
ಮಡಿಕೇರಿ ಆ.21 NEWS DESK : ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2024-25ನೇ ಸಾಲಿನಲ್ಲಿ ಒಟ್ಟು ರೂ.15577.26 ಲಕ್ಷಗಳ ವಹಿವಾಟು ನಡೆಸಿದ್ದು, ರೂ.54.90 ಲಕ್ಷ ನಿವ್ವಳ ಲಾಭ ಗಳಿಸಿದೆ. ಸದಸ್ಯರಿಗೆ ಶೇ.15ರಂತೆ ಡಿವಿಡೆಂಡ್ ನೀಡುವ ಕುರಿತು ಆ.24 ರಂದು ವಾರ್ಷಿಕ ಮಹಾಸಭೆಯ ಒಪ್ಪಿಗೆಗೆ ಮಂಡಿಸಲು ನಿರ್ಧರಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿಉತ್ತಪ್ಪ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆ.24 ರಂದು ಸಂಘದ 48ನೇ ಮಹಾಸಭೆ ಶ್ರೀ ನರೇಂದ್ರಮೋದಿ ಭವನದಲ್ಲಿ ನಡೆಯಲಿದ್ದು, ಸರ್ವ ಸದಸ್ಯರು ತಪ್ಪದೆ ಹಾಜರಾಗುವಂತೆ ಮನವಿ ಮಾಡಿದರು. 2024-25ನೇ ಸಾಲಿನ ಮಾರ್ಚ್ ಅಂತ್ಯಕ್ಕೆ ಸಂಘದಲ್ಲಿ ಒಟ್ಟು ಎ ತರಗತಿಯ 1195 ಸದಸ್ಯರಿದ್ದು, ಸದಸ್ಯರಿಂದ ಪಾಲು ಬಂಡವಾಳ ಒಟ್ಟು ರೂ 125.62 ಲಕ್ಷಗಳಿರುತ್ತದೆ. ಕ್ಷೇಮ ನಿಧಿ ಸೇರಿ ಇತರೆ ನಿಧಿಗಳು ರೂ.355.04 ಲಕ್ಷಗಳು, ನಿರಖು ಠೇವಣಿ ಸಂಚಯ ಠೇವಣಿ ಹಾಗೂ ಇತರೆ ಠೇವಣಿ ಸೇರಿ ಒಟ್ಟು 1975.07 ಲಕ್ಷ ರೂ.ಗಳಿದೆ ಎಂದು ತಿಳಿಸಿದರು. ಸಂಘದ ಬಂಡವಾಳವನ್ನು ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಪಾಲು ಹಣ, ಕ್ಷೇಮ ನಿಧಿ ಹಾಗೂ ನಿರಖು ಠೇವಣಿಯಲ್ಲಿ ಹಾಗೂ ಇತರೆ ಸಹಕಾರ ಸಂಸ್ಥೆಯಲ್ಲಿ ಪಾಲು ಮತ್ತು ನಿರಖು ಠೇವಣಿ ರೂಪದಲ್ಲಿ ಒಟ್ಟು ರೂ.597.54 ಲಕ್ಷಗಳನ್ನು ಠೇವಣಿ ಮಾಡಲಾಗಿದೆ. ಸದಸ್ಯರ ಅವಶ್ಯಕತೆಗನುಗುಣವಾಗಿ ಕೆ.ಸಿ.ಸಿ ಫಸಲು ಸಾಲ ಸೇರಿ 2024-25ನೇ ಸಾಲಿನಲ್ಲಿ ರೂ.2344.14 ಲಕ್ಷ ಸಾಲ ಸದಸ್ಯರಿಗೆ ವಿತರಿಸಲಾಗಿದೆ ಎಂದು ತಿಳಿಸಿದರು. ಸಂಘವು ಎಂ.ಸಿ.ಎಫ್ ಮದ್ರಾಸ್ ಫರ್ಟಿಲೈಸರ್ಸ್ ಇಂಡಿಯನ್ ಪೊಟ್ಯಾಷ್ ಇಫ್ಕೊ ಫ್ಯಾಕ್ಟ್, ಪ್ಯೂಚರ್ ಫರ್ಟಿಲೈಸರ್ಸ್ ಜುವಾರಿ, ಕೋರಮಂಡಲ್, ಸ್ಟೇನ್ಸ್, ಸಂಸ್ಥೆಗಳ ಸಗಟು ಮತ್ತು ರಿಟೇಲ್ ಲೈಸನ್ಸ್ ಹೊಂದಿದ್ದು ನೇರವಾಗಿ ರಸಗೊಬ್ಬರ ಖರೀದಿಸಿ ಸ್ಪರ್ಧಾತ್ಮಕ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಇಲ್ಲಿಯವರೆಗೆ ಸಂಘದಲ್ಲಿ ಗೊಬ್ಬರ ಕೊರತೆ ಉಂಟಾಗಿಲ್ಲ. 2024-25ನೇ ಸಾಲಿನಲ್ಲಿ ಸದಸ್ಯರು ಹಾಗೂ ಗ್ರಾಹಕರಿಗೆ ಬೇಕಾದ ರಸಗೊಬ್ಬರ, ಹತ್ಯಾರು, ಸಿಮೆಂಟ್ ಹಾಗೂ ಇತರೆ ಅಗತ್ಯ ಸಮಾಗ್ರಿ ರೂ.601.53 ಲಕ್ಷಗಳ ವಹಿವಾಟು ನಡೆಸಿ ರೂ.38.22 ಲಕ್ಷ ವ್ಯಾಪಾರ ಲಾಭಗಳಿಸಿದೆ ಎಂದು ಮಣಿಉತ್ತಪ್ಪ ಹರ್ಷ ವ್ಯಕ್ತಪಡಿಸಿದರು. ವ್ಯಾಪಾರಾಭಿವೃದ್ಧಿ ಸಾಲ ರೂ.10ಲಕ್ಷ, ಜಾಮೀನು ಸಾಲ ರೂ.3ಲಕ್ಷ ಮತ್ತು ಗುಂಪು ಸಾಲ ರೂ.50 ಸಾವಿರ ನೀಡಲಾಗುತ್ತಿದೆ. ಸಂಘ ಜನಸ್ನೇಹಿಯಾಗಿ ಮತ್ತು ರೈತಪರ ಚಿಂತನೆಯೊಂದಿಗೆ ಅಭಿವೃದ್ಧಿ ಹೊಂದುತ್ತಿದ್ದರೂ ಇಲ್ಲಿಯವರೆಗೆ ಯಾವುದೇ ರೀತಿಯ ಪ್ರಶಸ್ತಿಯನ್ನು ನೀಡದೆ ಇರುವುದು ವಿಷಾದನೀಯವೆಂದು ಬೇಸರ ವ್ಯಕ್ತಪಡಿಸಿದರು.
ಮುಖ್ಯ ಕಛೇರಿ ಕಟ್ಟಡದ ಮೇಲ್ಭಾಗದಲ್ಲಿ ಪುಣ್ಯಕೋಟಿ ಅತಿಥಿಗೃಹ ನಿರ್ಮಿಸಿ ಬಾಡಿಗೆಗೆ ನೀಡಲಾಗುತ್ತಿದ್ದು, ಲಾಭದಲ್ಲಿ ಮುನ್ನಡೆದಿದೆ. ಸಂಘದಲ್ಲಿ ಮಣ್ಣು ಪರೀಕ್ಷಾಕೇಂದ್ರವನ್ನು ತೆರೆದು ರೈತರಿಗೆ ಅನುಕೂಲ ಕಲ್ಪಿಸಲಾಗಿದೆ. ಇದೀಗ ಇ-ಸ್ಟ್ಯಾಂಪ್ ಸೌಲಭ್ಯ ಮತ್ತು ಆರ್‍ಟಿಸಿ ಕೂಡ ತೆಗೆದುಕೊಡಲಾಗುವುದು. ಸಾರ್ವಜನಿಕರಿಗೆ ಅನುಕೂಲವಾಗುವಂತೆ ಶುದ್ಧನೀರಿನ ಘಟಕವನ್ನು ಸ್ಥಾಪಿಸಲಾಗಿದೆ. ತಾವು ಆರಂಭದಲ್ಲಿ ಅಧಿಕಾರ ವಹಿಸಿಕೊಂಡ ಸಂದರ್ಭ ನಷ್ಟದಲ್ಲಿದ್ದ ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವನ್ನು ಎಲ್ಲರ ಸಹಕಾರದಿಂದ ಲಾಭದೆಡೆಗೆ ಕೊಂಡೊಯ್ಯಲಾಗಿದೆ. ಎಲ್ಲಾ ರೈತರು, ಸದಸ್ಯರು, ಸಿಬ್ಬಂದಿ ವರ್ಗ ಹಾಗೂ ಸಾರ್ವಜನಿಕರು ಸಂಪೂರ್ಣ ಸಹಕಾರ ನೀಡುತ್ತಾ ಬಂದಿದ್ದಾರೆ ಎಂದು ಮಣಿಉತ್ತಪ್ಪ ತಿಳಿಸಿದರು. **ಸನ್ಮಾನ** ಪ್ರತಿವರ್ಷ ನಡೆಯುವ ಸಂಘದ ಮಹಾಸಭೆಯಲ್ಲಿ ಸಾಧಕರನ್ನು ಸನ್ಮಾನಿಸುತ್ತಾ ಬರಲಾಗುತ್ತಿದೆ. ಈ ಬಾರಿ ಆ.24 ರಂದು ಬೆಳಿಗ್ಗೆ 10 ಗಂಟೆಗೆ ನಡೆಯುವ 48ನೇ ಮಹಾಸಭೆಯಲ್ಲಿ ನಾಲ್ಕು ಚಿನ್ನದ ಪದಕಗಳೊಂದಿಗೆ ಪಿಹೆಚ್‍ಡಿ ಪದವಿ ಪಡೆದಿರುವ ಸಂಘದ ಸದಸ್ಯ ಗಣೇಶ್ ಅವರ ಪುತ್ರಿ ಸೂದನ ಧನ್ಯ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದರು. ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಪೇರಿಯನ ಎಸ್.ಪೂಣಚ್ಚ, ನಿರ್ದೇಶಕರಾದ ಬಿ.ಎಂ.ಕಾಶಿ, ಬಟ್ಟೀರ ಸಿ.ವೇಣುಗೋಪಾಲ, ಮರದಾಳು ಜಿ.ಚೇತನ್ ಹಾಗೂ ಚೋಳಪಂಡ ಎಂ.ವಿಜಯ ಉಪಸ್ಥಿತರಿದ್ದರು.








