

ಮಡಿಕೇರಿ NEWS DESK ಆ.9 : ನಗರದ ಶ್ರೀ ಓಂಕಾರೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿಗೆ ಪ್ರಕಾಶ್ ಆಚಾರ್ಯ ಅವರನ್ನು ನಿಯಮ ಬಾಹಿರವಾಗಿ ನಾಮ ನಿರ್ದೇಶನ ಮಾಡಲಾಗಿದೆ ಎಂದು ಬಿಜೆಪಿಯ ಹಿಂದುಳಿದ ವರ್ಗಗಳ ಮೋರ್ಚಾದ ಮಡಿಕೇರಿ ನಗರಾಧ್ಯಕ್ಷ ಗಜೇಂದ್ರ ಕುಶ ಆರೋಪಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಹಿಂದೂ ಧಾರ್ಮಿಕ ಸಂಸ್ಥೆಗಳ ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯ ಕಾಯ್ದೆಯನ್ವಯ ನಾಮ ನಿರ್ದೇಶಿತ ಸದಸ್ಯರು ಯಾವುದೇ ರಾಜಕೀಯ ಪಕ್ಷದ ಪದಾಧಿಕಾರಿಯಾಗಿರಬಾರದು. ಆದರೆ ಪ್ರಕಾಶ್ ಆಚಾರ್ಯ ಅವರು ಶ್ರೀ ಓಂಕಾರೇಶ್ವರ ದೇವಾಲಯ ಸಮಿತಿಗೆ ನಾಮ ನಿರ್ದೇಶನವಾಗುವಾಗ ನಗರ ಕಾಂಗ್ರೆಸ್ ನ ಉಪಾಧ್ಯಕ್ಷರಾಗಿದ್ದರು, ಅಲ್ಲದೆ ಪ್ರಸ್ತುತ ನಗರಾಧ್ಯಕ್ಷರಾಗಿದ್ದಾರೆ ಎಂದು ಗಮನ ಸೆಳೆದಿದ್ದಾರೆ. ಹಿಂದೂ ಧಾರ್ಮಿಕ ಸಂಸ್ಥೆಗಳ ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯ ತಿದ್ದುಪಡಿ ಅದಿನಿಯಮ 2011 ರ ಸೆಕ್ಷನ್ 25(3) ಮತ್ತು (4)ರ ಅನಹರ್ತೆಗಳೊಂದಿಗೆ ಹಾಗೂ ಕಾಯ್ದೆಯ (2)ನೇ ಯ ತಿದ್ದುಪಡಿ ಕಲಂ 25(2)(ಡಿ) ಅನ್ವಯ ಯಾವುದೇ ರಾಜಕೀಯ ಪಕ್ಷದ ಪದಾಧಿಕಾರಿಯಾಗಿರುವುದು ಕಂಡು ಬಂದಲ್ಲಿ ಅಂತಹವರ ಸದಸ್ಯತ್ವ ಸಹಜವಾಗಿಯೇ ರದ್ದಾಗುತ್ತದೆ. ಹೀಗಿದ್ದೂ ಕಾಂಗ್ರೆಸ್ ಜಿಲ್ಲಾಧ್ಯಕ್ಷರು, ಶಾಸಕರು ಹಾಗೂ ಮುಖಂಡರುಗಳು ಪ್ರಕಾಶ್ ಆಚಾರ್ಯ ಅವರನ್ನು ನಾಮ ನಿರ್ದೇಶನ ಮಾಡಿರುವ ಔಚಿತ್ಯವೇನು ಎಂದು ಪ್ರಶ್ನಿಸಿರುವ ಗಜೇಂದ್ರ ಕುಶ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಕಾನೂನಿಗೆ ಬೆಲೆ ಇಲ್ಲದಾಗಿದೆ. ಪ್ರತಿಯೊಂದು ವಿಚಾರದಲ್ಲೂ ನಿಯಮಗಳನ್ನು ಉಲ್ಲಂಘಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಬಿಜೆಪಿಗೆ ಕಾನೂನಿನ ಪಾಠ ಹೇಳುವ ಕಾಂಗ್ರೆಸ್ ತಾನು ಗಾಜಿನ ಮನೆಯಲ್ಲಿ ಕುಳಿತಿರುವುದನ್ನು ಮರೆತಂತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೇರೆಯದ್ದೇ ಕಾನೂನು ಇದೆಯೇ, ಹಿಂದೂ ಧಾರ್ಮಿಕ ಸಂಸ್ಥೆಗಳ ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯ ಕಾಯ್ದೆ ಪ್ರಕಾಶ್ ಆಚಾರ್ಯ ಅವರಿಗೆ ಅನ್ವಯವಾಗುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ಗಾಜಿನ ಮನೆಯಲ್ಲಿ ಕುಳಿತು ಇನ್ನೊಬ್ಬರ ಮನೆಗೆ ಕಲ್ಲು ಹೊಡೆಯುವ ಚಾಳಿಯನ್ನು ಕಾಂಗ್ರೆಸ್ ಮೊದಲು ಬಿಡಬೇಕು ಮತ್ತು ಪ್ರಕಾಶ್ ಆಚಾರ್ಯ ಅವರನ್ನು ನಿಯಮಾನುಸಾರ ಶ್ರೀ ಓಂಕಾರೇಶ್ವರ ದೇವಾಲಯ ಸಮಿತಿಯಿಂದ ಕೈಬಿಡಬೇಕೆಂದು ಗಜೇಂದ್ರ ಕುಶ ಒತ್ತಾಯಿಸಿದ್ದಾರೆ.








