
ಮಡಿಕೇರಿ NEWS DESK ಆ.12 : ಸಿ ಮತ್ತು ಡಿ ಕೃಷಿ ಭೂಮಿ ಹಕ್ಕಿಗಾಗಿ ಒತ್ತಾಯಿಸಿ ರೈತ ಹೋರಾಟ ಸಮಿತಿ ಕರೆ ನೀಡಿರುವ ಸೋಮವಾರಪೇಟೆ ತಾಲ್ಲೂಕು ಬಂದ್ ಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಕೊಡಗು ಜಿಲ್ಲಾ ಘಟಕ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ. ಪತ್ರಿಕಾ ಪ್ರಕಟಣೆ ನೀಡಿರುವ ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅಮೀನ್ ಮೊಹಿಸಿನ್ ಅವರು ರೈತರ ಕೃಷಿ ಭೂಮಿಯನ್ನು ಸಿ ಮತ್ತು ಡಿ ಭೂಮಿ ಹೆಸರಿನಲ್ಲಿ ಅರಣ್ಯ ಇಲಾಖೆಗೆ ಸೇರ್ಪಡೆಗೊಳಿಸಲು ಸರಕಾರ ಸೆಕ್ಷನ್-4 ರಡಿ ಸರ್ವೆಗೆ ಮುಂದಾಗಿರುವುದು ಸರಿಯಾದ ಕ್ರಮವಲ್ಲ, ಇದೊಂದು ರೈತ ವಿರೋಧಿ ನೀತಿಯಾಗಿದೆ ಎಂದು ಟೀಕಿಸಿದ್ದಾರೆ. ರೈತರ ಹಿತ ಕಾಪಾಡಲು ನಡೆಸುತ್ತಿರುವ ಸೋಮವಾರಪೇಟೆ ತಾಲ್ಲೂಕು ಬಂದ್ ಗೆ ಮತ್ತು ಮುಂದೆ ನಡೆಯುವ ರೈತಪರ ಹೋರಾಟಕ್ಕೆ ಎಸ್‌ಡಿಪಿಐ ಸಂಪೂರ್ಣ ಬೆಂಬಲವನ್ನು ಸೂಚಿಸುತ್ತದೆ. ಸಿ ಮತ್ತು ಡಿ ಭೂಮಿಯ ಸಮಸ್ಯೆ ಕಳೆದ ಅನೇಕ ವರ್ಷಗಳಿಂದ ಇತ್ಯರ್ಥವಾಗದೆ ಉಳಿದಿರುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕುವ ಪರಿಸ್ಥಿತಿ ಎದುರಾಗಿದೆ. ಸರಕಾರ ಯಾವುದೇ ಕಾನೂನು ಜಾರಿಗೆ ತಂದರೂ ಅದು ರೈತರ ಹಿತ ಕಾಪಾಡಬೇಕೆ ಹೊರತು ಕಿರುಕುಳವಾಗಬಾರದು ಎಂದು ತಿಳಿಸಿದ್ದಾರೆ. ಆಡಳಿತ ಪಕ್ಷದಲ್ಲಿರುವ ಕೊಡಗಿನ ಶಾಸಕರುಗಳು ರೈತಪರ ನಿಂತು ಅಧಿವೇಶನದಲ್ಲಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಜಿಲ್ಲೆಯ ರೈತರಿಗೆ ಆಗುತ್ತಿರುವ ಅನ್ಯಾಯವನ್ನು ಅರಣ್ಯ ಸಚಿವರು ಹಾಗೂ ಕಂದಾಯ ಸಚಿವರಿಗೆ ಮನವರಿಕೆ ಮಾಡಿಕೊಡಬೇಕೆಂದು ಅಮೀನ್ ಮೊಹಿಸಿನ್ ಒತ್ತಾಯಿಸಿದ್ದಾರೆ.








