
ವಿರಾಜಪೇಟೆ ಸೆ.3 NEWS DESK : ಬೇಟೋಳಿ ಗ್ರಾಮದ ರಾಮನಗರದಲ್ಲಿರುವ ಪುದುಪಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಒಳ ಆವರಣದಲ್ಲಿರುವ ಶ್ರೀ ಗಣಪತಿ ಗುಡಿಯಲ್ಲಿ ಪ್ರತಿಷ್ಠಾಪಿಸಲಾಗಿದ್ದ ಶ್ರೀ ಗೌರಿ ಗಣೇಶ ಮೂರ್ತಿಯನ್ನು ಶ್ರದ್ದಾ ಭಕ್ತಿಯಿಂದ ವಿಸರ್ಜಿಸಲಾಯಿತು. ಶ್ರೀ ಗಣೇಶ ಚತುರ್ಥಿಯಂದು ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಗೆ ಏಳು ದಿನಗಳ ಕಾಲ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳನ್ನು ಸಲ್ಲಿಸಿಲಾಯಿತು. ವಿಸರ್ಜನೋತ್ಸವದಂದು ಮಧ್ಯಾಹ್ನ ಮಹಾಪೂಜೆಯನ್ನು ಸಲ್ಲಿಸಿದ ಬಳಿಕ ಭಕ್ತಾದಿಗಳಿಗೆ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನೆರವೇರಿತು. ನಂತರ ವಿಶೇಷ ಪ್ರಾರ್ಥನೆ, ಪೂಜೆಯನ್ನು ಸಲ್ಲಿಸುವುದರ ಮೂಲಕ ಹೂವಿನ ಅಲಂಕೃತ ಮಂಟಪದಲ್ಲಿ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಯಿತು. ಈ ಸಂದರ್ಭ ಭಕ್ತಾದಿಗಳು ಹಾಗೂ ಗ್ರಾಮಸ್ಥರು ವಿಶೇಷ ಪೂಜೆಯನ್ನು ಮಹಾಗಣಪತಿಗೆ ಸಲ್ಲಿಸಿದರು. ದಕ್ಷಿಣ ಕನ್ನಡ ಜಿಲ್ಲೆಯ ಕುಣಿತ ಭಜನೆಯ ತಂಡ ಹಾಗೂ ಸ್ಥಳೀಯ ಮಕ್ಕಳಿಂದ ಕುಣಿತ ಭಜನೆಯು ಮೆರವಣಿಗೆಯ ಉದ್ದಕ್ಕೂ ಸಾಗಿ ಆಕರ್ಷಣೆಯನ್ನು ಹೆಚ್ಚಿಸಿತು. ಕಲಾ ತಂಡದವರು ಗೊಂಬೆ ವೇಷವನ್ನು ಧರಿಸಿ ನೃತ್ಯವನ್ನು ಮಾಡಿದರು. ರುದ್ರಮ್ ಚಂಡೆ ಬಳಗದವರಿಂದ ಚಂಡೆ ಸೇವೆಯು ಜರುಗಿತು. ಮಹಿಳಾ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ಜರುಗಿತು. ನಂತರ ಬೇಟೋಳಿ ಮೂಲೆ ಅಂಗಡಿ ಸಮೀಪದ ಹೊಳೆಯಲ್ಲಿ ಶಾಸ್ತ್ರೋಕ್ತವಾಗಿ ಶ್ರೀ ಗೌರಿ ಗಣೇಶ ಮೂರ್ತಿಗಳ ವಿಸರ್ಜನೋತ್ಸವವು ಜರುಗಿತು. ಪೂಜಾ ಕಾರ್ಯಕ್ರಮಗಳನ್ನು ದೇವಸ್ಥಾನದ ಪ್ರಧಾನ ಅರ್ಚಕರಾದ ವಿಶ್ವನಾಥ್ ಭಟ್ ಹಾಗೂ ವಾಮನಮೂರ್ತಿ ಭಟ್ ನೆರವೇರಿಸಿದರು. ಭಕ್ತಾದಿಗಳು ದೇವಸ್ಥಾನಕ್ಕೆ ತೆರಳಿ ಮಹಾಗಣಪತಿ ದೇವರಿಗೆ ಪೂಜೆಯನ್ನು ಸಲ್ಲಿಸಿದರು. ಈ ಸಂದರ್ಭ ದೇವಸ್ಥಾನದ ಆಡಳಿತ ಮಂಡಳಿಯವರು, ಗ್ರಾಮಸ್ಥರು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.









