
ಮಡಿಕೇರಿ ಆ.19 NEWS DESK : ಮತಗಳ್ಳತನ ಪ್ರಕರಣದ ಕುರಿತು ಇತ್ತೀಚೆಗೆ ಕೇಳಿ ಬರುತ್ತಿರುವ ಆರೋಪವನ್ನು ಕೇಂದ್ರ ಸರಕಾರ ಗಂಭೀರವಾಗಿ ಪರಿಗಣಿಸುವ ಮೂಲಕ ಸರ್ವೋಚ್ಚ ನ್ಯಾಯಾಲಯದ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ಆಯೋಗ ರಚಿಸಿ ತನಿಖೆಗೆ ಆದೇಶಿಸಬೇಕು ಎಂದು ಆಮ್ ಆದ್ಮಿ ಪಾರ್ಟಿಯ ಕೊಡಗು ಜಿಲ್ಲಾಧ್ಯಕ್ಷ ಮುಕ್ಕಾಟಿರ ಅಪ್ಪಯ್ಯ ಒತ್ತಾಯಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಇತ್ತೀಚಿನ ವರ್ಷಗಳಲ್ಲಿ ಮತಗಳ್ಳತನ ನಡೆಯುತ್ತಿದೆ ಎಂದು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಆರೋಪಿಸಿದ್ದಾರೆ. ಈ ಆರೋಪದ ಬಗ್ಗೆ ಚುನಾವಣಾ ಆಯೋಗವು ರಾಷ್ಟ್ರದ ಜನತೆಗೆ ನಿರಾಧಾರ ಎಂದು ನಿರೂಪಿಸುವ ಕ್ರಮಗಳನ್ನು ತೆಗೆದುಕೊಳ್ಳಬೇಕೆ ಹೊರತು ಅಸಂವಿಧಾನಿಕವಾಗಿ ಆರೋಪ, ಪ್ರತ್ಯಾರೋಪದಲ್ಲಿ ತೊಡಗುವುದು ಸರಿಯಲ್ಲವೆಂದು ತಿಳಿಸಿದ್ದಾರೆ. ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಚುನಾವಣೆಗಳು ನ್ಯಾಯ ಸಮ್ಮತವಾಗಿ ನಡೆಯುತ್ತಿವೆಯೇ ಎನ್ನುವ ಕುರಿತು ಸತ್ಯಾಂಶ ಬಹಿರಂಗಪಡಿಸಲು ಸರ್ವೋಚ್ಚ ನ್ಯಾಯಾಲಯದ ಹಾಲಿ ನ್ಯಾಯಾಧೀಶರುಗಳ ಆಯೋಗವನ್ನು ರಚಿಸಿ ಸಮಗ್ರ ತನಿಖೆ ನಡೆಸುವ ಅಗತ್ಯವಿದೆ. ಯುವ ಪೀಳಿಗೆ ರಾಷ್ಟ್ರದ ಸಂವಿಧಾನ ಮತ್ತು ಮತದಾನ ಪ್ರಕ್ರಿಯೆಗಳಲ್ಲಿ ನಂಬಿಕೆಯನ್ನು ಕಳೆದುಕೊಳ್ಳುವ ಮೊದಲು ಆಡಳಿತ ವ್ಯವಸ್ಥೆ ಎಚ್ಚೆತ್ತುಕೊಳ್ಳಬೇಕು. ಚುನಾವಣಾ ಆಯೋಗ ರಾಜಕೀಯ ಪ್ರೇರಿತವಾಗಿರಬಾರದು ಮತ್ತು ಹೇಳಿಕೆಗಳನ್ನು ನೀಡಬಾರದು. ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಳಿಸಿ ಬೆಳೆಸುವ ಮಹತ್ವದ ಜವಾಬ್ದಾರಿ ಎಲ್ಲರ ಮೇಲಿದೆ. ಆದ್ದರಿಂದ ಕೇಂದ್ರ ಸರಕಾರ ತಕ್ಷಣ ಮತಗಳ್ಳತನ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆಗೆ ಆದೇಶಿಸಬೇಕು ಎಂದು ಮುಕ್ಕಾಟಿರ ಅಪ್ಪಯ್ಯ ಆಗ್ರಹಿಸಿದ್ದಾರೆ.








