
ಮಡಿಕೇರಿ ಆ.19 NEWS DESK : ಕಾಡಾನೆ ದಾಳಿಯಿಂದ ಮಹಿಳೆ ಪಾರಾದ ಘಟನೆ ಬಾಣವಾರ ಸಮೀಪದ ಭುವಂಗಾಲ ಗ್ರಾಮದಲ್ಲಿ ನಡೆದಿದೆ. ಕೊಟ್ಟಿಗೆಯಲ್ಲಿ ಹಾಲು ಕರೆಯುತ್ತಿದ್ದ ಮಹಿಳೆ ಮೇಲೆ ಕಾಡಾನೆ ದಾಳಿ ನಡೆಸಲು ಮುಂದಾಗಿದ್ದು, ಮಹಿಳೆ ಕಿರುಚುತ ಸಮೀಪದ ಮನೆಗೆ ಓಡಿ ಹೋಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಭುವಂಗಾಲ ಗ್ರಾಮದಲ್ಲಿ ಕಳೆದ 15ದಿನಗಳಿಂದ ಬಾಣವಾರ ಮೀಸಲು ಅರಣ್ಯ ಪ್ರದೇಶದ ಕಡೆಯಿಂದ ಬರುವ ಕಾಡಾನೆಗಳು ಸಿದ್ದಲಿಂಗಪುರ, ಬಾಣವಾರ, ಭುವಂಗಾಲ ವ್ಯಾಪ್ತಿಯ ಪೋಲಿಸ್ ಪೆದೆ ವಿವೇಕ್ ಸೇರಿದಂತೆ ರೈತರ ಜಮೀನಿಗೆ ದಾಳಿ ಮಾಡಿ ತೆಂಗು, ಸಿಹಿ ಗೆಣಸು, ಮರ ಗೆಣಸು ಸೇರಿದಂತೆ ಇತರೆ ಬೆಳೆಗಳನ್ನು ತಿಂದು ತುಳಿದು ಅಪಾರ ಪ್ರಮಾಣದಲ್ಲಿ ಬೆಳೆಗಳನ್ನು ನಷ್ಟ ಪಡಿಸಿದೆ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ. ಗ್ರಾಮದಲ್ಲಿ ಕಾಡಾನೆ ಹಗಲು ವೇಳೆಯಲ್ಲಿ ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆ ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು, ಸಾರ್ವಜನಿಕರು, ಗ್ರಾಮಸ್ಥರು ಭಯಭೀತರಾಗಿದ್ದಾರೆ. ಅರಣ್ಯ ಇಲಾಖೆ ಕಾಡಾನೆಯನ್ನು ತಕ್ಷಣವೆ ಕಾಡಿಗಟ್ಟಲು ಕ್ರಮ ಕೈಗೊಳ್ಳಬೇಕೆಂದು ಬೆಳೆಗಾರರು ಆಗ್ರಹಿಸಿದ್ದಾರೆ.









