
ವಿರಾಜಪೇಟೆ ಆ.13 NEWS DESK : ನಗರದ ಚಿಕ್ಕಪೇಟೆ ಛತ್ರಕೆರೆಯ ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯದಲ್ಲಿ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 354ನೇ ದಿವ್ಯ ಆರಾಧನೆ ಶ್ರದ್ಧಾಭಕ್ತಿಯಿಂದ ನೆರವೇರಿತು. ದೇಗುಲದ ಪ್ರಧಾನ ಅರ್ಚಕರಾದ ಸುಬ್ರಮಣ್ಯ ಭಟ್ ಅವರ ನೇತೃತ್ವದಲ್ಲಿ ಪೂಜಾ ಕಾರ್ಯಗಳು ನಡೆದವು. ಮುಂಜಾನೆ ಸ್ವಾಮಿಗಳ ದಿವ್ಯ ಮೂರ್ತಿಗೆ ಕ್ಷೀರಾಭಿಷೇಕ ಸೇರಿದಂತೆ ವಿವಿಧ ಅಭಿಷೇಕಗಳು ನಡೆದವು. ನಂತರ ಶ್ರೀ ಗುರು ರಾಘವೇಂದ್ರ ಸ್ವಾಮಿಗಳಿಗೆ ವಿವಿಧ ಹೂವುಗಳಿಂದ ಅಲಂಕಾರ ಪೂಜಾ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿತ್ತು. ನಗರದ ಮಹಿಳಾ ಸಂಘದ ಭಕ್ತರಿಂದ ಗುರು ರಾಯರ ಭಜನಾ ಸಂಕೀರ್ತನೆ ಜರುಗಿತು. ಮಧ್ಯಾಹ್ನ ಮಹಾ ಮಂಗಳಾರತಿ ಮತ್ತು ಮಹಾಪೂಜೆಯ ನಂತರ ನೆರೆದಿದ್ದ ಭಕ್ತಾಧಿಗಳಿಗೆ ಆಡಳಿತ ಮಂಡಳಿಯ ವತಿಯಿಂದ ಅನ್ನಸಂತರ್ಪಣೆ ನೆರವೇರಿತು. ಪೂಜಾ ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷರು, ಸದಸ್ಯರು ಮತ್ತು ನಗರದ ವಿವಿಧೆಡೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಪಾಲ್ಗೊಂಡು ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದರು.
ವರದಿ : ಕಿಶೋರ್ ಕುಮಾರ್ ಶೆಟ್ಟಿ









