
ಮಡಿಕೇರಿ ಆ.29 NEWS DESK : ಕೊಡಗು ಜಿಲ್ಲೆಯ ಸರಕಾರಿ ಕಚೇರಿಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಮೂಲಕ ಯುವ ಸಮೂಹವನ್ನು ನಿರುದ್ಯೋಗ ಸಮಸ್ಯೆಯಿಂದ ಮುಕ್ತಿ ಕಾಣಿಸುವಂತೆ ಒತ್ತಾಯಿಸಿ ಭಾರತ ಪ್ರಜಾಸತಾತ್ಮಕ ಯುವ ಫೆಡರೇಷನ್ ನ ಕೊಡಗು ಜಿಲ್ಲಾ ಸಮಿತಿ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿತು. ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಜಮಾಯಿಸಿದ ಸಮಿತಿಯ ಪ್ರಮುಖರು ಹಾಗೂ ಸದಸ್ಯರು ಉದ್ಯೋಗ ಬೇಕೆಂದು ಘೋಷಣೆಗಳನ್ನು ಕೂಗಿ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿದರು. ಸಮಿತಿಯ ಜಿಲ್ಲಾಧ್ಯಕ್ಷ ಹೆಚ್.ಆರ್.ರಾಚಪ್ಪಾಜಿ ಮಾತನಾಡಿ, ಸುಮಾರು ಆರೂವರೆ ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ಕೊಡಗು ಜಿಲ್ಲೆಯ ಕಾರ್ಮಿಕ ವರ್ಗ, ಸಣ್ಣ ರೈತರು, ಮಧ್ಯಮ ವರ್ಗದ ಜನತೆ ಹಾಗೂ ವಿದ್ಯಾರ್ಥಿಗಳು ತಮ್ಮ ಕೆಲಸ ಕಾರ್ಯಗಳಿಗಾಗಿ ನಿತ್ಯ ಸರಕಾರಿ ಕಚೇರಿಗಳಿಗೆ ಭೇಟಿ ನೀಡುತ್ತಾರೆ. ಆದರೆ ಸಿಬ್ಬಂದಿಗಳ ಕೊರತೆಯಿಂದಾಗಿ ಅರ್ಜಿಗಳು ವಿಲೇವಾರಿಯಾಗದೆ ಮತ್ತು ಅಗತ್ಯ ಕೆಲಸಗಳನ್ನು ಮಾಡಿಸಿಕೊಳ್ಳಲಾಗದೆ ಕಚೇರಿಯಿಂದ ಕಚೇರಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಶಿಕ್ಷಣ ಮುಗಿಸಿರುವ ಯುವ ಸಮೂಹ ಉದ್ಯೋಗಕ್ಕಾಗಿ ಪರಿತಪಿಸುತ್ತಿದ್ದಾರೆ. ಉದ್ಯೋಗ ವಿನಿಯಮ ಕೇಂದ್ರದಲ್ಲಿ ನೋಂದಣಿ ಮಾಡಿಸಿಕೊಂಡವರು ಸರಕಾರಿ ಉದ್ಯೋಗಕ್ಕಾಗಿ ಕಾಯುತ್ತಿದ್ದಾರೆ. ವರ್ಷಕ್ಕೆ ಸುಮಾರು 2 ಕೋಟಿಯಷ್ಟು ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದು ಭರವಸೆ ನೀಡಿದ್ದ ಸರಕಾರ ವರ್ಷಕ್ಕೆ ಒಂದು ಲಕ್ಷ ಉದ್ಯೋಗವನ್ನು ಕೂಡ ನೀಡುತ್ತಿಲ್ಲವೆಂದು ಟೀಕಿಸಿದರು. ಉದ್ಯೋಗ ಸೃಷ್ಟಿ ಮಾಡುವ ಯಾವುದೇ ಹೊಸ ಯೋಜನೆಗಳನ್ನು ಸರಕಾರ ಯುವ ಜನರಿಗಾಗಿ ರೂಪಿಸಿಲ್ಲ. ಕೇಂದ್ರ ಮತ್ತು ರಾಜ್ಯ ಸರಕಾರಿ ಕಚೇರಿಗಳಲ್ಲಿ ಗುತ್ತಿಗೆ ಆಧಾರದಲ್ಲಿ ಹುದ್ದೆಗಳನ್ನು ಭರ್ತಿ ಮಾಡಿ ಯುವ ನಿರುದ್ಯೋಗಿಗಳನ್ನು ವಂಚಿಸಲಾಗುತ್ತಿದೆ ಎಂದು ಆರೋಪಿಸಿದರು. ಸರಕಾರಿ ಕಚೇರಿಗಳಲ್ಲಿರುವ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವಂತೆ ಒತ್ತಾಯಿಸಿ ಡಿವೈಎಫ್‍ಐ ಸಂಘಟನೆ ಜಿಲ್ಲೆಯಲ್ಲಿ ಅನೇಕ ಹೋರಾಟಗಳನ್ನು ನಡೆಸಿದ್ದರೂ ಯಾವುದೇ ಸ್ಪಂದನೆ ದೊರೆತ್ತಿಲ್ಲ. ಇನ್ನು ಮುಂದೆಯಾದರೂ ಸರಕಾರ ಎಚ್ಚೆತ್ತುಕೊಂಡು ಗುತ್ತಿಗೆ ಮತ್ತು ಹೊರಗುತ್ತಿಗೆ ಆಧಾರದ ನೇಮಕಾತಿಗಳನ್ನು ನಿಲ್ಲಿಸಿ ಜಿಲ್ಲೆಯ ನಿರುದ್ಯೋಗಿ ಯುವಕ ಹಾಗೂ ಯುವತಿಯರಿಗೆ ಖಾಯಂ ಸರಕಾರಿ ಹುದ್ದೆ ನೀಡಲು ಕ್ರಮ ಕೈಗೊಳ್ಳಲಿ ಎಂದು ಹೆಚ್.ಆರ್.ರಾಚಪ್ಪಾಜಿ ಒತ್ತಾಯಿಸಿದರು. ಯುವ ಜನರ ಉದ್ಯೋಗದ ಬೇಡಿಕೆ ಈಡೇರದಿದ್ದಲ್ಲಿ ಮುಂದಿನ ದಿನಗಳಲ್ಲಿ ಡಿವೈಎಫ್‍ಐ ಸಂಘಟನೆ ಹೋರಾಟವನ್ನು ತೀವ್ರಗೊಳಿಸಲಿದೆ ಎಂದು ಎಚ್ಚರಿಕೆ ನೀಡಿದರು. ಡಿವೈಎಫ್‍ಐ ಕಾರ್ಯದರ್ಶಿ ವೈ.ಆರ್.ಜ್ಯೋತಿ ಕೃಷ್ಣ, ಖಜಾಂಚಿ ಎ.ಹೆಚ್.ಸಾಧಿಕ್, ಪದಾಧಿಕಾರಿಗಳಾದ ಅನುಷ್, ಮಣಿ, ರಮೇಶ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಬೇಡಿಕೆಯ ಮನವಿ ಪತ್ರವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಅವರ ಮೂಲಕ ಸರಕಾರಕ್ಕೆ ಸಲ್ಲಿಸಿದರು.









