


ಮಡಿಕೇರಿ ಸೆ.2 NEWS DESK : ಪೊನ್ನಂಪೇಟೆಯ ಅರಣ್ಯ ಮಹಾವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳು ಗ್ರಾಮೀಣ ಕಾರ್ಯಾನುಭವ ಕಾರ್ಯಕ್ರಮದ ಅಂಗವಾಗಿ 21 ದಿನಗಳ ಕಾಲ ಬಾಳೆಲೆಯಲ್ಲಿ ವಾಸ್ತವ್ಯ ಹೂಡಿದ್ದು, ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಂದ ಬೆಳೆಗಾರರಿಗೆ “ಜೇನು ಕೃಷಿ ಕಾರ್ಯಾಗಾರ” ನಡೆಯಿತು. ಬಾಳೆಲೆ ಪಂಚಾಯಿತಿಯ ಆಡಳಿತ ಮಂಡಳಿಯ ಸಭಾ ಭವನದಲ್ಲಿ ನಡೆದ ಕಾರ್ಯಾಗಾರದಲ್ಲಿ ಕಾಫಿ ರೈತರಿಗೆ ಜೇನು ಸಾಕಾಣಿಕೆಯ ಮಹತ್ವವನ್ನು ತಿಳಿಸುವುದರ ಜೊತೆಗೆ, ಕಾಫಿ ಬೆಳೆಗಳಲ್ಲಿ ಪರಾಗಸ್ಪರ್ಶ ಹೆಚ್ಚಿಸುವ ಮೂಲಕ ಉತ್ಪಾದನೆ ವೃದ್ಧಿ ಹಾಗೂ ಸಣ್ಣ ರೈತರಿಗೆ ಹೆಚ್ಚುವರಿ ಆದಾಯದ ಅವಕಾಶಗಳ ಬಗ್ಗೆ ಮಾಹಿತಿ ನೀಡಲಾಯಿತು. ಕಾರ್ಯಕ್ರಮದ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಡಾ. ಆರ್.ಎನ್.ಕೆಂಚರೆಡ್ಡಿ ಭಾಗವಹಿಸಿ, ವೈಜ್ಞಾನಿಕ ಜೇನು ಸಾಕಾಣಿಕೆ ತಂತ್ರಜ್ಞಾನ ಕುರಿತು ಅನುಭವ ಹಂಚಿಕೊಂಡರು. ಈ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ಗ್ರಾಮೀಣ ಜೀವನದ ಹತ್ತಿರ ಸಂಪರ್ಕವನ್ನು ಒದಗಿಸಿ, ಗ್ರಾಮಾಭಿವೃದ್ಧಿಗೆ ಕೈಜೋಡಿಸಲು ಪ್ರೇರೇಪಿಸುತ್ತದೆ ಎಂದರು. ಕಾರ್ಯಾಗಾರದಿಂದ ಕಾಫಿ ಬೆಳೆಗಾರರು ಮತ್ತು ಸಣ್ಣ ರೈತರು ಲಾಭದಾಯವಾಗಿದ್ದು, ಜೇನು ಸಾಕಾಣಿಕೆಯನ್ನು ಪೂರಕ ಜೀವನೋಪಾಯವಾಗಿ ಅಳವಡಿಸಿಕೊಳ್ಳುವ ಮೂಲಕ ಆದಾಯ ವೃದ್ಧಿ ಸಾಧಿಸಬಹುದು ಎಂದು ಹೇಳಿದರು. ಉಪಾಧ್ಯಕ್ಷ ಎ.ಎಸ್.ನವೀನ್, ಮಾಜಿ ಅಧ್ಯಕ್ಷೆ ಜಾನಕಿ ಕಾವೇರಪ್ಪ, ಪಂಕಜಾ ಹಾಗೂ ಪ್ರಗತಿಪರ ರೈತರಾದ ಎ.ಮುರಳಿ ಮತ್ತು ಎಂ.ಸಿ. ನಾಣಯ್ಯ ಹಾಜರಿದ್ದರು.









