
ಹೊದ್ದೂರು ಆ.20 NEWS DESK : ನಿವೇಶನ ರಹಿತ ಬಡ ಕೂಲಿ ಕಾರ್ಮಿಕರು ಇಂದು ಸಂವಿಧಾನದ ಕಾನೂನಾತ್ಮಕ ಹಕ್ಕನ್ನು ಪಡೆಯಲು ಸಾಮಾಜಿಕವಾಗಿ ಒಗ್ಗಟ್ಟಾಗಬೇಕು ಎಂದು ಬಹುಜನ ಕಾರ್ಮಿಕ ಸಂಘಟನೆಯ ಜಿಲ್ಲಾಧ್ಯಕ್ಷರಾದ ಕೆ.ಮೊಣ್ಣಪ್ಪ ಅವರು ಕರೆ ನೀಡಿದರು. ಬಹುಜನ ಕಾರ್ಮಿಕರ ಸಂಘಟನೆಯ ಜಿಲ್ಲಾ ಸಮಿತಿಯ ನೂತನ ಗ್ರಾಮ ಸಮಿತಿ ಪುನರ್ ರಚನಾ ಸಭೆಯು ಹೊದ್ದೂರು ಗ್ರಾಮ ಪಂಚಾಯಿತಿಯ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ಮಾತನಾಡಿದ ಅವರು, ಇಂದು ನಿವೇಶನ ರಹಿತ ಬಡ ಕೂಲಿ ಕಾರ್ಮಿಕರು ಹೀನಾಯ ವ್ಯವಸ್ಥೆಯಲ್ಲಿದ್ದು, ಹಲವು ವರ್ಷಗಳಿಂದ ಭೂಮಾಲಿಕರ ದಬ್ಬಾಳಿಕೆಗೆ ಒಳಗಾಗಿ ಲೈನ್ ಮನೆಗಳಲ್ಲಿ ಶೋಚನೀಯವಾಗಿ ಬದುಕು ಸಾಗಿಸುತ್ತಿದ್ದಾರೆ. ಸರ್ಕಾರದ ಕೆಲವು ಅಧಿಕಾರಿಗಳು ನಿವೇಶನ ರಹಿತ ಬಡ ಕೂಲಿ ಕಾರ್ಮಿಕರ ಮೂಲಭೂತ ಹಕ್ಕೋತ್ತಾಯಗಳ ನಿರ್ಲಕ್ಷ್ಯವೇ ಕಾರಣ ಮತ್ತು ಸರ್ಕಾರದ ಭೂ ಗುತ್ತಿಗೆ ನೀತಿಯನ್ನು ವಿರೋಧಿಸಿ ಟೀಕಿಸಿದರು. ಬಡ ಕೂಲಿ ಕಾರ್ಮಿಕರು ಸಾಮಾಜಿಕವಾಗಿ ಸಧೃಡಗೊಳಿಸಲು ಸಂಘಟನೆಯೇ ಮೂಲಧಾರ. ಸಂಘಟನೆಗಳನ್ನು ಬಲಪಡಿಸಲು ಗ್ರಾಮ ಮಟ್ಟದಲ್ಲಿ ಕಾಲೋನಿಗಳಿಗೆ ಭೇಟಿ ನೀಡಿ ಕಾರ್ಮಿಕರ ಸಮಸ್ಯೆಯನ್ನು ಆಲಿಸಬೇಕು ಮತ್ತು ಕಾರ್ಮಿಕರನ್ನು ಒಟ್ಟುಗೂಡಿಸುವ ಕೆಲಸವನ್ನು ಮಾಡಬೇಕು. ಯುವಕರು ಶಿಕ್ಷಣ ಸಂಘಟನೆ ಹೋರಾಟದ ಮೂಲಕ ರಾಜ್ಯಾಧಿಕಾರವನ್ನು ಪಡೆಯಲು ಧೈರ್ಯದಿಂದ ಒಗ್ಗಟ್ಟಾಗಿ ಶ್ರಮಿಸಬೇಕು ಎಂದು ತಿಳಿಸಿದರು. ಪೆಗ್ಗೋಳಿ ನಿವೇಶನ ಹೋರಾಟ ಸಮಿತಿಯ ಮೇಲುಸ್ತುವಾರಿ ಕಿರಣ್ ಜಗದೀಶ್ ಮಾತನಾಡಿ, ಕಾನ್ಸೀರಾಂಜೀ ನಗರ ಪಾಲೆಮಾಡುವಿನ ಅಂದಿನಿಂದ ಇಂದಿನವರೆಗಿನ ಹೋರಾಟದ ಬಗ್ಗೆ ಮೆಲುಕು ಹಾಕಿ, ಬಡವರ ಸಾಮಾಜಿಕ ಹಕ್ಕೊತ್ತಾಯಗಳು ಈಡೇರುವವರೆಗೆ ಹೋರಾಟಗಳು ಅನಿವಾರ್ಯವಾಗಿದೆ ಎಂದು ಹೇಳಿದರು. ಅಮ್ಮತಿ ನಿವೇಶನ ಹೋರಾಟ ಸಮಿತಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುಸುಮಾವತಿ ಆನಂದ್ ಅವರು ಮಾತನಾಡಿ, ಕೊಡಗಿನಲ್ಲಿ ನಿವೇಶನ ರಹಿತ ಬಡವರ ಪರವಾಗಿ ಧ್ವನಿ ಎತ್ತಿದ ಮೊದಲ ಹೋರಾಟ ಪಾಲೆಮಾಡು ಇಂದು ಕೊಡಗಿನಾದ್ಯಂತ ಮೂಲಭೂತ ಹಕ್ಕುಗಳಿಗಾಗಿ ಹೋರಾಟವು ವಿಸ್ತರಿಸಿದೆ. ಇನ್ನೂ ಕೂಡ ಹೋರಾಟಗಳು ನಿರಂತರವಾಗಿ ನಡೆಯುತ್ತದೆ ಎಂದು ತಿಳಿಸಿದರು. ಸಭೆಯಲ್ಲಿ ಅಮ್ಮತಿ ನಿವೇಶನ ಹೋರಾಟ ಸಮಿತಿಯ ಮೇಲುಸ್ತುವಾರಿ ಮಹೇಶ್, ಹನೀಫ್, ಅಧ್ಯಕ್ಷ ಪಾಪಣ್ಣ, ಪೆಗ್ಗೋಳಿ ಹೋರಾಟ ಸಮಿತಿಯ ಸುಜಾತ, ಪೊನ್ನತ್ ಮೊಟ್ಟೆ ಹೋರಾಟ ಸಮಿತಿಯ ಸೌಕತ್ ಆಲಿ, ಕಬಡಕೇರಿ ಹೋರಾಟ ಸಮಿತಿಯ ಸುರೇಶ್ , ಕಾನ್ಸಿರಾಂಜೀ ನಗರ ಪಾಲೆಮಾಡು ಹೋರಾಟ ಮತ್ತು ಅಭಿವೃದ್ಧಿ ಸಮಿತಿ ಸುರೇಶ್ ಪಿ.ಸಿ, ನೂತನವಾಗಿ ಕೋಕೇರಿ ನಿವೇಶನ ಹೋರಾಟದ ಮಂಜು, ಬಲಮೂರಿಯ ಕವೀನ್ , ಕೊಂಡಂಗೇರಿಯ ಅಣ್ಣು , ಪಾಲೆಮಾಡು ಕಾನ್ಸೀರಾಂಜೀ ನಗರ ಪಾಲೆಮಾಡುವಿನ ಅಭಿವೃದ್ಧಿ ಸಮಿತಿಯ ಸುರೇಶ್ ಪಿ.ಸಿ ಮತ್ತು ಡಾ. ಬಿ.ಆರ್.ಅಂಬೇಡ್ಕರ್ ಯುವಕ ಸಂಘದ ಅಧ್ಯಕ್ಷರಾದ ಎಂ.ಅಶ್ವತ್ ಮೌರ್ಯ ಮತ್ತು ಕೊಡಗು ಜಿಲ್ಲೆಯಾದ್ಯಂತ ಇರುವ ಭೂ & ನಿವೇಶನ ರಹಿತ ಮತ್ತು ಹಕ್ಕು ವಂಚಿತರ ಹೋರಾಟದ ಸ್ಥಳದಿಂದ ಸದಸ್ಯರು ಆಗಮಿಸಿದರು. ಸಭೆಯಲ್ಲಿ ಜಿಲ್ಲೆಯಾದ್ಯಂತ ನಿವೇಶನ ರಹಿತ ಗ್ರಾಮಗಳಲ್ಲಿ 20 ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಎಂ.ರಂಜಿತ್ ಮೌರ್ಯ ಸ್ವಾಗತಿಸಿ, ವಂದಿಸಿದರು.
ವರದಿ : ಎಂ. ರಂಜಿತ್ ಮೌರ್ಯ









