
ಮಡಿಕೇರಿ ಆ.19 NEWS DESK : ಕೊಡಗು ಜಿಲ್ಲೆಯ ಪ್ರಥಮ ‘ಕಾನೂನು ಕಾಲೇಜು’ ವಿರಾಜಪೇಟೆಯ ಕಾವೇರಿ ಕಾಲೇಜಿನಲ್ಲಿ ಪ್ರಸಕ್ತ ಸಾಲಿನ ಸೆಪ್ಟೆಂಬರ್‌ನಿಂದ ಆರಂಭಗೊಳ್ಳಲಿದ್ದು, ಈಗಾಗಲೆ ಪ್ರವೇಶಾತಿ ಪ್ರಕ್ರಿಯೆಗಳು ಆರಂಭಗೊಂಡಿದೆ. ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಗೋಣಿಕೊಪ್ಪಲು ಕಾವೇರಿ ಎಜುಕೇಷನ್ ಸೊಸೈಟಿಯ ಅಧ್ಯಕ್ಷರಾದ ಮಂಡೇಪಂಡ ಸುಗುಣ ಮುತ್ತಣ್ಣ ಅವರು, ಎಜುಕೇಷನ್ ಸೊಸೈಟಿಯ ವತಿಯಿಂದ ಬೆಂಗಳೂರಿನ ಕೆವಿವಿ ಎಜುಕೇಷನಲ್ ಟ್ರಸ್ಟ್ ನ ಸಹಕಾರದೊಂದಿಗೆ ಮೂರು ವರ್ಷಗಳ ‘ಕಾನೂನು ಕಾಲೇಜು’ ಆರಂಭಗೊಳ್ಳಲಿದೆ. ಯಾವುದೇ ಪದವಿ ಪಡೆದ ವಿದ್ಯಾರ್ಥಿಗಳು ಕಾನೂನು ವ್ಯಾಸಂಗಕ್ಕೆ ದಾಖಲಾಗಲು ಅವಕಾಶವನ್ನು ಕಲ್ಪಿಸಲಾಗಿದೆಯೆಂದು ಸ್ಪಷ್ಟಪಡಿಸಿದರು. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ರಾಜ್ಯ ಕಾನೂನು ಮಹಾ ವಿದ್ಯಾನಿಲಯದ ನಿರ್ದೇಶನ ಮತ್ತು ಷರತ್ತುಗಳಂತೆ ಪ್ರವೇಶಾತಿಗಳನ್ನು ನೀಡಲಾಗುತ್ತದೆ. ಹೀಗಿದ್ದೂ ಜಿಲ್ಲೆಯ ವಿದ್ಯಾರ್ಥಿಗಳಿಗೆ ಕಾನೂನು ವ್ಯಾಸಂಗಕ್ಕೆ ಆದ್ಯತೆಯನ್ನು ನೀಡುವ ವಿಶ್ವಾಸವನ್ನು ವ್ಯಕ್ತಪಡಿಸಿ, ವಿರಾಜಪೇಟೆ ಕಾವೇರಿ ಕಾಲೇಜಿನಲ್ಲಿ ‘ಕಾನೂನು ಕಾಲೇಜು’ ಆರಂಭಕ್ಕೆ ಪೂರಕವಾಗಿ ಪ್ರತ್ಯೇಕ ಬ್ಲಾಕ್‍ನ್ನೆ ವ್ಯವಸ್ಥೆ ಮಾಡಲಾಗಿದೆಯೆಂದು ಹೇಳಿದರು. ಎಜುಕೇಷನ್ ಸೊಸೈಟಿಯ ಗೌರವ ಕಾರ್ಯದರ್ಶಿ ಕುಲ್ಲಚಂಡ ಪಿ.ಬೋಪಣ್ಣ ಮಾತನಾಡಿ, ಪ್ರಥಮ ವರ್ಷದ ಕಾನೂನು ತರಗತಿಗಳಿಗೆ 60 ವಿದ್ಯಾರ್ಥಿಗಳ ಪ್ರವೇಶಾತಿಗೆ ಅವಕಾಶವನ್ನು ಕಲ್ಪಿಸಲಾಗಿದೆ. ಈ ಕಾನೂನು ಕಾಲೇಜು ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಕಾನೂನು ಮಹಾ ವಿಶ್ವ ವಿದ್ಯಾನಿಲಯದ ಮಾನ್ಯತೆಯನ್ನು ಪಡೆದಿರುವುದಲ್ಲದೆ, ದೆಹಲಿಯ ಬಾರ್ ಕೌನ್ಸಿಲ್ ಆಫ್ ಇಂಡಿಯಾದಿಂದ ಅನುಮೋದನೆ ಗೊಂಡಿರುವುದಾಗಿ ಮಾಹಿತಿಯನ್ನಿತ್ತರು. ನೂತನ ಕಾನೂನು ಕಾಲೇಜಿನಲ್ಲಿ ಪ್ರವೇಶಾತಿ ಪಡೆಯಲು ರಾಜ್ಯ ಕಾನೂನು ವಿಶ್ವ ವಿದ್ಯಾನಿಲಯ ನಿಗದಿಪಡಿಸಿರುವ ಆ.28 ಕೊನೆಯ ದಿನವಾಗಿದೆ. ತರಗತಿಗಳು ಸೆಪ್ಟೆಂಬರ್ ಮೊದಲ ವಾರದಿಂದ ಆರಂಭಗೊಳ್ಳಲಿದೆಯೆಂದು ಸ್ಪಷ್ಟಪಡಿಸಿದರು. ಬೆಂಗಳೂರಿನ ಕೆವಿವಿ ಎಜುಕೇಷನಲ್ ಟ್ರಸ್ಟ್ ಅಧ್ಯಕ್ಷರಾದ ನಾಗೇಂದ್ರ ಜಿ.ಎನ್. ಮಾತನಾಡಿ, ಯಾವುದೇ ಅಂಗೀಕೃತ ವಿಶ್ವ ವಿದ್ಯಾನಿಲಯದಲ್ಲಿ ಪದವಿ ಪಡೆದ ವಿದ್ಯಾರ್ಥಿಗಳು ವಿರಾಜಪೇಟೆಯಲ್ಲಿ ಆರಂಭಗೊಳ್ಳುತ್ತಿರುವ ಕಾನೂನು ಕಾಲೇಜಿನಲ್ಲಿ ಪ್ರವೇಶಾತಿಯನ್ನು ಪಡೆದುಕೊಳ್ಳಬಹುದಾಗಿದೆ. ಈಗಾಗಲೆ ವಿರಾಜಪೇಟೆಯ ಕಾವೇರಿ ಕಾಲೇಜಿನಲ್ಲಿ ಕಾನೂನು ಕಾಲೇಜಿನ ಆರಂಭಕ್ಕೆ ಪೂರಕವಾದ ಮಾದರಿ ಕೊರ್ಟ್, ಪ್ರಾಯೋಗಿಕ ತರಗತಿ, ವ್ಯವಸ್ಥಿತವಾದ ಗ್ರಂಥಾಲಯ, ವಸತಿ ನಿಲಯ, ಅಧ್ಯಾಪಕರ ನೇಮಕಾತಿ, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬಸ್ ವ್ಯವಸ್ಥೆಗಳನ್ನು ಮಾಡಲಾಗಿದೆ. ಕರ್ನಾಟಕ ಲಾ ಅಕಾಡೆಮಿ ಅವರೊಂದಿಗೆ ಆನ್ ಲೈನ್ ಉಪನ್ಯಾಸ ವ್ಯವಸ್ಥೆಗಳನ್ನು ಕಲ್ಪಿಸಲಾಗುತ್ತದೆಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಕೆವಿವಿ ಎಜುಕೇಷನಲ್ ಟ್ರಸ್ಟ್ ನ ಕಾರ್ಯದರ್ಶಿ ವೇದಿಕ ರೆಡ್ಡಿ, ಸದಸ್ಯ ಟ್ರಸ್ಟಿ ಪ್ರಶಾಂತ್ ಉಪಸ್ಥಿತರಿದ್ದರು.









