
ಮಡಿಕೇರಿ ಆ.19 NEWS DESK : ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಕೊಡಗು ಜಿಲ್ಲಾ ಘಟಕದ ವತಿಯಿಂದ ಜಿಲ್ಲಾ ಮಟ್ಟದ ಕವಿಗೋಷ್ಠಿ ಕಾರ್ಯಕ್ರಮ ನಡೆಯಿತು. ಕುಶಾಲನಗರದ ಮಹಿಳಾ ಸಮಾಜ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಒಳಚರಂಡಿ ಅಭಿವೃದ್ಧಿ ನಿಗಮ ಹಾಗೂ ಕೊಡಗು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಕೆ.ಪಿ.ಚಂದ್ರಕಲಾ ಉದ್ಘಾಟಿಸಿ ಮಾತನಾಡಿ, ಸ್ಪರ್ಧಾತ್ಮಕ ಪ್ರಪಂಚದಲ್ಲಿ ದಿನನಿತ್ಯ ಹಲವರು ಪ್ರತಿಭೆಗಳು ಹೊರ ಹೊಮ್ಮುತ್ತಿದ್ದಾರೆ, ಈ ಕಲೆಯನ್ನು ಉಳಿಸಿಕೊಳ್ಳಬೇಕಾಗಿದೆ ಎಂದು ಕಿವಿ ಮಾತು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಕೊಡಗು ಜಿಲ್ಲಾಧ್ಯಕ್ಷ ಡಾ.ಹೆಚ್.ಎಂ.ರಘು ಕೋಟಿ ವಹಿಸಿ ಮಾತನಾಡಿ, ತಮ್ಮ ಪ್ರತಿಭೆ ಹೊರ ಹೊಮ್ಮಲು ಯಾವುದೇ ಪದವಿಗಳ ಅವಶ್ಯಕತೆ ಇಲ್ಲ ಅದು ಸುಪ್ತ ಮನಸ್ಸಿನಿಂದ ಹೊರ ಹೊಮ್ಮಿ ಜಗತ್ತಿಗೆ ಅನಾವರಣಗೊಳ್ಳುತ್ತದೆ. ತಮಗೊಲಿದ ಕಲೆಯನ್ನು ನಿಷ್ಠೆಯಿಂದ ಸದುಪಯೋಗ ಪಡಿಸಿಕೊಳ್ಳಬೇಕೆಂದು ರಘು ಕೋಟಿ ಹೇಳಿದರು. ಹಿರಿಯ ಸಾಹಿತಿ ಭಾರದ್ವಾಜ್.ಕೆ. ಅನಂತ ತೀರ್ಥ ಅವರು ಸಾಹಿತ್ಯದ ನುಡಿಗಳನ್ನು ನುಡಿದರು, ಕಾವ್ಯ ಕವಿತೆಯಲ್ಲಿ ಆಸಕ್ತಿ ಇರುವವರು ಪ್ರಾಸ ಬದ್ಧವಾಗಿ ಕಲಿಕಾ ಮಾರ್ಗವನ್ನು ಅನುಸರಿಸಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಜಿಲ್ಲಾ ಉಪಾಧ್ಯಕ್ಷೆ ರಾಣಿ ರವೀಂದ್ರ, ಸಂಚಾಲಕರಾದ ಮಹೇಂದ್ರ ಉಪಸ್ಥಿತರಿದ್ದರು. ಕವಿ ಗೋಷ್ಠಿಯಲ್ಲಿ 20 ಕ್ಕೂ ಹೆಚ್ಚು ಕವಿಗಳು, ಪಾಲ್ಗೊಂಡಿದ್ದರು.









