
ಮಡಿಕೇರಿ ಜು.29 NEWS DESK : ಹೈ ಫೈವ್ ಸ್ಟುಡಿಯೋಸ್ ಮತ್ತು ಎಸಿಇ 22 ಪ್ರೊಡಕ್ಷನ್ಸ್ ಲಾಂಛನದಲ್ಲಿ ಸಿದ್ಧವಾಗಿರುವ ಕೊಡಗಿನ ಪರಿಸರದಲ್ಲಿ ಚಿತ್ರೀಕರಣಗೊಂಡಿರುವ ‘ಎಲ್ಟು ಮುತ್ತಾ’ ಕನ್ನಡ ಚಲನಚಿತ್ರ ಇದೇ ಆ.1ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ ಎಂದು ಚಿತ್ರ ನಿರ್ಮಾಪಕ ಸತ್ಯ ಶ್ರೀನಿವಾಸ್ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಚಲನಚಿತ್ರದ ‘ಟೀಸರ್’ ಬಿಡುಗಡೆ ಮಾಡಿ ಮಾತನಾಡಿದ ಅವರು, ಕೊಡಗಿನ ನೆಲಜಿ ಗ್ರಾಮದ ಬಾಳಿಯಡ ಮಣಿ ಅಯ್ಯಪ್ಪ ಅವರ ಪುತ್ರ ರಾ.ಸೂರ್ಯ ಚಿತ್ರವನ್ನು ನಿರ್ದೇಶಿಸಿದ್ದಾರೆ. ಸುಮಾರು 75 ಚಿತ್ರಮಂದಿರಗಳಲ್ಲಿ ಏಕಕಾಲಕ್ಕೆ ಚಲನಚಿತ್ರ ಬಿಡುಗಡೆಯಾಗಲಿದೆ. ಕೊಡಗಿನ ಸಿದ್ದಾಪುರ, ಶನಿವಾರಸಂತೆ, ಸುಂಟಿಕೊಪ್ಪ ಚಿತ್ರಮಂದಿರಗಳಲ್ಲು ಚಿತ್ರ ಪ್ರದರ್ಶನ ಅದೇ ದಿನ ನಡೆಯಲಿದೆ ಎಂದರು. ಹುಬ್ಬಳ್ಳಿಯಲ್ಲಿ ಅದ್ಧೂರಿಯಾಗಿ ಚಲನಚಿತ್ರದ ಆಡಿಯೋ ಲಾಂಚ್ ಮಾಡಲಾಗಿದ್ದು, ಉತ್ತಮ ಪ್ರತಿಕ್ರಿಯೆ ದೊರಕಿದೆ. ಚಲನಚಿತ್ರದಲ್ಲಿ 5 ಹಾಡುಗಳು ಮತ್ತು 2 ಫೈಟ್ ಗಳಿದ್ದು, ಜನರ ಮನರಂಜನೆಗೆ ಪೂರಕವಾದ ಎಲ್ಲಾ ಅಂಶಗಳು ಇರುವುದಾಗಿ ತಿಳಿಸಿದರು. ಚಲನಚಿತ್ರದ ಪ್ರಮುಖ ಪಾತ್ರಗಳಲ್ಲಿ ಶೌರ್ಯ ಪ್ರತಾಪ್, ಪ್ರಿಯಾಂಕ ಮಳಲಿ ಅವರು ನಟಿಸಿದ್ದಾರೆ. ಇವರೊಂದಿಗೆ ರುಹಾನ್ ಆರ್ಯ, ಕಾಕ್ರೋಚ್ ಸುಧಿ, ನವೀನ್ ಪಡೀಲ್, ರಾಮ್, ಧನು ದೇವಯ್ಯ, ಸಾಮ್ರಾಟ್, ಪ್ರಶಾಂತ್, ತಾರಕ್, ಅವಿರೇಶ್, ಜೋಗಿ ರವಿ ಅಭಿನಯಿಸಿದ್ದಾರೆ. ಕೊಡಗಿನ 13 ಮಂದಿ ಕಲಾವಿದರು ವಿವಿಧ ಪಾತ್ರಗಳಲ್ಲಿ ಕಾಣಿಸಿಕೊಂಡಿರುವುದು ವಿಶೇಷ ಎಂದರು. ಯುವನಟ ಶೌರ್ಯ ಪ್ರತಾಪ್ ಮುಖ್ಯ ಪಾತ್ರ ನಿರ್ವಹಿಸಿರುವುದಲ್ಲದೆ, ಸಹ ನಿರ್ದೇಶಕರಾಗಿ ಸಾಥ್ ನೀಡಿದ್ದಾರೆ. ಪ್ರಸನ್ನ ಕೇಶವ ಅವರು ಸಂಗೀತ ನೀಡಿರುವ ಈ ಚಿತ್ರದಲ್ಲಿ ಮೇಯಪ್ಪ ಭಾಸ್ಕರ್ ಛಾಯಾಗ್ರಹಣ ಮಾಡಿದ್ದು, ಕೆ.ಯೇಸು ಸಂಕಲನ ಕಾರ್ಯನಿರ್ವಹಿಸಿದ್ದಾರೆ ಎಂದು ಸತ್ಯ ಶ್ರೀನಿವಾಸ್ ತಿಳಿಸಿದರು. ಸುದ್ದಿಗೊಷ್ಠಿಯಲ್ಲಿ ಚಿತ್ರ ನಿರ್ದೇಶಕ ರಾ.ಸೂರ್ಯ, ಸಹ ನಿರ್ಮಾಪಕ ಕೂಪದಿರ ಪವೀಂದ್ರ ಮುತ್ತಪ್ಪ, ನಟರಾದ ಶೌರ್ಯ ಪ್ರತಾಪ್, ರುಹಾನ್ ಆರ್ಯ ಹಾಗೂ ಧನು ದೇವಯ್ಯ ಉಪಸ್ಥಿತರಿದ್ದರು.









