
ಮಡಿಕೇರಿ ಆ.20 NEWS DESK : ‘ಶೋಷಣೆ ಮತ್ತು ಬಡತನ’ ಮುಕ್ತವಾದ ಸಮಾಜ ನಿರ್ಮಾಣಕ್ಕಾಗಿ ಬದುಕಿನುದ್ದಕ್ಕೂ ಹೋರಾಟಗಳನ್ನು ನಡೆಸಿಕೊಂಡು ಬಂದ ದಿ.ದೇವರಾಜ ಅರಸು, ಅಂತಃಕರಣದ ರಾಜ್ಯಭಾರದ ಮೂಲಕ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿದ ಮಹಾನ್ ನೇತಾರರಾಗಿದ್ದಾರೆ ಎಂದು ಮೈಸೂರು ವಿಶ್ವ ವಿದ್ಯಾನಿಲಯದ ಮಾಜಿ ಸಿಂಡಿಕೇಟ್ ಸದಸ್ಯರು ಹಾಗೂ ಅರಗು ಮತ್ತು ಬಣ್ಣದ ಕಾರ್ಖಾನೆ ನಿಗಮದ ಮಾಜಿ ಅಧ್ಯಕ್ಷರಾದ ಹೆಚ್.ಎ.ವೆಂಕಟೇಶ್ ತಿಳಿಸಿದ್ದಾರೆ. ಕೊಡಗು ಜಿಲ್ಲಾ ಅಹಿಂದ ಒಕ್ಕೂಟ ಮತ್ತು ಸಹಮತ ವೇದಿಕೆಯ ಸಂಯುಕ್ತಾಶ್ರಯದಲ್ಲಿ ನಗರದ ಲಯನ್ಸ್ ಸಭಾಂಗಣದಲ್ಲಿ ನಡೆದ ದಿ.ಡಿ.ದೇವರಾಜ ಅರಸು ಅವರ 110ನೇ ಜನ್ಮ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ದೇವರಾಜ ಅರಸು ಅವರನ್ನು ಮುಖ್ಯಮಂತ್ರಿಗಳಾಗಿದ್ದವರು ಎನ್ನುವ ಕಾರಣದಿಂದ ಜನತೆ ನೆನಪಿಸಿಕೊಳ್ಳುತ್ತಿಲ್ಲ. ಬದಲಾಗಿ ಅವವರು ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಶೋಷಿತ ಸಮುದಾಯಗಳಿಗೆ ಸಾಮಾಜಿಕ ನ್ಯಾಯವನ್ನು ಒದಗಿಸಲು ಶ್ರಮಿಸಿದ ಮಹಾನ್ ನೇತಾರರಾಗಿದ್ದರೆಂದು ಸ್ಮರಿಸುತ್ತಾರೆ. ಇವರು ತಮ್ಮ ಆಡಳಿತದ ಅವಧಿಯಲ್ಲಿ ತಂದ ದೂರದೃಷ್ಟಿಯ ಜನಪರವಾದ ಯೋಜನೆಗಳು, ಆಡಳಿತ ವೈಖರಿಗಳು ರಾಜ್ಯದಲ್ಲಿ ಹೊಸ ರಾಜಕೀಯ ವಾತಾವರಣವನ್ನೆ ಸೃಷ್ಟಿಸಿತ್ತು. ಅಂದಿನ ದಿನಮಾನಗಳಲ್ಲಿ ಅರಸು ಆಡಳಿತ ರಾಷ್ಟ್ರದ ಇತರ ರಾಜ್ಯಗಳಿಗೂ ಮಾದರಿಯದ್ದಾಗಿತ್ತೆಂದು ಹೇಳಿದರು. ಅರಸು ಅವರು ತಮ್ಮ ಆಡಳಿತದ ಅವಧಿಯಲ್ಲಿ ಪರಿಶಿಷ್ಟರ ಮೀಸಲಾತಿಯೊಂದಿಗೆ ದೇಶದಲ್ಲೆ ಪ್ರಥಮವಾಗಿ ಹಿಂದುಳಿದ ವರ್ಗಗಳಿಗೆ ಶೇ.32ರಷ್ಟು ಮೀಸಲಾತಿಯನ್ನು ಶಿಕ್ಷಣ ಮತ್ತು ಉದ್ಯೋಗದಲ್ಲಿ ಒದಗಿಸಿದ್ದರು. ಆ ಮೂಲಕ ಹಿಂದುಳಿದ ಸಮಾಜದ ಮಂದಿಯೂ ಶೈಕ್ಷಣಿಕವಾಗಿ ಮುಂದು ಬರಬೇಕೆನ್ನುವ ಉದಾತ್ತತೆಯನ್ನು ತೋರಿಸಿದ್ದರೆಂದು ತಿಳಿಸಿದರು. ಅರಸು ಅವರು ತಮ್ಮ ಆಡಳಿತದ ಅವಧಿಯಲ್ಲಿ, ಸಮಾಜದ ತಳಸ್ತರದಲ್ಲಿದ್ದ ಹಿಂದುಳಿದವರು, ಬಡವರಿಗೆ ಧ್ವನಿ ನೀಡುವ ಪ್ರಯತ್ನವನ್ನು ತಮ್ಮ ಆಡಳಿತದ ಮೂಲಕ ಮಾಡಿದ್ದರು ಹಾಗೂ ಸಮಾಜದಲ್ಲಿ ನಿಲ್ಲಲು ಶಕ್ತಿ ಇಲ್ಲದವರಿಗೆ ತಮ್ಮ ಕಾರ್ಯ ಯೋಜನೆ, ದೂರದೃಷ್ಟಿಯ ಚಿಂತನೆಗಳಿಂದ ನಿಲ್ಲುವ ಶಕ್ತಿಯನ್ನು ನೀಡಿದ್ದರು. ಇವರು ತಮ್ಮ ಅವಧಿಯಲ್ಲಿ ಉಳುವವನಿಗೆ ಭೂಮಿಯ ಒಡೆತನ, ಮಲ ಹೊರುವ ಪದ್ಧತಿ ನಿಷೇಧ ಮೊದಲಾದವುಗಳನ್ನು ಜಾರಿಗೆ ತಂದರೆಂದು ಹೆಚ್.ಎ.ವೆಂಕಟೇಶ್ ವಿವರಿಸಿದರು. ಅತ್ಯಂತ ಕಡಿಮೆ ಸಂಖ್ಯೆಯ ಅರಸು ಸಮುದಾಯಕ್ಕೆ ಸೇರಿದ ದೇವರಾಜ ಅರಸು ಅವರು, ಸಮಾಜದ ಶೋಷಿತ ವರ್ಗದ ಏಳಿಗೆಗಾಗಿ ತಮ್ಮ ಬದುಕನ್ನು ಸವೆಸಿದರು. ಇಂತಹವರ ಮೇಲೂ ಅಪಪ್ರಚಾರಗಳು ಅಂದಿನ ಕಾಲದಲ್ಲೂ ನಡೆದಿತ್ತೆಂದು ವಿಷಾದಿಸಿದರು. ಸಭಾಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಅಹಿಂದ ಒಕ್ಕೂಟದ ಸ್ಥಾಪಕಾಧ್ಯಕ್ಷರು ಹಾಗೂ ಸಹಮತ ವೇದಿಕೆಯ ಅಧ್ಯಕ್ಷ ಟಿ.ಪಿ.ರಮೇಶ್ ಅವರು, 1991ರಲ್ಲಿ ಕೊಡಗಿನಲ್ಲಿ ಅಹಿಂದ ಒಕ್ಕೂಟದ ಸ್ಥಾಪನೆಯಾಯಿತು. ಆ ಮೂಲಕ ಜಿಲ್ಲೆಯಲ್ಲಿನ ಅಲ್ಪಸಂಖ್ಯಾತರು ಹಿಂದುಳಿದವರು, ದಲಿತ ಸಮುದಾಯದ ಸಂಕಷ್ಟಗಳ ನಿವಾರಣೆಗೆ ಶ್ರಮಿಸುತ್ತಾ ಬಂದಿದೆ. ಅಹಿಂದ ಹೋರಾಟಗಳಿಂದ ತಳ ಸಮುದಾಯದ ಮಂದಿಯೂ ಜಿಲ್ಲಾ ಪಂಚಾಯ್ತಿ, ಗ್ರಾಮ ಪಂಚಾಯ್ತಿ ಚುನಾವಣೆಗಳಲ್ಲಿ ಆಯ್ಕೆಯಾಗಿ ಅಧಿಕಾರವನ್ನು ಪಡೆಯಲು ಸಾಧ್ಯವಾಯಿತೆಂದು ತಿಳಿಸಿದರು. ದೇವರಾಜ ಅರಸು ಅವರು ತಳ ಸಮುದಾಯಗಳ ಕಲ್ಯಾಣಕ್ಕಾಗಿ ರೂಪಿಸಿದ ಕಾರ್ಯಕ್ರಮಗಳ ಬಗ್ಗೆ ಇಂದಿನ ಯುವ ಸಮೂಹಕ್ಕೆ ತಿಳಿಸಿಕೊಡುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ ಎಂದರು. *ಸಾಧಕರಿಗೆ ಸನ್ಮಾನ* ಕಾರ್ಯಕ್ರಮದಲ್ಲಿ ಖ್ಯಾತ ವೈದ್ಯರಾದ ಡಾ.ಕೆ.ಬಿ.ಸೂರ್ಯಕುಮಾರ್, ಸೋಮವಾರಪೇಟೆಯ ಕಾರ್ಮಿಕ ಮುಖಂಡ ಡಿ.ಎಸ್.ನಿರ್ವಾಣಪ್ಪ, ಕುಶಾಲನಗರದ ಸಮಾಜ ಸೇವಕ ವಿ.ಪಿ.ಶಶಿಧರ್, ಮಡಿಕೇರಿ ನಗರಸಭೆಯ ಪೌರಸೇವಾ ಹಿರಿಯ ಸಿಬ್ಬಂದಿ ರಾಮು, ಪೊನ್ನಂಪೇಟೆ ಕಾಟ್ರಕೊಲ್ಲಿಯ ಸಮಾಜ ಸೇವಕ ಎರ್ಮು ಹಾಜಿ, ಮಡಿಕೇರಿ ನಗರಸಭೆಯ ನಿವೃತ್ತ ದಫೇದಾರ್ ಜಿ.ಎ.ಚಾಮಿ, ಕುಶಾಲನಗರದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಸಂಯೋಜಕರಾದ ಲೀಲಾವತಿ ಹಾಗೂ ನಾಗರಹೊಳೆ ಕುಟ್ಟದ ಬುಡಕಟ್ಟು ಸಮುದಾಯದ ನಾಯಕ ಶಿವು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. *ವಿದ್ಯಾರ್ಥಿಗಳಿಗೆ ಸನ್ಮಾನ* ಕಳೆದ 10ನೇ ತರಗತಿ ಪರೀಕ್ಷೆಯಲ್ಲಿ ಜಿಲ್ಲೆಗೆ ಅತೀ ಹೆಚ್ಚು ಅಂಕ ಗಳಿಸಿದ ಸೋಮವಾರಪೇಟೆಯ ವಿಶ್ವಮಾನವ ಕುವೆಂಪು ಪ್ರೌಢ ಶಾಲೆಯ ಆದ್ವಿ ಸಿ.ಎಸ್., ಪಂಚಮಿ ಕೆ.ಸಿ., ವಿರಾಜಪೇಟೆ ಶ್ರೀಕಾವೇರಿ ಪ್ರೌಢಶಾಲೆಯ ಆಶ್ರಯ್ ಅಕ್ಕಮ್ಮ, ಗೋಣಿಕೊಪ್ಪಲು ಕಳತ್ಮಾಡಿನ ಲಯನ್ಸ್ ಪ್ರೌಢಶಾಲೆಯ ತೇಜಸ್ ಭೀಮಯ್ಯ ಎಂ.ಡಿ., ಕೋಡಂಬೂರು ಜ್ಞಾನಜ್ಯೋತಿ ಪ್ರೌಢ ಶಾಲೆಯ ಮಹಮ್ಮದ್ ಸಾಹಿಲ್ ಸಿ.ಎಂ. ಹಾಗೂ ಕೂಡ್ಲೂರು ಯೂನಿಕ್ ಅಕಾಡೆಮಿ ಪ್ರೌಢಶಾಲೆಯ ಸಮೃದ್ಧಿ ಆಚಾರ್ ಕೆ.ಎಂ. ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಆರಂಭದಲ್ಲಿ ವಿವಿಧ ಶಾಲಾ ವಿದ್ಯಾರ್ಥಿಗಳಿಗಾಗಿ ದೇಶಭಕ್ತಿ ಗೀತೆ ಗಾಯಕ ಸ್ಪರ್ಧಾ ಕಾರ್ಯಕ್ರಮ ನಡೆಯಿತು. ವೇದಿಕೆಯಲ್ಲಿ ಸಾಹಿತಿಗಳಾದ ಡಾ.ಬೆಸೂರು ಮೋಹನ್ ಪಾಳೇಗಾರ್, ಅಹಿಂದ ಒಕ್ಕೂಟದ ಜಿಲ್ಲಾಧ್ಯಕ್ಷ ಟಿ.ಎಂ.ಮುದ್ದಯ್ಯ, ಕೊಡವ ಭಾಷಿಕ ಸಮುದಾಯಗಳ ಒಕ್ಕೂಟದ ಅಧ್ಯಕ್ಷರಾದ ಡಾ. ಸುಭಾಷ್ ನಾಣಯ್ಯ, ಜಿಲ್ಲಾ ದಸಂಸ ಸಂಚಾಲಕ ಹೆಚ್.ಎಲ್.ದಿವಾಕರ್, ಸೋಮವಾರಪೇಟೆಯ ಸರ್ಕಾರಿ ನೋಟರಿ ಬಿ.ಇ.ಜಯೇಂದ್ರ ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲಾ ಮಹಿಳಾ ಬರಹಗಾರರ ಸಂಘದ ಸದಸ್ಯರು ನಾಡಗೀತೆಯನ್ನು, ಗಾಯಕ ಲಿಯಾಕತ್ ಆಲಿ ದೇಶಭಕ್ತಿ ಗೀತೆಯನ್ನು ಹಾಡಿದರು. ಸಹಮತ ವೇದಿಕೆಯ ಮೋಹನ್ ಮೌರ್ಯ ಸ್ವಾಗತಿಸಿ, ಪುದಿಯನೆರವನ ರೇವತಿ ರಮೇಶ್ ಕಾರ್ಯಕ್ರಮ ನಿರೂಪಿಸಿದರು.









