
ನಾಪೋಕ್ಲು ಆ.5 NEWS DESK : ತಮ್ಮದೇ ಸಂಸ್ಕೃತಿ ಸಂಪ್ರದಾಯವನ್ನು ಹೊಂದಿರುವ ಕೊಡಗು ಗೌಡ ಸಮುದಾಯದವರು ತಮ್ಮ ಶ್ರೇಷ್ಠ ಸಂಸ್ಕೃತಿ ಪರಂಪರೆಯನ್ನು ಸಾರ್ವಜನಿಕ ಸಮಾರಂಭಗಳ ಮೂಲಕ ಇತರರಿಗೂ ಪಸರಿಸುವ ಪ್ರಯತ್ನ ಮಾಡಬೇಕೆಂದು ಮೈಸೂರು ಮಹಾನಗರ ಪಾಲಿಕೆಯ ಮಾಜಿ ಸದಸ್ಯರು ಹಾಗೂ ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕರಾದ ಕೆ.ವಿ.ಶ್ರೀಧರ್ ಅಭಿಪ್ರಾಯಪಟ್ಟರು. ಆಟಿ 18ರ ಪ್ರಯುಕ್ತ ಮೈಸೂರು ಕೊಡಗು ಗೌಡ ಸಮಾಜದಲ್ಲಿ ಏರ್ಪಡಿಸಿದ್ದ ಆಟಿ ಗೌಜಿ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಕೊಡಗು ಗೌಡರ ಶ್ರೇಷ್ಠ ಭಾಷೆ, ಸಂಸ್ಕೃತಿ, ಆಹಾರ, ಪದ್ಧತಿ ಕ್ರಮಗಳನ್ನು ಇತರರೊಂದಿಗೆ ಹಂಚಿಕೊಳ್ಳುವ ಮೂಲಕ, ತಮ್ಮ ಸಂಸ್ಕೃತಿ ಇತರರಿಗೂ ಹಂಚಿಕೆಯಾಗಿ ಅದು ಶಾಶ್ವತವಾಗಿರುವಂತೆ ನೋಡಿಕೊಳ್ಳಬೇಕೆಂದು ಕರೆ ನೀಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮೈಸೂರು ಕೊಡಗು ಗೌಡ ಸಮಾಜದ ಅಧ್ಯಕ್ಷ ಕೊಂಬಾರನ ಬಸಪ್ಪ ಮಾತನಾಡಿ, ಕೊಡಗಿನಲ್ಲಿ ಮಳೆಗಾಲದ ವಾತಾವರಣದಲ್ಲಿ ಪರಿಸರದಲ್ಲಿ ಸಿಗುವ ಆಹಾರ ಉತ್ಪನ್ನಗಳನ್ನು ಬಳಸಿ ಜನರು ಆರೋಗ್ಯವನ್ನು ಕಾಪಾಡಿಕೊಳ್ಳುತ್ತಾರೆ, ಮೈಸೂರಿನಲ್ಲಿ ನೆಲೆಸಿರುವ ನಮ್ಮ ಸಮುದಾಯದ ಜನರಿಗೆ ಈ ಆರೋಗ್ಯದಾಯಕ ಆಹಾರವನ್ನು ಒದಗಿಸುವ ಉದ್ದೇಶದಿಂದ ಆಟಿ ಗೌಜಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಕೊಡಗು ಗೌಡ ಮಹಿಳಾ ಒಕ್ಕೂಟದ ನಡುಬೆಟ್ಟಿ ಗೀತಾ ಲಕ್ಷ್ಮಣ ಮಾತನಾಡಿ ಆಟಿ ಗೌಜಿ ಕಾರ್ಯಕ್ರಮದ ಪ್ರಯುಕ್ತ ವಿವಿಧ ಮಳಿಗೆಗಳಲ್ಲಿ ವಿವಿಧ ಆರೋಗ್ಯದಾಯಕ ಆಹಾರ ಪದಾರ್ಥಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕೆ ಇಡಲಾಗಿದ್ದು ಸಮುದಾಯದ ಬಾಂಧವರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕರೆ ನೀಡಿದರು. ಸಮಾಜದ ಹಿರಿಯರಾದ ಕುಯ್ಯುಮುಡಿ ರಾಮಪ್ಪ, ಹಾಗೂ ನಡುಮನೆ ರುಕ್ಮಿಣಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕೊಡಗು ಗೌಡ ಸಮಾಜದ ಕಾರ್ಯದರ್ಶಿ ಪೆÇನ್ನೆಟಿ ನಂದ ಹಾಗೂ ಕೊಡಗು ಗೌಡ ಮಹಿಳಾ ಒಕ್ಕೂಟದ ಕಾರ್ಯದರ್ಶಿ ಕುಂಟುಪಣಿ ಶೀಲ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕೊಡಗು ಗೌಡ ಸಮಾಜದ ನಿರ್ದೇಶಕ ಪಟ್ಟಡ ಶಿವಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಕರ್ಣಯ್ಯನ ಸುನಿತಾ ಪ್ರಾರ್ಥಿಸಿದರು. ಹೊಸೂರು ಮಮತ ವಂದಿಸಿದರು. ಆಟಿ ಗೌಜಿ ಕಾರ್ಯಕ್ರಮದ ಪ್ರಯುಕ್ತ 18 ಮಳಿಗೆಗಳಲ್ಲಿ ವಿವಿಧ ಬಗೆಯ ಕೊಡಗಿನ ಆಹಾರ ಪದಾರ್ಥಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕಿಡಲಾಗಿತ್ತು. ಆಟಿ-ಪಾಯಸ, ಪತ್ರೊಡೆ, ಕೂಗಲೆ ಹಿಟ್ಟು, ಸೂಸಲೇ ಹಿಟ್ಟು, ಎಳ್ಳು ಮೆಂತೆ ಮೊದಲಾದ ಪದಾರ್ಥಗಳು ಮಾರಾಟವಾದವು, ಕೊಡಗಿನ ವಿಶೇಷ ಮಾಂಸಹಾರವು ಬಹು ಬೇಡಿಕೆಗಳಿಸಿತ್ತು. ಪ್ರದರ್ಶನ ಆರಂಭವಾದ ಒಂದು ಗಂಟೆಯೊಳಗೆ ಬಹುತೇಕ ಆಹಾರ ಪದಾರ್ಥಗಳು ಖಾಲಿಯಾಗಿ, ಮಳಿಗೆ ದಾರರು ಹರ್ಷ ವ್ಯಕ್ತಪಡಿಸಿದರು. ಇದೇ ಸಂದರ್ಭ ಕೊಡಗು ಗೌಡ ಯುವ ವೇದಿಕೆಯವರು, ಸಮುದಾಯದ ಜನರು ಪ್ರಾಚೀನ ಕಾಲದಲ್ಲಿ ಬಳಸುತ್ತಿದ್ದ ಪರಿಕರಗಳ ಪ್ರದರ್ಶನ ಗಮನ ಸೆಳೆಯಿತು.
ವರದಿ : ದುಗ್ಗಳ ಸದಾನಂದ.








