
ಮಡಿಕೇರಿ ಆ.25 NEWS DESK : ಚೇನಂಡ ಕುಟುಂಬದ ಸಾರಥ್ಯದಲ್ಲಿ 2026ರ ಕೊಡವ ಕೌಟುಂಬಿಕ ಹಾಕಿ ಉತ್ಸವ ನಾಪೋಕ್ಲುವಿನಲ್ಲಿ ನಡೆಯಲಿದೆ. ಏ.5 ರಿಂದ ಮೇ 2 ರವರೆಗೆ ಜನರಲ್ ಕೆ.ಎಸ್.ತಿಮ್ಮಯ್ಯ ಮೈದಾನದಲ್ಲಿ ಹಾಕಿ ಹಬ್ಬವನ್ನು ಆಯೋಜಿಸಲಾಗಿದ್ದು, ‘ಪ್ರತಿ ಒಂದು ಗೋಲಿಗೆ ಒಂದು ಸಸಿ’ ನೆಡುವ ಕಾರ್ಯಕ್ರಮ ಈ ಬಾರಿಯ ವಿಶೇಷ ಎಂದು ಚೇನಂಡ ಕುಟುಂಬದ ಪ್ರಮುಖರು ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚೇನಂಡ ಹಾಕಿ ಉತ್ಸವದ ಕಾರ್ಯದರ್ಶಿ ಚೇನಂಡ ಮಧು ಮಾದಯ್ಯ ಅವರು 1997ರಲ್ಲಿ ಪಾಂಡಂಡ ಕುಟ್ಟಪ್ಪ ಅವರ ಕನಸಿನ ಕೂಸಾಗಿ ಕರಡ ಗ್ರಾಮದಲ್ಲಿ ಹುಟ್ಟಿದ ಕೊಡವ ಕೌಟುಂಬಿಕ ಹಾಕಿ ಉತ್ಸವ ಇಂದು ಬೃಹದಾಕಾರವಾಗಿ ಬೆಳೆದು ಗಿನ್ನಿಸ್ ಬುಕ್ ಆಫ್ ವಲ್ಡ್ ರೆಕಾಡ್ರ್ಸ್ ಮತ್ತು ವಲ್ರ್ಡ್ ವೈಡ್ ಬುಕ್ ಆಫ್ ರೆಕಾಡ್ರ್ಸ್‍ನ ಇತಿಹಾಸದ ಪುಟಗಳಲ್ಲಿ ರಾರಾಜಿಸುತ್ತಿದೆ. ವಿಶ್ವ ದಾಖಲೆ ಬರೆದಿರುವ ಕೊಡವ ಕೌಟುಂಬಿಕ ಹಾಕಿ ಉತ್ಸವ 2026ರಲ್ಲಿ ಚೇನಂಡ ಕುಟುಂಬದ ನೇತೃತ್ವದಲ್ಲಿ ನಡೆಯಲಿದೆ ಎಂದರು. ಕೊಡಗಿನಲ್ಲಿ ಸುಮಾರು 1 ಸಾವಿರಕ್ಕೂ ಅಧಿಕ ಕೊಡವ ಕುಟುಂಬಗಳಿವೆ. ಚೇನಂಡ ಕುಟುಂಬಕ್ಕೆ ತನ್ನದೇ ಆದ ಧ್ವಜ ಮತ್ತು ಲಾಂಛನಬೇಕೆಂದು ನಿರ್ಧರಿಸಿ ಕುಟುಂಬದ ಪೌರಾಣಿಕ ಇತಿಹಾಸವನ್ನು ಸಾರುವ ಲಾಂಛನವನ್ನು ರಚಿಸಿ ನೋಂದಾವಣಿ ಮಾಡಿಕೊಳ್ಳಲಾಗಿದೆ. ಕೇರಳದ ಪಯ್ಯಾವೂರಿನ ಈಶ್ವರ ದೇವಾಲಯಕ್ಕೆ ಕಾಲ್ನಡಿಗೆಯಲ್ಲಿ ನೈವೇದ್ಯ ಅಕ್ಕಿಯನ್ನು ಹೊತ್ತುಕೊಂಡು ಹೋಗಿದ್ದ ಚೇನಂಡ ಕುಟುಂಬದ ಆದಿಪುರುಷನ ಹಿನ್ನೆಲೆಯ ಅಂಶ ಲಾಂಛನದಲ್ಲಿದೆ ಎಂದು ತಿಳಿಸಿದರು. 2026ರಲ್ಲಿ ಕೇವಲ ಹಾಕಿ ಉತ್ಸವವನ್ನಷ್ಟೇ ನಡೆಸದೆ, ಹಲವು ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳನ್ನು ಕೂಡ ಚೇನಂಡ ಕುಟುಂಬ ಹಮ್ಮಿಕೊಂಡಿದೆ. ಕೊಡಗಿನ ಜನರು ಪ್ರಕೃತಿಯೊಂದಿಗೆ ಬೆರೆತು ಬದುಕುವವರಾಗಿದ್ದಾರೆ, ಕೊಡವರು ಪ್ರಕೃತಿಯ ಆರಾಧಕರಾಗಿದ್ದಾರೆ. ಇದೇ ಕಾರಣಕ್ಕೆ ಪ್ರಕೃತಿ ಆರಾಧನೆಗೆ ಪೂರಕವಾಗಿ ಚೇನಂಡ ಕುಟುಂಬವು ಮುಂದಿನ ಸಾಲಿನ ಹಾಕಿ ಉತ್ಸವದಲ್ಲಿ ‘ಪ್ರತಿ ಒಂದು ಗೋಲಿಗೆ ಒಂದು ಸಸಿ’ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಪ್ರಥಮ ಹಂತದಲ್ಲಿ ಕೋಕೇರಿ ಗ್ರಾಮದ ನೀಲಿಯಾಟ್ ಮಂದ್‍ನಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ಸಸಿ ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಸೆ.8 ರಂದು ದ್ವಿತೀಯ ಹಂತದಲ್ಲಿ ಕರಡ ಗ್ರಾಮದ ಮಲೆತಿರಿಕೆ ದೇವಸ್ಥಾನದಲ್ಲಿ ವಿಧಾನಪರಿಷತ್ ಸದಸ್ಯ ಎಂ.ಪಿ.ಸುಜಾ ಕುಶಾಲಪ್ಪ ಅವರು ಸಸಿ ನೆಡಲಿದ್ದಾರೆ. ಸೆ.13 ರಂದು ತೃತೀಯ ಹಂತದಲ್ಲಿ ಟಿ.ಶೆಟ್ಟಿಗೇರಿಯ ಕೊರಕೋಟ್ ಅಯ್ಯಪ್ಪ ದೇವರಕಾಡಿನಲ್ಲಿ ಸಸಿ ನೆಟ್ಟು ಕಾರ್ಯಕ್ರಮವನ್ನು ಉದ್ಘಾಟಿಸಲಾಗುವುದು. ಕಾರ್ಯಕ್ರಮದ ಯಾವುದಾದರು ಒಂದು ಹಂತದಲ್ಲಿ ಕೊಡಗು- ಮೈಸೂರು ಕ್ಷೇತ್ರದ ಸಂಸದ ಯದುವೀರ್ ಒಡೆಯರ್ ಅವರು ಪಾಲ್ಗೊಳ್ಳಲಿದ್ದಾರೆ. ಅಲ್ಲದೆ ಅರಣ್ಯ ಇಲಾಖೆಯ ಪ್ರಾಯೋಜಕತ್ವದಲ್ಲಿ ಲಕ್ಷ್ಮಣತೀರ್ಥ ನದಿತೀರದಲ್ಲಿ ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಗೋಣಿಕೊಪ್ಪಲಿನ ಕಾವೇರಿ ಕಾಲೇಜು, ವಿರಾಜಪೇಟೆಯ ಸಂತ ಅನ್ನಮ್ಮ ಕಾಲೇಜ್ ನ ಪ್ರಾಧ್ಯಾಪಕ ವೃಂದ, ಎನ್‍ಎಸ್‍ಎಸ್ ವಿದ್ಯಾರ್ಥಿಗಳು ಮತ್ತು ಪೊನ್ನಂಪೇಟೆಯ ಅರಣ್ಯ ವಿಜ್ಞಾನ ವಿದ್ಯಾಲಯದ ಕುಲಪತಿಗಳು ಹಾಗೂ ಎನ್‍ಎಸ್‍ಎಸ್ ವಿದ್ಯಾರ್ಥಿಗಳು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಮುಂದಿನ 15 ದಿನಗಳಲ್ಲಿ ಸುಮಾರು 2500 ಸಸಿಗಳನ್ನು ನೆಡುವ ಗುರಿ ಹೊಂದಲಾಗಿದೆ. ಸಸಿಗಳು ಬೆಳೆದು ಹೆಮ್ಮರವಾಗಲಿ, ಕೊಡಗಿನ ಹಸಿರ ಪರಿಸರ ಉಳಿಯಲಿ, ಬೆಳೆಯಲಿ ಎನ್ನುವುದೇ ನಮ್ಮ ಆಶಯವಾಗಿದೆ. ಈ ಮಹತ್ವದ ಕಾರ್ಯಕ್ರಮದ ಯಶಸ್ಸಿಗೆ ಎಲ್ಲರೂ ಕೈಜೋಡಿಸಬೇಕೆಂದು ಚೇನಂಡ ಮಧು ಮಾದಯ್ಯ ಮನವಿ ಮಾಡಿದರು. 2026ರ ಚೇನಂಡ ಕಪ್ ಹಾಕಿ ಉತ್ಸವ ಪರಿಸರ ಕಾಳಜಿಯೊಂದಿಗೆ ವಿವಿಧ ವಿಭಿನ್ನ ಕಾರ್ಯಕ್ರಮಗಳ ಮೂಲಕ ಗಮನ ಸೆಳೆಯಲಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಚೇನಂಡ ಕುಟುಂಬದ ಅಧ್ಯಕ್ಷ ಚೇನಂಡ ಕಂಬಣಿ ಕರುಂಬಯ್ಯ, ಜಂಟಿ ಕಾರ್ಯದರ್ಶಿ ಚೇನಂಡ ತಮ್ಮಿ ತಮ್ಮಯ್ಯ, ವಕ್ತಾರ ಚೇನಂಡ ಸುರೇಶ್ ನಾಣಯ್ಯ ಹಾಗೂ ಸದಸ್ಯ ಚೇನಂಡ ಸಚಿನ್ ಅಯ್ಯಪ್ಪ ಉಪಸ್ಥಿತರಿದ್ದರು.









