
ಮಡಿಕೇರಿ ಸೆ.3 NEWS DESK : ವಿರಾಜಪೇಟೆ ನಗರದಲ್ಲಿ ಈಗಾಗಲೆ ಪ್ರತಿಷ್ಟಾಪಿಸಲಾಗಿರುವ ಗಣಪತಿ ಮೂರ್ತಿಗಳ ವಿಸರ್ಜನೆ ಸಂಬಂಧ ವಾಹನ ದಟ್ಟಣೆ ನಿಯಂತ್ರಿಸಿ, ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸುವ ದೃಷ್ಟಿಯಿಂದ ಸೆ.6 ರ ಮಧ್ಯಾಹ್ನ 2 ಗಂಟೆಯಿಂದ ಸೆ.7 ರ ಬೆಳಗ್ಗೆ 10 ಗಂಟೆಯವರೆಗೆ ವಿರಾಜಪೇಟೆ ಪಟ್ಟಣದಲ್ಲಿ ಸಂಚಾರ ವ್ಯವಸ್ಥೆಯನ್ನು ನಿರ್ವಹಿಸಲು ಆರಕ್ಷಕ ಅಧೀಕ್ಷಕರು, ಕೊಡಗು ಜಿಲ್ಲೆ, ಮಡಿಕೇರಿ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿ, ಕೊಡಗು ಜಿಲ್ಲೆ, ಮಡಿಕೇರಿ ಇವರಿಗೆ ಅನುಮತಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ವೆಂಕಟ್ ರಾಜಾ ಅವರು ಆದೇಶಿಸಿದ್ದಾರೆ. ಪೆರುಂಬಾಡಿ ಕಡೆಯಿಂದ ವಿರಾಜಪೇಟೆ ನಗರಕ್ಕೆ ಉತ್ಸವ ವೀಕ್ಷಣೆಗೆ ಬರುವ ವಾಹನಗಳನ್ನು ಕೀರ್ತಿ ರೆಸ್ಟೋರೆಂಟ್ ಮುಂಭಾಗದಿಂದ ಆರ್ಜಿ ಕಡೆಗೆ ಹೋಗುವ ರಸ್ತೆಯ ಎಡಭಾಗದಲ್ಲಿ ಬದಿಯಲ್ಲಿ ಮಾತ್ರ ನಿಲ್ಲಿಸುವುದು. ಕೇರಳದ ಮಾಕುಟ್ಟ ಮಾರ್ಗವಾಗಿ ಗೋಣಿಕೂಪ್ಪದ ಕಡೆ ಅಥವಾ ಸಿದ್ದಾಪುರದ ಕಡೆಗಳಿಗೆ ಹೋಗುವ ವಾಹನಗಳಿಗೆ ಪೆರುಂಬಾಡಿ ಚೆಕ್ ಪೋಸ್ಟ್, ಬಾಳುಗೋಡು, ಬಿಟ್ಟಂಗಾಲ ಜಂಕ್ಷನ್, ಕೈಕೇರಿ ಜಂಕ್ಷನ್, ಗದ್ದೆ ಮನೆಯ ರಸ್ತೆ ಜಂಕ್ಷನ್ ಮಾರ್ಗವಾಗಿ ಪಾಲಿಬೆಟ್ಟ, ಸಿದ್ದಾಪುರಕ್ಕೆ ಹೋಗುವುದು. ಅದೇ ರೀತಿ ಸಿದ್ದಾಪುರ ಕಡೆಯಿಂದ ಕೇರಳದ ಕಡೆ ಹೋಗುವ ವಾಹನಗಳು ಕೈಕೇರಿ, ಬಿಟ್ಟಂಗಾಲ, ಬಾಳುಗೋಡ, ಪೆರುಂಬಾಡಿ ಮಾರ್ಗವಾಗಿ ಕೇರಳದ ಕಡೆ ಹೋಗುವುದು. ಮಡಿಕೇರಿಯಿಂದ ಕೇರಳದ ಕಡೆ ಹೋಗುವ ವಾಹನಗಳು ಸಿದ್ದಾಪುರ, ಪಾಲಿಬೆಟ್ಟ, ಕೈಕೇರಿ, ಬಿಟ್ಟಂಗಾಲ, ಬಾಳುಗೋಡು, ಪೆರುಂಬಾಡಿ, ಮಾಕುಟ್ಟ ಮಾರ್ಗವಾಗಿ ಹೋಗುವುದು. ಮಡಿಕೇರಿ ಕಡೆಯಿಂದ ಮೈಸೂರು,ಬೆಂಗಳೂರಿಗೆ ಹೋಗುವ ವಾಹನಗಳು ಸಿದ್ದಾಪುರ ಮಾರ್ಗವಾಗಿ ಗೋಣೆಕೊಪ್ಪ, ಮೈಸೂರು, ಬೆಂಗಳೂರಿಗೆ ಹೋಗುವುದು. ಸಿದ್ದಾಪುರ ಕಡೆಯಿಂದ ಮೆರವಣಿಗೆ ನೋಡಲು ವಿರಾಜಪೇಟೆಗೆ ಬರುವ ವಾಹನಗಳು ಮಗ್ಗುಲ ಜಂಕ್ಷನ್ (ಡೆಂಟಲ್ ಕಾಲೇಜ್ ಜಂಕ್ಷನ್) ಮತ್ತು ರವಿರಾಜ್ ಗ್ಯಾಸ್ ಏಜೆನ್ಸಿ ಕಚೇರಿಯಿಂದ ಐಮಂಗಲ ಕಡೆಗೆ ಹೋಗುವ ರಸ್ತೆಯ ಎಡಬದಿಯಲ್ಲಿ ನಿಲ್ಲಿಸತಕ್ಕದ್ದು. ಗೋಣಿಕೂಪ್ಪ ಕಡೆಯಿಂದ ಮೆರವಣಿಗೆ ನೋಡಲು ಬರುವಂತಹ ವಾಹನಗಳನ್ನು ಪಂಜರುಪೇಟೆಯ ಸರ್ವೋದಯ ಕಾಲೇಜಿನ ಬಳಿಯಿಂದ ಕಾವೇರಿ ಕಾಲೇಜು ಕಡೆಗೆ ಎಡಬದಿಯಲ್ಲಿ ಮಾತ್ರ ನಿಲುಗಡೆ ಮಾಡುವುದು. ಬೇಟೋಳಿ, ಗುಂಡಿಗೆರೆ, ಚಿಟ್ಟಡೆ ಕಡೆಯಿಂದ ಮಹಿಳಾ ಸಮಾಜ ಮಾರ್ಗವಾಗಿ ಮೆರವಣಿಗೆ ನೋಡಲು ಬರುವಂತಹ ವಾಹನಗಳು ಮಹಿಳಾ ಸಮಾಜ ರಸ್ತೆಯ ಎಡಬದಿಯಲ್ಲಿ ನಿಲ್ಲಿಸತಕ್ಕದು. ಮೈಸೂರು, ಬೆಂಗಳೂರು ಕಡೆಯಿಂದ ಮಡಿಕೇರಿಗೆ ಹೋಗುವ ವಾಹನಗಳು ಗೋಣಿಕೊಪ್ಪ, ಸಿದ್ದಾಪುರ ಮಾರ್ಗವಾಗಿ ಮಡಿಕೇರಿ ಹೋಗುವುದು. ಸೆ.6 ರಂದು ಮಧ್ಯಾಹ್ನ 2 ಗಂಟೆಯಿಂದ ಸೆಪ್ಟೆಂಬರ್, 07 ರ ಬೆಳಗ್ಗೆ 10 ಗಂಟೆಯವರೆಗೆ ವಿರಾಜಪೇಟೆ ನಗರದ ತೆಲುಗರ ಬೀದಿ, ದೊಡ್ಡಟ್ಟಿ ವೃತ್ತ, ಅಪ್ಪಯ್ಯ ಸ್ವಾಮಿ ರಸ್ತೆ, ದಖ್ಖನಿ ಮೊಹಲ್ಲಾ ರಸ್ತೆ, ಅರಸು ನಗರ ರಸ್ತೆ, ಎಫ್.ಎಂ.ಸಿ. ರಸ್ತೆ, ಗಡಿಯಾರ ಕಂಬ, ಮಲಬಾರ್ ರಸ್ತೆ, ಗೌರಿಕೆರೆ ರಸ್ತೆ, ಮೀನುಪೇಟೆ ರಸ್ತೆಯ ವಿರಾಜಪೇಟೆ ತಾಲೂಕು ತಹಶೀಲ್ದಾರ್‍ರವರ ಕಚೇರಿವರೆಗೆ ಹಾಗೂ ದೊಡ್ಡಟ್ಟಿ ವೃತ್ತದಿಂದ ಪಂಜರುಪೇಟೆ ಸರ್ವೋದಯ ಕಾಲೇಜಿನವರೆಗೆ ಹಾಗೂ ಮಗ್ಗುಲ ಜಂಕ್ಷನ್‍ನಿಂದ ದಖ್ಖನಿ ಮೊಹಲ್ಲಾ ಜಂಕ್ಷನ್‍ವರೆಗೆ ಯಾವುದೇ ವಾಹನಗಳು ಸಂಚರಿಸುವುದು ಮತ್ತು ವಾಹನ ನಿಲುಗಡೆಯನ್ನು ನಿಷೇಧಿಸಿದೆ. ಈ ಸಂಚಾರ ನಿಯಮಗಳಿಗೆ ಏನಾದರೂ ವ್ಯತ್ಯಾಸ ಅಥವಾ ಮಾರ್ಪಾಡು ಇದ್ದರೆ ಆಯಾಯ ಸ್ಥಳದಲ್ಲಿ ಇರುವ ಪೊಲೀಸರು ನೀಡುವ ನಿರ್ದೇಶನದಂತೆ ನಡೆದುಕೊಳ್ಳುವುದು. ಇದರೊಂದಿಗೆ ಸನ್ನಿವೇಶಕ್ಕೆ ತಕ್ಕಂತೆ ಅವಶ್ಯಕತೆ ಇದ್ದರೆ, ಸಣ್ಣ ಪುಟ್ಟ ಮಾರ್ಪಾಡುಗಳನ್ನು ಮಾಡಲು ಆರಕ್ಷಕ ಅಧಿಕಾರಿಗಳಿಗೆ ಅನುಮತಿಸಿದೆ. ಅವಶ್ಯವಿರುವ ಸಂಜ್ಞೆ ಸೂಚನಾ ಫಲಕವನ್ನು ಅಳವಡಿಸಲು ಜಿಲ್ಲಾ ಪೊಲೀಸ್ ಅದೀಕ್ಷಕರು, ಕೊಡಗು ಜಿಲ್ಲೆ, ಮಡಿಕೇರಿ ಇವರಿಗೆ ಅಧಿಕಾರ ನೀಡಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ವೆಂಕಟ್ ರಾಜಾ ಅವರು ತಿಳಿಸಿದ್ದಾರೆ.








