ಮಡಿಕೇರಿ NEWS DESK ಆ.5 : ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಕೆಎಸ್‌ಆರ್‌ಟಿಸಿ ನೌಕರರು ರಾಜ್ಯವ್ಯಾಪಿ ನಡೆಸುತ್ತಿರುವ ಮುಷ್ಕರಕ್ಕೆ ಕೊಡಗು ಜಿಲ್ಲೆಯಲ್ಲೂ ಬೆಂಬಲ ವ್ಯಕ್ತವಾಯಿತು. ಇಂದು ಬೆಳಿಗ್ಗೆ 8 ಗಂಟೆಯ ನಂತರ ಸಂಚಾರವನ್ನು ಸ್ಥಗಿತಗೊಳಿಸಿದ ಬಸ್ ಗಳು ಬಸ್ ನಿಲ್ದಾಣಗಳಲ್ಲೇ ಸಾಲುಗಟ್ಟಿ ನಿಂತವು. ಬಸ್ ಮುಷ್ಕರದ ಕುರಿತು ಮೊದಲೇ ಮಾಹಿತಿ ಇದ್ದ ಕಾರಣ ಬಸ್ ನಿಲ್ದಾಣಗಳಲ್ಲಿ ವಿರಳ ಸಂಖ್ಯೆಯ ಪ್ರಯಾಣಿಕರಿದ್ದರು. ಮಾಹಿತಿ ಇಲ್ಲದ ಪ್ರಯಾಣಿಕರು ವಿವಿಧ ಊರಿಗಳಿಗೆ ತೆರಳಲು ಕಾದು ಕುಳಿತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಪುತ್ತೂರು ಡಿಪೋದ ಮಡಿಕೇರಿ ಘಟಕದ ಮೂಲಕ ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಗೆ ಒಟ್ಟು 130 ಬಸ್ ಮಾರ್ಗಗಳಿದ್ದು, ಈ ಪೈಕಿ 64 ಮಾರ್ಗಗಳು ಮಡಿಕೇರಿ ಘಟಕದಿಂದ ನಿರ್ವಹಿಸಲಾಗುತ್ತಿದೆ. ಬಸ್ ಸೇವೆ ಬಂದ್ ಹಿನ್ನೆಲೆಯಲ್ಲಿ ಬಹುತೇಕ ಬಸ್‌ಗಳ ಸಂಚಾರ ಸ್ಥಗಿತವಾಗಿತ್ತು. ಹೊರ ಭಾಗಗಳಿಂದ ನಿಲ್ದಾಣಕ್ಕೆ ಆಗಮಿಸಿದ ಬಸ್‌ಗಳು ಸಂಚಾರಿ ನಿಯಂತ್ರಕರಲ್ಲಿ ನೋಂದಾಯಿಸಿಕೊಂಡ ನಂತರ ಇಲ್ಲಿಯೇ ಉಳಿದುಕೊಂಡವು. ಮುಷ್ಕರಕ್ಕೆ ಚಾಲಕರು ಹಾಗೂ ನಿರ್ವಾಹಕರು ಕೈ ಜೋಡಿಸಿದರು. ಖಾಸಗಿ ಮತ್ತು ಸರಕಾರಿ ಒಪ್ಪಂದದಲ್ಲಿ ಸಂಚರಿಸುವ ಪವರ್ ಪ್ಲಸ್ ಬ್ಯಾಟರಿ ಚಾಲಿತ ಬಸ್ ಮಾತ್ರ ಪ್ರಯಾಣಿಕರನ್ನು ತುಂಬಿಕೊಂಡು ಮಡಿಕೇರಿ ನಿಲ್ದಾಣದಿಂದ ಬೆಂಗಳೂರು ಕಡೆಗೆ ತೆರಳಿದವು. ಬಸ್ ಡಿಪೋ ಮತ್ತು ನಿಲ್ದಾಣಗಳಲ್ಲಿ ಕಾನೂನು ಸುವ್ಯವಸ್ಥೆಗೆ ದಕ್ಕೆ ಉಂಟಾಗದಂತೆ ಹೆಚ್ಚುವರಿ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು.
ಮುಷ್ಕರದ ಪರಿಣಾಮ ಸರಕಾರಿ ಕಚೇರಿಗಳಲ್ಲಿ ಹಾಗೂ ಶಾಲಾ ಕಾಲೇಜುಗಳಲ್ಲಿ ಹಾಜರಾತಿಯ ಕೊರತೆ ಕಂಡು ಬರಲಿಲ್ಲ. *ಖಾಸಗಿ ವಾಹನಗಳಿಗೆ ನಿರಾಶೆ* ಕೆಎಸ್‌ಆರ್‌ಟಿಸಿ ಬಸ್ ಸೇವೆ ಸ್ಥಗಿತವಾಗಿದ್ದ ಹಿನ್ನೆಲೆಯಲ್ಲಿ ಎಲ್ಲಾ ಬಸ್ ನಿಲ್ದಾಣಗಳ ಮೂಲಕ ಖಾಸಗಿ ಬಸ್‌ಗಳು, ಮಿನಿ ಬಸ್, ಮ್ಯಾಕ್ಸಿ ಕ್ಯಾಬ್, ಟೆಂಪೋ ಟ್ರಾವೆಲರ್‌ಗಳಿಗೆ ಪ್ರಯಾಣಿಕರನ್ನು ಕರೆದೊಯ್ಯಲು ಸಾರಿಗೆ ಇಲಾಖೆ ಅವಕಾಶ ಒದಗಿಸಿತ್ತು. ಈ ಹಿನ್ನೆಲೆಯಲ್ಲಿ ಖಾಸಗಿ ಬಸ್‌ಗಳು ಕೂಡ ಕೆಎಸ್‌ಆರ್‌ಟಿಸಿ ನಿಲ್ದಾಣದ ಮುಂಭಾಗ ಮಡಿಕೇರಿ-ಕುಶಾಲನಗರ, ಮಡಿಕೇರಿ-ಸುಳ್ಯ, ಮಡಿಕೇರಿ-ಮೈಸೂರು ಮಾರ್ಗಗಳಲ್ಲಿ ಸಂಚರಿಸಿದವು. ಖಾಸಗಿ ಬಸ್‌ಗಳ ಪ್ರಯಾಣ ದರ ಪ್ರಯಾಣಿಕರಿಗೆ ಸ್ವಲ್ಪ ದುಬಾರಿಯಾಗಿ ಪರಿಣಮಿಸಿದರೂ ಅನಿವಾರ್ಯವಾಗಿ ಪ್ರಯಾಣ ಬೆಳೆಸಿದರು. ಸರಕಾರದ ರಸ್ತೆ ತೆರಿಗೆ ನೀತಿ, ಬಿಡಿ ಭಾಗಗಳ ದುಬಾರಿ ದರ, ಕಾರ್ಮಿಕರು ಹಾಗೂ ವಾಹನ ನಿರ್ವಹಣೆಗಳಿಗೆ ಹೋಲಿಸಿದರೆ ಖಾಸಗಿ ಬಸ್‌ಗಳ ಸೇವೆ ಭಾರೀ ದುಬಾರಿ ಆಗಿರಲಿಲ್ಲ ಎಂದು ತಮ್ಮ ಸೇವೆಯನ್ನು ಖಾಸಗಿ ಬಸ್ ಗಳ ಪ್ರಮುಖರು ಸಮರ್ಥಿಸಿಕೊಂಡರು. ಕೆಎಸ್‌ಆರ್‌ಟಿಸಿ ಬಸ್ ಗಳು ರಸ್ತೆಗಿಳಿಯುವುದಿಲ್ಲ ಎನ್ನುವ ಮಾಹಿತಿ ಮೊದಲೇ ಇದ್ದ ಕಾರಣ ಪ್ರಯಾಣಿಕರು ನಿರೀಕ್ಷಿತ ಪ್ರಮಾಣದಲ್ಲಿ ಬಾರದೆ ಖಾಸಗಿ ವಾಹನಗಳು ನಿರಾಶೆ ಅನುಭವಿಸಿದವು. ಕೆಎಸ್‌ಆರ್‌ಟಿಸಿ ಬಸ್ ಗಳಲ್ಲಿ ಶಕ್ತಿ ಯೋಜನೆಯ ಮೂಲಕ ಉಚಿತ ಸೇವೆ ಪಡೆಯುತ್ತಿರುವ ಮಹಿಳಾ ಪ್ರಯಾಣಿಕರು ಇಂದು ಬಾರದೆ ಇರುವುದು ಕೂಡ ಪ್ರಮುಖ ಕಾರಣವಾಗಿದೆ. ಕೆಎಸ್‌ಆರ್‌ಟಿಸಿಯ ಮಡಿಕೇರಿ ವಿಭಾಗೀಯ ನಿಯಂತ್ರಕ ಈರ್ಸಪ್ಪ ಸುದ್ದಿಗಾರರೊಂದಿಗೆ ಮಾತನಾಡಿ ಶಾಲಾ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕೆಲವು ಮಾರ್ಗಗಳಲ್ಲಿ ಬಸ್‌ಗಳ ಸಂಚಾರ ಮುಷ್ಕರದ ನಡುವೆಯೂ ನಡೆದಿದೆ. ಮಡಿಕೇರಿ-ಕುಶಾಲನಗರ ನಡುವೆ ಬಸ್ ಸೇವೆಯನ್ನೂ ಒದಗಿಸಲಾಗಿದೆ. ಗುತ್ತಿಗೆ ಚಾಲಕರು ಮತ್ತು ತರಬೇತಿ ಚಾಲಕರನ್ನು ಕೂಡ ಈ ಮುಷ್ಕರದ ಸಂದರ್ಭ ಬಳಸಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಎಲ್ಲಿಯೂ ಕೆಎಸ್‌ಆರ್‌ಟಿಸಿ ಬಸ್ ಸೇವೆ ಸಂಬಂಧ ಅಹಿತಕರ ಘಟನೆಗಳು ನಡೆದಿಲ್ಲ ಎಂದರು.











