
ಮಡಿಕೇರಿ ಆ.20 NEWS DESK : ಹಾಕತ್ತೂರು ಪ್ರೌಢಶಾಲೆಯಲ್ಲಿ ಕಳೆದ ಸಾಲಿನ ವಾರ್ಷಿಕ ಪರೀಕ್ಷೆಯಲ್ಲಿ ಶೇ.100 ರಷ್ಟು ಬರಲು ಕಾರಣರಾದ ಶಿಕ್ಷಕರನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸ್ಥಳಿಯ ದಾನಿಗಳಾದ ಕವನ್ ಭೀಷ್ಮ ಅವರು ಮಾತನಾಡಿ ನಾವು ಉತ್ತಮವಾದ ನಾಗರೀಕರಾಗಿರುವುದನ್ನು ಮುಖ್ಯವಾದ ಗುರಿಯನ್ನಾಗಿಸಿಕೊಳ್ಳಬೇಕು.ನಮ್ಮ ಶಾಲೆ ಪ್ರತಿ ವರ್ಷ ಸನ್ಮಾನಕ್ಕೆ ಭಾಜನರಾಗುತ್ತಿರುವುದು ನಮ್ಮ ಜವಾಬ್ದಾರಿಯನ್ನು ಹೆಚ್ಚು ಮಾಡುತ್ತಿದೆ. ಈ ಸನ್ಮಾನ ಪಡೆದುಕೊಂಡು ಸಿಕ್ಕ ಗೌರವವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ನುಡಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಡಿ.ಎಸ್.ಎಸ್ ಜಿಲ್ಲಾ ಸಂಚಾಲಕ ಹೆಚ್.ಎಲ್.ದಿವಾಕರ್, ದಲಿತ ಸಂಘರ್ಷ ಕಳೆದ ಒಂದು ದಶಕದಿಂದ ನಡೆಸಿದ ಸೇವೆ ಹಾಗೂ ವಿದ್ಯಾರ್ಥಿಗಳಿಗೆ, ಪೋಷಕರಿಗೆ ನೀಡಿದ ಸನ್ಮಾನದ ಉದ್ದೇಶ ಅವರು ಮತ್ತಷ್ಟು ಸಾಧನೆ ಮಾಡಲಿ ಎನ್ನುವುದು, ಸನ್ಮಾನದಿಂದ ಸ್ಪೂರ್ತಿ ಪಡೆಯುವ ಉಳಿದ ವಿದ್ಯಾರ್ಥಿಗಳು ತಾವೂ ಹೆಚ್ಚಿನ ಸಾಧನೆ ತೋರಲು ಪ್ರಯತ್ನ ಪಡುತ್ತಾರೆ. ವಿದ್ಯಾರ್ಥಿಗಳು ದೇಶದ ಶಕ್ತಿ ಅವರನ್ನು ಚಿಕ್ಕಂದಿನಿಂದಲೇ ಜಾಗೃತಗೊಳಿಸಬೇಕಿದೆ ಎಂದರು. ಮುಖ್ಯ ಅತಿಥಿಯಾದ ಮೇಕೇರಿ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಭೀಮಯ್ಯ ಮಾತನಾಡಿ, ವಿದ್ಯಾರ್ಥಿಗಳನ್ನು ಮುನ್ನಲೆಗೆ ತರುವಂತಹ ಶಿಕ್ಷಕರಿಗೆ ಸನ್ಮಾನ ನಡೆಸುವ ಕಾರ್ಯಕ್ರಮ ಹಾಗೂ ಮಕ್ಕಳಿಗೆ ಸನ್ಮಾನ ನೀಡುವುದು ನಿಜಕ್ಕೂ ಅಭಿನಂದನೀಯವೆಂದರು. ಅಂಬೇಡ್ಕರ್ ಅವರು ಶಾಲೆಯ ಹೊರಭಾಗದಲ್ಲಿ ಕುಳಿತು ಓದಿ ನಮ್ಮನ್ನೆಲ್ಲಾ ಒಳಗೆ ಕುಳಿತು ಓದುವ ಹಾಗೆ ಕಾನೂನು ರೂಪಿಸಿದ್ದಾರೆ. ಅವರನ್ನು ಎಂದಿಗೂ ಮರೆಯುವಂತಿಲ್ಲ ಎಂದರು. ತಾಲ್ಲೂಕು ಸಂಚಾಲಕ ದೀಪಕ್ ಪೊನ್ನಪ್ಪ, ಅಂಬೇಡ್ಕರ್ ಅವರ ಮಹತ್ವವನ್ನು ಉದಾಹರಣೆಗಳ ಸಹಿತ ವಿವರಿಸುತ್ತಾ, ಡಾ.ಬಿ.ಆರ್.ಅಂಬೇಡ್ಕರ್ ಅವರು ಯಾವ ರೀತಿ ಅಭ್ಯಾಸ ನಡೆಸುತ್ತಿದ್ದರು ಮತ್ತು ಆ ಶ್ರಮದಿಂದ ಅವರು ಗಳಿಸಿದ ಪದವಿಗಳು, ಸ್ಥಾನ, ಗೌರವದ ಅರಿವಿತ್ತರು. ವಿದ್ಯಾರ್ಥಿಗಳು ಯಾವ ಕಾರಣಕ್ಕೆ ತಮ್ಮ ಪಠ್ಯಪುಸ್ತಕಗಳ ಜೊತೆಗೆ ಇತರ ಪುಸ್ತಕಗಳನ್ನು ಓದಬೇಕು ಹಾಗೂ
ಈ ಓದು ಯಾವಾಗ ಅವರಿಗೆ ನೆರವಾಗುತ್ತದೆ ಎನ್ನುವುದನ್ನು ಸ್ಪಷ್ಟಪಡಿಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ತನ್ಮಯತೆಯಿಂದ ಅವರ ಮಾತುಗಳನ್ನು ಆಲಿಸುತ್ತಿದ್ದರು. ಶಾಲೆಯ ಮುಖ್ಯ ಶಿಕ್ಷಕರಾದ ವನಜ ಸ್ವಾಗತಿಸಿದರು, ಮೀನ ವಂದಿಸಿದರು. ಶಿಕ್ಷಕರನ್ನು ಸನ್ಮಾನಿಸಿದ ನಂತರ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆಯಿತು.








