
ಮಡಿಕೇರಿ ಜು.26 NEWS DESK : ಮಡಿಕೇರಿ ಕೊಡವ ಸಮಾಜ, ಕೊಡವ ಸಮಾಜ ಪೊಮ್ಮಕ್ಕಡ ಒಕ್ಕೂಟ ಮತ್ತು ನಗರದ ಕೊಡವ ಕೇರಿಗಳ ಸಂಯುಕ್ತಾಶ್ರಯದಲ್ಲಿ ಆ.3 ರಂದು ಸಾಂಪ್ರದಾಯಿಕ 8ನೇ ವರ್ಷದ ‘ಕಕ್ಕಡ ಒತ್ತೊರ್ಮೆ ಕೂಟ’ವನ್ನು ಆಯೋಜಿಸಲಾಗಿದೆ ಎಂದು ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಎಂ.ಪಿ.ಮುತ್ತಪ್ಪ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಗಾರಿನ ಅವಧಿಯಲ್ಲಿ ಬರುವ ಕಕ್ಕಡ ಮಾಸದಲ್ಲಿ, ದೇಹದ ಉಷ್ಣತೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಮದ್ದ್ ಸೊಪ್ಪು ಮತ್ತಿತರ ಖಾದ್ಯ ಪದಾರ್ಥಗಳನ್ನು ಮಾಡಲಾಗುತ್ತದೆ. ಇವುಗಳನ್ನು ಯುವ ಸಮೂಹಕ್ಕೆ ಪರಿಚಯಿಸುವ ಉದ್ದೇಶದಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು. ಅಂದು ಬೆಳಗ್ಗೆ 10 ಗಂಟೆಗೆ ನಗರದ ಕೊಡವ ಸಮಾಜದ ಸಭಾಂಗಣದಲ್ಲಿ ಕಕ್ಕಡ ನಮ್ಮೆ ಒತ್ತೊರ್ಮೆ ಕೂಟ ಆರಂಭಗೊಳ್ಳಲಿದೆ. ಜಿಲ್ಲೆಯ ಶಾಸಕರುಗಳಾದ ಎ.ಎಸ್.ಪೊನ್ನಣ್ಣ ಹಾಗೂ ಡಾ.ಮಂತರ್ ಗೌಡ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಎಂಎಲ್‍ಸಿ ಶಾಂತೆಯಂಡ ವೀಣಾ ಅಚ್ಚಯ್ಯ, ಸಮಾಜ ಸೇವಕಿ ಕಾಂಚನ ಪೊನ್ನಣ್ಣ ಹಾಗೂ ಸಮಾಜ ಸೇವಕಿ ದಿವ್ಯಾ ಮಂತರ್ ಗೌಡ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕಕ್ಕಡ ಪದಿನೆಟ್ಟ್ ವಿಶೇಷತೆಯ ಬಗ್ಗೆ ಉಪನ್ಯಾಸಕಿ ಅಜ್ಜಿಕುಟ್ಟೀರ ಸುನಿತಾ ಗಿರೀಶ್ ಅವರು ವಿಚಾರ ಮಂಡನೆ ಮಾಡಲಿದ್ದಾರೆ. ಈ ಸಂದರ್ಭ ಕಕ್ಕಡ ನಮ್ಮೆಗೆ ಸಂಬಂಧಿಸಿದಂತೆ ಖಾದ್ಯ ಪದಾರ್ಥಗಳ ತಯಾರಿಯ ಸ್ಪರ್ಧೆಯೂ ನಡೆಯಲಿದೆ ಎಂದು ತಿಳಿಸಿದರು. ಕೊಡವ ಸಮಾಜದ ಪೊಮ್ಮಕ್ಕಡ ಕೂಟದ ಅಧ್ಯಕ್ಷರಾದ ಕನ್ನಂಡ ಕವಿತಾ ಬೊಳ್ಳಪ್ಪ ಮಾತನಾಡಿ, ಪೊಮ್ಮಕ್ಕಡ ಕೂಟದಿಂದ ವರ್ಷಂಪ್ರತಿ ಕಾರ್ಯಕ್ರಮವನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ. ಮಡಿಕೇರಿ ಕೊಡವ ಸಮಾಜ ಮತ್ತು ನಗರದ 12 ಕೊಡವ ಕೇರಿಗಳ ಸಹಕಾರದೊಂದಿಗೆ ಈ ಬಾರಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ ಎಂದರು.
*ವಿವಿಧ ಸ್ಪರ್ಧೆ* :: ಕಾರ್ಯಕ್ರಮದ ಅಂಗವಾಗಿ ಮಡಿಕೇರಿ ಕೊಡವ ಸಮಾಜಕ್ಕೆ ಒಳಪಟ್ಟ ಸದಸ್ಯರಿಗೆ ಮುಂಗಾರಿನ ಅವಧಿಯ ವಿವಿಧ ಖಾದ್ಯ ಪದಾರ್ಥಗಳ ತಯಾರಿಯ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಮದ್ದ್ ಪಾಯಸ, ಮದ್ದ್ ಸೊಪ್ಪಿನ ನೀರಿನಲ್ಲಿ ಮಾಡುವ ವಿವಿಧ ಖಾದ್ಯ ಪದಾರ್ಥ(ಮದ್ದ್ ಪುಟ್ಟ್..), ನಾಡ್ ಕುಮ್ಮು ಕರಿ, ಬೈಂಬಳೆ ಕರಿ, ಮಾಂಗೆ ಕರಿ, ಮುದ್‍ರೆ ಕಣ್ಣಿ, ಞಂಡ್ ಕರಿ, ಕೋಳಿ ಕರಿ, ಪಂದಿ ಕರಿ, ಕೊಯಿಲೆ ಪಚ್ಚೆ ಮೀನ್ ಕರಿ, ಚಕ್ಕೆ ಕುರು ಪಜ್ಜಿ, ಕೈಪುಳಿ ಪಜ್ಜಿ ತಯಾರಿ ಸ್ಪರ್ಧೆಗಳು ನಡೆಯಲಿದೆ. ಇದರಲ್ಲಿ ಪಾಲ್ಗೊಳ್ಳಲು ಇಚ್ಛಿಸುವವರು ಜು.30ರ ಒಳಗಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕೆಂದು ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಮಡಿಕೇರಿ ಕೊಡವ ಸಮಾಜದ ಗೌರವ ಕಾರ್ಯದರ್ಶಿ ಕನ್ನಂಡ ಸಂಪತ್, ಜಂಟಿ ಕಾರ್ಯದರ್ಶಿ ನಂದಿನೆರವಂಡ ದಿನೇಶ್, ಪೊಮ್ಮಕ್ಕಡ ಒಕ್ಕೂಟದ ಕಾರ್ಯದರ್ಶಿ ಕೂಪದಿರ ಜೂನ ವಿಜಯ್, ಖಜಾಂಚಿ ಉಳ್ಳಿಯಡ ಸಚಿತ ನಂಜಪ್ಪ ಹಾಗೂ ಸಮಾಜದ ಮೂವೇರ ಜಯರಾಂ ಉಪಸ್ಥಿತರಿದ್ದರು.








