹರಿಣಿ ವಿಜಯ್ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ನಗರದ ನಗರಸಭೆಯ ಸ್ಥಾಯಿ ಸಮಿತಿಗೆ ಮೀಸಲಾದ ಸಭಾಂಗಣದಲ್ಲಿ ಬೆಳಿಗ್ಗೆ 10 ಗಂಟೆಗೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಶಿಬಿರ ನಡೆಯಲಿದೆ ಎಂದರು. ಸಂಸ್ಕೃತಿ ಸಿರಿ ಬಳಗ ಆರೋಗ್ಯದ ಅರಿವು, ಶಿಕ್ಷಣ ಮತ್ತು ಸಂಸ್ಕೃತಿಯ ಅರಿವು ಮೂಡಿಸುವ ಪ್ರಮುಖ ಧ್ಯೇಯದೊಂದಿಗೆ ಕಾರ್ಯನಿರ್ವಹಿಸುತ್ತಿದೆ.ಟ್ರಸ್ಟ್ ಈಗಾಗಲೆ ಎನ್‍ಎಂಓ ಸಹಕಾರದೊಂದಿಗೆ ಕೆಲ ಆರೋಗ್ಯ ಶಿಬಿರಗಳನ್ನು ಯಶಸ್ವಿಯಾಗಿ ಆಯೋಜಿಸಿದೆ. ಇದೀಗ ನಗರ ಸ್ವಚ್ಛತೆಯ ಕಾರ್ಯದಲ್ಲಿ ತಮ್ಮನ್ನು ಬಿರು ಮಳೆಯ ನಡುವೆಯೂ ತೊಡಗಿಸಿಕೊಂಡಿರುವ ಪೌರಕಾರ್ಮಿಕರ ಆರೋಗ್ಯ ರಕ್ಷಣೆಗಾಗಿ ಶಿಬಿರವನ್ನು ಆಯೋಜಿಸುತ್ತಿರುವುದಾಗಿ ತಿಳಿಸಿದರು. ಎನ್‍ಎಂಓ ಜಿಲ್ಲಾಧ್ಯಕ್ಷ ಡಾ.ಮೋಹನ್ ಅಪ್ಪಾಜಿ ಮಾತನಾಡಿ, ಶಿಬಿರದಲ್ಲಿ 35 ವರ್ಷ ಮೇಲ್ಪಟ್ಟ ಪೌರಕಾರ್ಮಿಕರು ಮತ್ತು ಕಾರ್ಮಿಕರಿಗೆ ಮಧುಮೇಹ ಮತ್ತು ಅಧಿಕ ರಕ್ತದೊತ್ತಡದ ತಪಾಸಣೆ ನಡೆಯಲಿದೆ. ಅಲ್ಲದೇ ಕಬ್ಬಿಣ ಮತ್ತು ಪೋಲಿಕ್ ಆಮ್ಲ ಮಾತ್ರೆ ಹಾಗೂ ಜಂತುಹುಳು ನಿವಾರಣಾ ಮಾತ್ರೆಗಳನ್ನು ಉಚಿತವಾಗಿ ವಿತರಿಸಲಾಗುತ್ತದೆ ಎಂದು ಹೇಳಿದರು. ಎನ್‍ಎಂಓ ಸಂಘಟನೆ ಪ್ರಮುಖವಾಗಿ ಗಿರಿಜನರು, ಪೌರಕಾರ್ಮಿಕರ ಆರೋಗ್ಯ ರಕ್ಷಣೆಗೆ ಸಂಬಂಧಿಸಿದಂತೆ ಹಲವಾರು ಶಿಬಿರಗಳನ್ನು ನಡೆಸಿಕೊಂಡು ಬಂದಿದೆ. ಪೌರಕಾರ್ಮಿಕರು ಹಾಗೂ ಕಾರ್ಮಿಕರ ಆರೋಗ್ಯ ತಪಾಸಣಾ ಶಿಬಿರದಲ್ಲಿ ಐದಾರು ತಜ್ಞ ವೈದ್ಯರು ತಪಾಸಣೆ ನಡೆಸಲಿದ್ದು, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ವೈದ್ಯಕೀಯ ವಿದ್ಯಾರ್ಥಿಗಳು, ವಿರಾಜಪೇಟೆಯ ದಂತ ವೈದ್ಯಕೀಯ ಮಹಾ ವಿದ್ಯಾಲಯದ ವೈದ್ಯಕೀಯ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ. ಆಸಕ್ತ ಪೌರ ಕಾರ್ಮಿಕರು, ಕಾರ್ಮಿಕರು ಶಿಬಿರದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದ ಅವರು, ತಪಾಸಣೆಗೆ ಬರುವ ಸಂದರ್ಭ ತಮ್ಮ ಬಳಿ ಇರುವ ಹಳೆಯ ಆರೋಗ್ಯ ತಪಾಸಣೆಯ ದಾಖಲೆಗಳಿದ್ದಲ್ಲಿ ತರುವಂತೆ ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಬಳಗದ ಟ್ರಸ್ಟಿ ಕೆ.ಎಂ.ಗಣೇಶ್, ಖಜಾಂಚಿ ಕೂಡಂಡ ಸೀಮಾ ಕಾವೇರಪ್ಪ, ಪ್ರಮುಖರಾದ ಕೋಲೆಯಂಡ ನಿಶಾ ಮೋಹನ್ ಹಾಗೂ ಡೆನ್ನಿ ಬರೋಸ್ ಉಪಸ್ಥಿತರಿದ್ದರು.









