ಮಡಿಕೇರಿ ಸೆ.1 NEWS DESK : ಐತಿಹಾಸಿಕ ಹಿನ್ನೆಲೆಯ ಮೈಸೂರು ದಸರಾ ಉತ್ಸವದ ಉದ್ಘಾಟನೆಯ ವಿಚಾರದಲ್ಲಿ ರಾಜ್ಯ ಸರಕಾರ ಬೂಕರ್ ಪ್ರಶಸ್ತಿಗೆ ಭಾಜನರಾದ ಬಾನು ಮುಷ್ತಾಕ್ ಹಾಗೂ ದೀಪಾ ಭಾಸ್ತಿ ಅವರನ್ನು ಒಂದೇ ರೀತಿಯಲ್ಲಿ ನೋಡಬೇಕಿತ್ತು. ಆ ಮೂಲಕ ದೀಪಾ ಭಾಸ್ತಿ ಅವರನ್ನು ಕೂಡ ದಸರಾ ಉದ್ಘಾಟನೆಗೆ ಕರೆಯಬೇಕಾಗಿತ್ತು ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಮಾಜಿ ಸಂಸದ ಅಡಗೂರು ಹೆಚ್.ವಿಶ್ವನಾಥ್ ಅವರು ಅಭಿಪ್ರಾಯಪಟ್ಟಿದ್ದಾರೆ. ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ರಾಜ್ಯ ಸರಕಾರ ಮೈಸೂರು ದಸರಾ ಉದ್ಘಾಟನೆಗೆ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಿದ ಕ್ರಮ ಸರಿಯಾಗಿದೆ. ಈ ಹಂತದಲ್ಲಿ ಬೂಕರ್ ವಿಜೇತೆ ದೀಪಾ ಭಾಸ್ತಿಯವರನ್ನು ಕೂಡ ಕರೆಯಬಹುದಿತ್ತು. ಈ ಲೋಪವನ್ನು ಈಗಲೂ ಸರಿಪಡಿಸಿಕೊಳ್ಳಲು ಅವಕಾಶವಿದೆ ಎಂದರು. ದಸರಾ ಉತ್ಸವದಂದು ಚಾಮುಂಡಿ ಬೆಟ್ಟದಲ್ಲಿ ಬಾನು ಮುಷ್ತಾಕ್ ಅವರಿಂದ ದಸರಾ ಉದ್ಘಾಟನೆ ಹಾಗೂ ಅರಮನೆ ಮೈದಾನದ ಕಾರ್ಯಕ್ರಮಕ್ಕೆ ಬಾನು ಮುಷ್ತಾಕ್ ಅವರೊಂದಿಗೆ ದೀಪಾ ಭಾಸ್ತಿಯವರನ್ನು ಆಹ್ವಾನಿಸಿ ದೊಡ್ಡ ಕಾರ್ಯಕ್ರಮವನ್ನು ಆಯೋಜಿಸಿ ಎಂದು ಸಲಹೆ ನೀಡಿದರು. ಕನ್ನಡದ ಹಿರಿಮೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೇರಿಸಿದ ಬೂಕರ್ ಪ್ರಶಸ್ತಿಯು ಮೂಲ ಲೇಖಕಿ ಬಾನು ಮುಷ್ತಾಕ್ ಹಾಗೂ ಅನುವಾದಕಿ ದೀಪಾ ಭಾಸ್ತಿಯವರಿಗು ಸಂದಿದೆ. ಬೂಕರ್ ಪ್ರಶಸ್ತಿಯ ಮೂಲಕ ಕನ್ನಡ ಭಾಷೆಯನ್ನು ಇವರು ಅಂತರಾಷ್ಟ್ರೀಯ ಮಟ್ಟಕ್ಕೇರಿಸಿದ್ದಾರೆ ಎಂದು ಮೆಚ್ಚುಗೆಯ ನುಡಿಗಳನ್ನಾಡಿದರು. ಬಹುತ್ವದ ಭಾರತದಲ್ಲಿ ಸಂವಿಧಾನವನ್ನು ಒಪ್ಪಿ ಮುನ್ನಡೆಯುತ್ತಿದ್ದೇವೆ, ಜಾಗತಿಕ ಮಟ್ಟದಲ್ಲಿ ಕನ್ನಡಕ್ಕೆ ಗೌರವ ತಂದುಕೊಟ್ಟ ಬಾನು ಮುಷ್ತಾಕ್ ಅವರು ಕನ್ನಡದ ಮಗಳೇ ಆಗಿದ್ದಾರೆ ಎಂದು ತಿಳಿಸಿದರು. *ತನಿಖೆ ಶೀಘ್ರ ಮುಗಿಸಿ* ಎಸ್‍ಐಟಿ ತನಿಖೆಯನ್ನು ಶೀಘ್ರ ಮುಗಿಸಿ ಧರ್ಮಸ್ಥಳದಲ್ಲಿ ಏನಾಗಿದೆ, ಏನಾಗುತ್ತಿದೆ ಎನ್ನುವ ವಿಚಾರವನ್ನು ಜನರಿಗೆ ಸ್ಪಷ್ಟೀಕರಣ ನೀಡಬೇಕು. ಎಸ್‍ಐಟಿ ತನಿಖೆ ಚೆನ್ನಾಗಿ ನಡೆಯುತ್ತಿದ್ದು, ಎನ್‍ಐಎ ತನಿಖೆಯ ಅಗತ್ಯವಿಲ್ಲವೆಂದು ಹೆಚ್.ವಿಶ್ವನಾಥ್ ಹೇಳಿದರು.










