
ಮಡಿಕೇರಿ ಆ.8 NEWS DESK : ಕುಂಜಿಲ ಆಕ್ಸ್ಫರ್ಡ್ ಆಂಗ್ಲ ಮಾಧ್ಯಮ ಶಾಲೆಯ 2025-26ನೇ ಶೈಕ್ಷಣಿಕ ಸಾಲಿನ ಇಂಟರಾಕ್ಟ್ ಕ್ಲಬ್ ಪದಗ್ರಹಣ ಸಮಾರಂಭ ನಡೆಯಿತು. ಕಾರ್ಯಕ್ರಮವನ್ನು ರೋಟರಿ ಮಡಿಕೇರಿ ವುಡ್ಸ್‌ನ ರೋಟೆರಿಯನ್ ಬಿ.ಜಿ.ಅನಂತಶಯನ, ಕಿರಣ್ ಕುಂದರ್, ವಸಂತ್ ಕುಮಾರ್ ಮತ್ತು ಕೆ.ಜಿ.ಹರೀಶ್ ಉದ್ಘಾಟಿಸಿದರು. ಜಿಲ್ಲಾ ರೋಟರಿ ಚೇರ್ ಮ್ಯಾನ್ ಬಿ.ಜಿ.ಅನಂತಶಯನ ಮಾತನಾಡಿ ಸಮುದಾಯ ಸೇವೆ ಮತ್ತು ನಾಯಕತ್ವದ ಮಹತ್ವವನ್ನು ವಿವರಿಸಿದರು. ರೋಟರಿ ಮಡಿಕೇರಿ ವುಡ್ಸ್ ಅಧ್ಯಕ್ಷ ಕಿರಣ್ ಕುಂದೆರ್ ಮಾತನಾಡಿ, ಇಂಟರಾಕ್ಟ್ ಕ್ಲಬ್ ರೋಟರಿ ಇಂಟರ್ನ್ಯಾಷನಲ್‌ನ ತತ್ವಗಳಿಂದ ಮಾರ್ಗದರ್ಶನ ಪಡೆದು ಅರ್ಥಪೂರ್ಣ ಸೇವೆ, ನಾಯಕತ್ವ ಅಭಿವೃದ್ಧಿಯೊಂದಿಗೆ ಉತ್ತಮ ಕಾರ್ಯಕ್ರಮ ಹಮ್ಮಿಕೊಳ್ಳುವಂತಾಗಲಿ ಎಂದರು. ವೇದಿಕೆಯಲ್ಲಿ ಸಂಸ್ಥೆಯ ಮುಖ್ಯಸ್ಥರಾದ ಶಾಹಿದ್ ಆಲಿ, ಪ್ರಾಂಶುಪಾಲರಾದ ಎಂ.ಎಂ.ಕವಿತಾ ಹಾಗೂ ಎಂ.ಜಿ.ಗಗನ್ ಉಪಸ್ಥಿತರಿದ್ದರು. ಪ್ರಸಕ್ತ ಶೈಕ್ಷಣಿಕ ಸಾಲಿನ ಪದಾಧಿಕಾರಿಗಳನ್ನು ಇಂಟರಾಕ್ಟ್ ಕ್ಲಬ್ ಅಧ್ಯಕ್ಷೆ 10ನೇ ತರಗತಿ ವಿದ್ಯಾರ್ಥಿನಿ ಆಯಿಷ ಪರಿಚಯಿಸಿದಳು. ನೂತನ ಪದಾಧಿಕಾರಿಗಳಿಂದ ಪ್ರಮಾಣ ವಚನ ಸ್ವೀಕರಿಸಲಾಯಿತು.








