
ಗೋಣಿಕೊಪ್ಪ ಆ.26 NEWS DESK : ಶ್ರೀ ಕಾವೇರಿ ದಸರಾ ಸಮಿತಿಯ 47ನೇ ವರ್ಷದ ದಸರಾ ಜನೋತ್ಸವದ ಆಚರಣೆಗೆ ಆ.30ರಂದು ನೂತನ ಸಮಿತಿ ರಚಿಸಲಾಗುವುದು ಎಂದು ಅಧ್ಯಕ್ಷ ರಾಮಕೃಷ್ಣ ಮಾಹಿತಿ ನೀಡಿದ್ದಾರೆ. ಗೋಣಿಕೊಪ್ಪದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಶಾಸಕರಲ್ಲಿಗೆ ನಿಯೋಗ ತೆರಳಿ ಶಾಸಕರ ಸಲಹೆ ಸೂಚನೆಯಂತೆ ದಸರಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಕಳೆದ 21ರಂದು ನಡೆದ ಗ್ರಾಮ ಪಂಚಾಯಿತಿಯ ಸಾಮಾನ್ಯ ನಡುವಳಿಯಲ್ಲಿ ಈಗಾಗಲೇ ಸಮಿತಿಯ ಬೈಲಾ ನಿಯಮದಂತೆ ಪಂಚಾಯಿತಿ ಸದಸ್ಯರ ಒಮ್ಮತದ ನಿರ್ಧಾರದಂತೆ ದಸರಾ ಆಚರಣೆಯ ಅಧ್ಯಕ್ಷರ ಆಯ್ಕೆ ಮಾಡಲಾಗಿದೆ ಎಂದರು. ಗ್ರಾಮ ಪಂಚಾಯಿತಿ ಅಧ್ಯಕ್ಷರ ಮತ್ತು ಉಪಾಧ್ಯಕ್ಷರು, ಪಂಚಾಯಿತಿ ಸದಸ್ಯರುಗಳು, ಅಭಿವೃದ್ಧಿ ಅಧಿಕಾರಿಗಳ ಸಮ್ಮುಖದಲ್ಲಿ ಈ ಆಯ್ಕೆ ನಡೆದಿದೆ. ಇದು ದೇವರ ಸೇವೆಗೆ ಸಿಕ್ಕಿದ ಪುಣ್ಯವಾಗಿದೆ. ಈ ಕಾರ್ಯವನ್ನು ಧಾರ್ಮಿಕ ವಿಚಾರಕ್ಕೆ ಒಳಪಟ್ಟಂತೆ, ಶಾಸಕರ ಮಾರ್ಗದರ್ಶನದಲ್ಲಿ ನಡೆಯಲಿದೆ ಎಂದು ರಾಮಕೃಷ್ಣ ಮಾಹಿತಿ ಹಂಚಿಕೊಂಡಿದ್ದಾರೆ.








