
ಮಡಿಕೇರಿ ಆ.5 NEWS DESK : ಯೋನೆಕ್ಸ್ ಸನ್ ರೈಸ್ ಕರ್ನಾಟಕ ರಾಜ್ಯ ಜೂನಿಯರ್ ಮತ್ತು ಸೀನಿಯರ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಕೊಡಗಿನ ಬೊಪ್ಪಂಡ ದಿಯಾ ಭೀಮಯ್ಯಗೆ ರಾಜ್ಯಮಟ್ಟದ ಬ್ಯಾಡ್ಮಿಂಟನ್ ಪ್ರಶಸ್ತಿ ಲಭಿಸಿದೆ. ಜು.27 ರಿಂದ ಆ.2 ರವರೆಗೆ ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆ ವತಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಉರ್ವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ 357 ಕರ್ನಾಟಕದ ಅತ್ಯುತ್ತಮ ಶ್ರೇಯಾಂಕಿತ ಆಟಗಾರರು ಪ್ರಶಸ್ತಿಗಾಗಿ ಸೆಣಸಾಡಿದರು. ಇದರಲ್ಲಿ ದಿಯಾ ಭೀಮಯ್ಯ ಮೂರು ವಿಭಾಗದಲ್ಲಿ ಅಂತಿಮ ಘಟ್ಟಕ್ಕೆ ತಲುಪಿದ್ದು, ರಾಜ್ಯಮಟ್ಟದ ಬ್ಯಾಡ್ಮಿಂಟನ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾಳೆ. ಬೊಪ್ಪಂಡ ದಿಯಾ ಭೀಮಯ್ಯ 19 ವರ್ಷದ ಬಾಲಕಿಯರ ಸಿಂಗಲ್ಸ್ ನಲ್ಲಿ ದ್ವಿತೀಯ, ಮಿಕ್ಸ್ ಡಬಲ್ಸ್ ನಲ್ಲಿ ಪ್ರಥಮ ಹಾಗೂ ಸೀನಿಯರ್ ವಿಭಾಗದ ಡಬಲ್ಸ್ ನಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾಳೆ. ಕರ್ನಾಟಕದ ಪ್ರಥಮ ಶ್ರೇಯಾಂಕಿತ ಆಟಗಾರ್ತಿ ಡಬಲ್ಸ್ ವಿಭಾಗದಲ್ಲಿ ಬೆಂಗಳೂರಿನ ಅಶ್ವತಿ ವರ್ಗೀಸ್ ಹಾಗೂ ಮಿಶ್ರ ಡಬಲ್ಸ್ ನಲ್ಲಿ ಎ.ಆರ್.ಸುಮಿತ್ ಅವರೊಂದಿಗೆ ಆಡಿದ್ದಾಳೆ. ಮೈಸೂರಿನ ವಿದ್ಯಾಶ್ರಮ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿರುವ ದಿಯಾ, ಮೈಸೂರಿನ ಸ್ಪೋರ್ಟ್ಸ್ ಪಾರ್ಕ್ ನಲ್ಲಿ ಮೇದುರ ಅರುಣ್ ಪೆಮ್ಮಯ್ಯ ಅವರ ಬಳಿ ತರಬೇತಿ ಪಡೆದಿದ್ದು, ಪ್ರಸ್ತುತ ಭಾರತದ ಪ್ರತಿಷ್ಠಿತ ಬ್ಯಾಡ್ಮಿಂಟನ್ ಸಂಸ್ಥೆಯಾದ (NCE) ನ್ಯಾಷನಲ್ ಸೆಂಟರ್ ಆಫ್ ಎಕ್ಸಲೆನ್ಸ್ ಗೌಹಾಟಿ ಯಲ್ಲಿ (ಅಸ್ಸಾಂ) ತರಬೇತಿ ಪಡೆಯುತ್ತಿದ್ದಾಳೆ.









