
ಮಡಿಕೇರಿ ಸೆ.6 NEWS DESK : ಪ್ರವಾದಿ ಮುಹಮ್ಮದ್ ಪೈಗಂಬರರ ಸಂದೇಶ ಮತ್ತು ತತ್ತ್ವಾದರ್ಶಗಳನ್ನು ತಿಳಿಸಿಕೊಡುವ, ಪ್ರವಾದಿಗಳ ಕುರಿತಾದ ತಪ್ಪು ಕಲ್ಪನೆಗಳನ್ನು ದೂರಮಾಡುವ ಮೂಲಕ ಸಮಾಜದ ಸೌಹಾರ್ದತೆಯನ್ನು ಬಲಪಡಿಸುವ ಪ್ರಮುಖ ಚಿಂತನೆಗಳಡಿ ಜಮಾಅತೆ ಇಸ್ಲಾಮೀ ಹಿಂದ್ ಸಂಘಟನೆಯಿದ ರಾಜ್ಯಾದ್ಯಂತ ‘ಮುಹಮ್ಮದ್ ಪೈಗಂಬರರ ಜೀವನ ಸಂದೇಶ ಅಭಿಯಾನ’ ನಡೆಯಲಿದೆ. ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಮೈಸೂರು ವಲಯ ಸಂಚಾಲಕರಾದ ಯು.ಅಬ್ದುಸ್ಸಲಾಂ ಅವರು ಈ ಕುರಿತು ಮಾಹಿತಿ ನೀಡಿ, ಯಾವುದೇ ಧರ್ಮಗಳಲ್ಲಿನ ಸಂತರು, ಪ್ರವಾದಿಗಳು ಒಂದು ಧರ್ಮಕ್ಕೆ ಸೀಮಿತರಾದವರಲ್ಲ, ಇಡೀ ಮನುಕುಲಕ್ಕೆ ಸೇರಿದವರಾಗಿದ್ದಾರೆ. ಈ ಹಿನ್ನೆಲೆ ಪ್ರವಾದಿ ಮುಹಮ್ಮದ್ ಪೈಗಂಬರರ ಸಂದೇಶಗಳು ಇಂದಿಗೂ ಪ್ರಸ್ತುತವಾಗಿದ್ದು, ಅದನ್ನು ಜನಮಾನಸಕ್ಕೆ ತಲುಪಿಸುವ ಚಿಂತನೆಗಳಡಿ ಅಭಿಯಾನವನ್ನು ಆಯೋಜಿಸಿಕೊಂಡು ಬರಲಾಗುತ್ತಿದೆಯೆಂದು ತಿಳಿಸಿದರು. ಪ್ರವಾದಿ ಮುಹಮ್ಮದ್ ಪೈಗಂಬರ ಅವರು ಪ್ರವಾದಿಗಳಾವುದಕ್ಕೂ ಮುನ್ನ ಮತ್ತು ನಂತರವು ‘ನ್ಯಾಯ’ಕ್ಕಾಗಿ ಹೋರಾಟಗಳನ್ನು ನಡೆಸಿಕೊಂಡು ಬಂದಂತಹವರು. ಎಲ್ಲಾ ವ್ಯವಸ್ಥೆಗಳ ಬುನಾದಿಯೇ ನ್ಯಾಯವಾಗಿದೆ. ಎಲ್ಲಿ ನ್ಯಾಯ ಪರಿಪಾಲನೆ ಸಾಧ್ಯವಾಗುವುದಿಲ್ಲವೋ ಅಲ್ಲಿ ಗೊಂದಲ, ಅಶಾಂತಿ ಮೂಡುತ್ತದೆಂದು ತಿಳಿಸಿ, ಇಂದಿನ ಸಮಾಜದಲ್ಲಿ ಸಾಮರಸ್ಯದ ಬದುಕು ಮರೀಚಿಕೆಯಾಗುತ್ತಿದೆ. ಈ ಹಿನ್ನೆಲೆ ಪ್ರವಾದಿಗಳ ಸಂದೇಶವನ್ನು ಸಾರುವ ಮತ್ತು ಅವರೆಡೆಗಿನ ತಪ್ಪು ಭಾವನೆಗಳನ್ನು ಹೋಗಲಾಡಿಸುವ ಚಿಂತನೆ ಅಭಿಯಾನದ್ದಾಗಿದೆಯೆಂದು ಹೇಳಿದರು. :: ‘ನ್ಯಾಯದ ಹರಿಕಾರ’ ಘೋಷವಾಕ್ಯದೊಂದಿಗೆ ಅಭಿಯಾನ : : ಈ ಬಾರಿ ‘ನ್ಯಾಯದ ಹರಿಕಾರ’ ಎನ್ನುವ ಘೋಷವಾಕ್ಯದೊಂದಿಗೆ ಮುಹಮ್ಮದ್ ಪೈಗಂಬರರ ಸಂದೇಶ ಅಭಿಯಾನ ರಾಜ್ಯ ವ್ಯಾಪಿ ಇದೇ ಸೆಪ್ಟೆಂಬರ್ ತಿಂಗಳಿನ ಉದ್ದಕ್ಕು ನಡೆಯಲಿದೆಯೆಂದು ಮಾಹಿತಿಯನ್ನಿತ್ತರು. ಅಭಿಯಾನದ ಅಂಗವಾಗಿ ವಿಚಾರಗೋಷ್ಠಿಗಳು, ಸ್ವಚ್ಛತಾ ಕಾರ್ಯ, ಪ್ರಬಂಧ, ಭಾಷಣ, ಗಣ್ಯರ ಮತ್ತು ಜನರ ಭೇಟಿ, ಸಮಾವೇಶ, ಜಾಥ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆಯೆಂದು ತಿಳಿಸಿದರು. ಜಮಾಅತೆ ಇಸ್ಲಾಮೀ ಹಿಂದ್ ಸಂಘಟನೆಯ ಜಿಲ್ಲಾ ಸಂಚಾಲಕ ಸಿ.ಹೆಚ್.ಅಫ್ಸರ್ ಮಾತನಾಡಿ, ಅಭಿಯಾನದ ಅಂಗವಾಗಿ ಸೆ.27 ರಂದು ಸಂಜೆ 5.30ಕ್ಕೆ ಕುಶಾಲನಗರದ ಬಿಜಿಟಿ ಸಭಾಂಗಣದಲ್ಲಿ ಕೃತಿಗಳ ಬಿಡುಗಡೆ ಮತ್ತು ಸಮಾವೇಶವನ್ನು ಆಯೋಜಿಸಲಾಗಿದೆಯೆಂದು ತಿಳಿಸಿದರು. ಸಂಘಟನೆಯ ಮಡಿಕೇರಿ ಏರಿಯಾ ಸ್ಥಾನೀಯ ಅಧ್ಯಕ್ಷರಾದÀ ಜಿ.ಹೆಚ್.ಮುಹಮ್ಮದ್ ಹನೀಫ್ ಮಾತನಾಡಿ, ಅಭಿಯಾನದ ಪ್ರಯುಕ್ತ ವಿಚಾರ ವಿನಿಮಯ, ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ಭೇಟಿ ನೀಡಿ ಅಲ್ಲಿನ ಹಿರಿಯರೊಂದಿಗೆ ಮಾತನಾಡಿ, ಅವರಲ್ಲಿ ಜೀವನೋತ್ಸಾಹ ತುಂಬುವ ಪ್ರಯತ್ನ ನಡೆಸುವುದು ಸೇರಿದಂತೆ, ಗಣ್ಯರ ಸಭೆಗಳನ್ನು ಆಯೋಜಿಸಲು ಉದ್ದೇಶಿಸಿರುವುದಾಗಿ ತಿಳಿಸಿದರು. :: ಎರಡು ಪುಸ್ತಕಗಳ ಬಿಡುಗಡೆ :: ಗೋಷ್ಠಿಯ ಸಂದರ್ಭ ಜಮಾಅತೆ ಇಸ್ಲಾಮೀ ಹಿಂದ್ ಸಂಘಟನೆಯ ಪದಾಧಿಕಾರಿಗಳು ಶಾಂತಿ ಪ್ರಕಾಶನದಿಂದ ಹೊರತರಲಾಗಿರುವ ‘ಪ್ರವಾಸಿ ಮುಹಮ್ಮದರನ್ನು(ಸ) ಅರಿಯಿರಿ’ ಮತ್ತು ‘ಭಾರತೀಯ ಸಮಾಜದಲ್ಲಿ ಪ್ರವಾಸಿ ಮುಹಮ್ಮದರ(ಸ) ಆದರ್ಶದ ಔಚಿತ್ಯ’ ಎನ್ನುವ ಎರಡು ಪುಸ್ತಕಗಳನ್ನು ಬಿಡುಗಡೆ ಮಾಡಿದರು. ಗೋಷ್ಠಿಯಲ್ಲಿ ಸಂಘಟನೆಯ ಮಡಿಕೇರಿ ಏರಿಯಾ ಸಂಚಾಲಕರಾದ ಎಂ.ಹೆಚ್.ಮುಹಮ್ಮದ್ ಮುಸ್ತಾಫ, ಸ್ಥಾನೀಯ ಸಮಿತಿ ಸದಸ್ಯರಾದ ಎಂ.ಎ.ಮುಸ್ತಫ ಉಪಸ್ಥಿತರಿದ್ದರು.








