
ಮಡಿಕೇರಿ NEWS DESK ಆ.11 : ಆದಿವಾಸಿಗಳ ಮೇಲಿನ ದೌರ್ಜನ್ಯವನ್ನು ತಕ್ಷಣ ನಿಲ್ಲಿಸಬೇಕು ಮತ್ತು ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕೆಂದು ಆಗ್ರಹಿಸಿ ಆದಿವಾಸಿಗಳ ಸಮನ್ವಯ ಸಮಿತಿ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿತು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಭವನದ ಎದುರು ಘೋಷಣೆಗಳನ್ನು ಕೂಗಿದ ಸಮಿತಿಯ ಪ್ರಮುಖರು ಹಾಗೂ ಆದಿವಾಸಿಗಳು ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಜಿಲ್ಲಾಡಳಿತದ ಮೂಲಕ ಸರಕಾರಕ್ಕೆ ಸಲ್ಲಿಸಿದರು. ರಾಷ್ಟ್ರೀಯ ಉದ್ಯಾನವನಗಳು, ಮೀಸಲು ಅರಣ್ಯಗಳು ಮತ್ತು ಹುಲಿ ಮೀಸಲು ಪ್ರದೇಶದಿಂದ ಆದಿವಾಸಿಗಳನ್ನು ಹೊರ ಹಾಕಬಾರದು. ಆದಿವಾಸಿ ಅರಣ್ಯ ಹಕ್ಕು ಕಾಯ್ದೆ 2006 ರ ಅನುಷ್ಠಾನದ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ಭೂಮಿ ಮತ್ತು ಅರಣ್ಯದ ಮೇಲೆ ಆದಿವಾಸಿಗಳ ಹಕ್ಕುಗಳನ್ನು ಗುರುತಿಸುವ ಮೂಲಕ ಕಿರುಕುಳವನ್ನು ನಿಲ್ಲಿಸಬೇಕು. ಆದಿವಾಸಿಗಳ ಆಚರಣೆ, ನಂಬಿಕೆಗೆ ವಿರುದ್ಧವಾಗಿ ಕೋಮು ದ್ವೇಷ ಹರಡುವುದನ್ನು ನಿಲ್ಲಿಸಬೇಕು. ಆದಿವಾಸಿಗಳ ಅಭಿವೃದ್ಧಿಗಾಗಿ ಕಾಲಮಿತಿಯ ಯೋಜನೆಗಳನ್ನು ರೂಪಿಸಿ ಮೂಲಭೂತ ಸೌಲಭ್ಯಗಳಾದ ಶಾಲೆಗಳು, ಕುಡಿಯುವ ನೀರು, ವಿದ್ಯುತ್, ರಸ್ತೆ, ವೈದ್ಯಕೀಯ ವ್ಯವಸ್ಥೆ ಮತ್ತು ನಿವೇಶನವನ್ನು ನೀಡಬೇಕು. ಆದಿವಾಸಿಗಳ ಕಲ್ಯಾಣಕ್ಕಾಗಿ ಬಜೆಟ್ ನಲ್ಲಿ ಅಗತ್ಯ ಅನುದಾನ ಮೀಸಲಿಡಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನಾಕಾರರು ಒತ್ತಾಯಿಸಿದರು. ಆದಿವಾಸಿಗಳ ಸಮನ್ವಯ ಸಮಿತಿಯ ಜಿಲ್ಲಾ ಮುಖಂಡರುಗಳಾದ ಪ್ರೇಮ ಜೆ.ಆರ್, ಭರತ್ ಪಿ.ಆರ್, ಹೆಚ್.ಬಿ.ರಮೇಶ್ ಹಾಗೂ ಸದಸ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.









