
ಸೋಮವಾರಪೇಟೆ NEWS DESK ಜು.27 : ಅತಿಯಾದ ಮಳೆಯಿಂದ ಬರೆಕುಸಿಯುವ ಭೀತಿಯಿಂದ ಮುಂಜಾಗ್ರತೆಯಾಗಿ ಪಟ್ಟಣ ಬಸ್ಸ್ ನಿಲ್ದಾಣದ 5 ಅಂಗಡಿಗಳನ್ನು ತಹಸೀಲ್ದಾರ್ ಕೃಷ್ಣ ಮೂರ್ತಿ ಇಂದು ಖಾಲಿಮಾಡಿಸಿ ಬೀಗ ಜಡಿದಿದ್ದಾರೆ. ಕಳೆದ ನಾಲ್ಕೈದು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆ,ರಭಸದ ಗಾಳಿಯಿಂದ ಅಲ್ಲಲ್ಲಿ ಮರಗಳು,ಮನೆಗಳು ಧರೆಗುರುಳಿವೆ.ಪಟ್ಟಣದ ಮಡಿಕೇರಿ ರಸ್ತೆಯಲ್ಲಿರುವ ಬಸಪ್ಪ ಪೆಟ್ರೋಲ್ ಬಂಕ್ ಹಿಂಬಾಗದಲ್ಲಿ ತಡೆಗೋಡೆ ನಿರ್ಮಿಸಲು ಮಣ್ಣು ತೆಗೆದು ಹಲವು ಸಮಯಗಳಾಗಿದ್ದರೂ ಈ ವರೆಗೆ ಕಾಮಗಾರಿ ನಡೆಸದ ಹಿನ್ನಲೆಯಲ್ಲಿ ಭಾರಿ ಮಳೆಯಿಂದ ಬರೆಕುಸಿಯುವ ಭೀತಿ ಎದುರಾಗಿದೆ ಇದರ ಮೇಲ್ಭಾಗದಲ್ಲಿ ಖಾಸಗಿ ಬಸ್ ನಿಲ್ದಾಣದಲ್ಲಿರುವ ತರಕಾರಿ ಅಂಗಡಿ,ಪಟ್ಟಣ ಪಂಚಾಯ್ತಿ ಸದಸ್ಯ ಸಂಜೀವ ಅವರದ್ದು ಸೇರಿದಂತೆ 5 ಅಂಗಡಿಗಳು ಅಪಾಯಕಾರಿ ಸ್ಥಿತಿಯಲ್ಲಿದ್ದು ಈಬಗ್ಗೆ ಗಮನ ಹರಿಸಿದ ತಾಲೂಕು ದಂಡಾಧಿಕಾರಿ ಕೃಷ್ಣಮೂರ್ತಿಯವರು ಸ್ಥಳಕ್ಕೆ ತೆರಳಿ ವಿಪತ್ತು ನಿರ್ವಹಣಾ ಕಾಯಿದೆಯಡಿ ಎಚ್ಚರಿಕೆ ಹಾಗೂ ಮಾಹಿತಿ ನೀಡಿ ತಕ್ಷಣವೇ ಎಲ್ಲಾ ಅಂಗಡಿಗಳನ್ನು ತಕ್ಷಣವೇ ಖಾಲಿಮಾಡಿಸಿ ಬೀಗ ಜಡಿದಿದ್ದಾರೆ. ವಿಪತ್ತು ನಿರ್ವಹಣಾ ಕಾಯಿದೆಯಡಿ ಅಂಗಡಿಗಳನ್ನು ಖಾಲಿ ಮಾಡಿಸಿದ್ದೇವೆ, ಬರೆ ಕುಸಿಯದಂತೆ ತಾತ್ಕಾಲಿಕವಾಗಿ ಟಾರ್ಪಲ್ ಹಾಕಲಾಗಿದೆ ಎಂದು ತಹಶೀಲ್ದಾರ್ ಹೇಳಿದರು. ಈ ಸಂದರ್ಭ ವೃತ್ತ ನಿರೀಕ್ಷಕ ಮುದ್ದುಮಾದೇವ ಹಾಜರಿದ್ದರು.








