

ಮಡಿಕೇರಿ NEWS DESK ಆ.9 : ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಷನ್ (ನೀಮಾ )ನ ಕೊಡಗು ಜಿಲ್ಲಾ ಘಟಕದ ವತಿಯಿಂದ ಬೆಳ್ಳಿ ಹಬ್ಬ ಆಚರಣೆಯ ಅಂಗವಾಗಿ “ತರು-ಯಜ್ಞ” ಎಂಬ ವಿಶೇಷ ಕಾರ್ಯಕ್ರಮಕ್ಕೆ ಕೊಡಗಿನ ವಿವಿಧ ತಾಲೂಕುಗಳಲ್ಲಿ ಚಾಲನೆ ನೀಡಲಾಯಿತು. ಮಕ್ಕಳಲ್ಲಿ ಹಾಗೂ ಪೋಷಕರಲ್ಲಿ ಔಷಧೀಯ ಗಿಡಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಕೊಡಗಿನಾದ್ಯಂತ ಹಮ್ಮಿಕೊಳ್ಳಲಾಗಿದೆ. ಈ ಯೋಜನೆಯಡಿಯಲ್ಲಿ ಒಂದು ವರ್ಷದಲ್ಲಿ ಕೊಡಗಿನ ಶಾಲಾ ಕಾಲೇಜುಗಳಲ್ಲಿ ಕನಿಷ್ಠ 2,500 ಔಷಧೀಯ ಗಿಡಗಳನ್ನು ಮಕ್ಕಳ ಮೂಲಕ ಬೆಳೆಸುವ ಗುರಿ ಹೊಂದಲಾಗಿದೆ. ಒಂದು ವರ್ಷದ ನಂತರ ಅತ್ಯುನ್ನತವಾಗಿ ಬೆಳೆದ ಮದ್ದಿನ ಗಿಡಗಳನ್ನು ಪೋಷಿಸುತ್ತಿರುವ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಗುವುದು ಎಂದು ನೀಮಾ ಪ್ರಮುಖರು ತಿಳಿಸಿದರು. ಮಡಿಕೇರಿಯ ಕೊಡಗು ವಿದ್ಯಾಲಯದ ಎನ್ ಸಿ ಸಿ ವಿದ್ಯಾರ್ಥಿಗಳು, ನಾಪೋಕ್ಲುವಿನ ಪಾರಾಣೆ ಪ್ರೌಢಶಾಲೆಯ ವಿದ್ಯಾರ್ಥಿಗಳು, ಸಿದ್ದಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಹಾಗೂ ಕುಶಾಲನಗರದಲ್ಲಿ ಪೋಷಕರು ಈ ವಿಶೇಷ ಯೋಜನೆಗೆ ಚಾಲನೆ ನೀಡಿದರು. ಕೊಡಗು ನೀಮಾ ಸದಸ್ಯ ವೈದ್ಯರು ಗಿಡಗಳನ್ನು ವಿತರಿಸಿ ಅವುಗಳ ಮಹತ್ವದ ಬಗ್ಗೆ ಮಾಹಿತಿ ನೀಡಿದರು.









