
ಮಡಿಕೇರಿ ಜು.31 NEWS DESK : ಕುಶಾಲನಗರ ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ವತಿಯಿಂದ ಬಸವನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಡೆಂಗ್ಯೂ ವಿರೋಧಿ ಮಾಸಾಚರಣೆ ಆಚರಿಸಲಾಯಿತು. ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದ ವೈದ್ಯಾಧಿಕಾರಿ ಡಾ.ಭರತ್ ಮಾತನಾಡಿ, ಪ್ರತಿಯೊಬ್ಬರೂ ವೈಯಕ್ತಿಕ ಹಾಗೂ ಪರಿಸರ ಶುಚಿತ್ವ, ರಕ್ತ ಹೀನತೆ ಬಗ್ಗೆ ಮಾಹಿತಿ ನೀಡಿದರು. ತಾಲ್ಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಿಶ್ವಜ್ಞಾ ಮಾತನಾಡಿ, ಡೆಂಗ್ಯೂ ಜ್ವರದ ಲಕ್ಷಣಗಳ ಬಗ್ಗೆ ಹಾಗೂ ಮುಂಜಾಗ್ರತಾ ಕ್ರಮಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿ ಅತಿಸಾರ ಭೇದಿ ನಿಯಂತ್ರಣಾ ಕಾರ್ಯಕ್ರಮದ ಬಗ್ಗೆ ತಿಳಿಸಿದರು. ಡೆಂಗ್ಯೂ, ಮಲೇರಿಯಾ ಜ್ವರ ಶೀಘ್ರವಾಗಿ ಪತ್ತೆ ಹಚ್ಚಿ ಸಂಪೂರ್ಣವಾದ ಚಿಕಿತ್ಸೆಯನ್ನು ನೀಡುವುದರ ಮೂಲಕ ಗುಣಪಡಿಸಬಹುದು ಎಂದು ತಿಳಿಸಿದ ಅವರು, ಮಲೇರಿಯಾ ಜ್ವರದ ಲಕ್ಷಣಗಳ ಬಗ್ಗೆ ಮತ್ತು ಚಿಕಿತ್ಸೆ ಯ ಬಗ್ಗೆ ಸೊಳ್ಳೆಗಳ ಜೀವನ ಚಕ್ರದ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿದರು. ಸಂಚಾರಿ ಗಿರಿಜನ ಆರೋಗ್ಯ ಘಟಕದ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜನಾರ್ಧನ ರಾವ್ ಕದಂ ಮಾತನಾಡಿ ಚಿಕೂನ್ ಗುನ್ಯಾ ಜ್ವರದ ಬಗ್ಗೆ ಹಾಗೂ ರಾಷ್ಟ್ರೀಯ ಕ್ಷಯರೋಗ ನಿರ್ಮೂಲನ ಕಾರ್ಯಕ್ರಮ, ರಾಷ್ಟ್ರೀಯ ಕುಷ್ಟರೋಗ ನಿರ್ಮೂಲನ ಕಾರ್ಯಕ್ರಮ, ನಾಯಿ ಕಡಿತ ಹಾಗೂ ಹಾವು ಕಡಿತದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು. ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿಗಳಾದ ಸೌಮ್ಯ ಮಾತನಾಡಿ ಎಲ್ಲಾ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮ, ಪರಿಸರ ಸ್ವಚ್ಛತೆ, ನೀರಿನ ಸ್ವಚ್ಛತೆ ಹಾಗೂ ಆರೋಗ್ಯ ಶಿಕ್ಷಣದ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ಹಿರಿಯ ಫಾರ್ಮಸಿ ಅಧಿಕಾರಿ ಶಹನಾಜ್ , ಈಶ್ವರಿ ವೆನಿಲ್ಲಾ , ಸಮುದಾಯ ಆರೋಗ್ಯ ಅಧಿಕಾರಿ ರಾಕೇಶ್, ಬಸವನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರಾದ ಶ್ರೀದೇವಿ ಹಾಗೂ ಶಿಕ್ಷಕರು ಮತ್ತು ಸಿಬ್ಬಂದಿ ವರ್ಗದವರು, ಶಾಲೆಯ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹಾಜರಿದ್ದರು.








