
ಸುಂಟಿಕೊಪ್ಪ ಸೆ.8 NEWS DESK : ವಿಶ್ವ ಹಿಂದೂ ಪರಿಷತ್ ಮತ್ತು ಗೌರಿ ಗಣೇಶೋತ್ಸವ ಸಮಿತಿ ವತಿಯಿಂದ ರಾಮ ಮಂದಿರದಲ್ಲಿ ಹನ್ನೊಂದು ದಿನಗಳ ಕಾಲ ಪ್ರತಿಷ್ಠಾಪಿಸಿದ್ದ 61ನೇ ವರ್ಷದ ಗೌರಿ ಗಣೇಶ ಮೂರ್ತಿಯನ್ನು ಶ್ರದ್ಧಾಭಕ್ತಿಯಿಂದ ವಿಸರ್ಜಿಸಲಾಯಿತು. ಬೆಳಿಗ್ಗೆಯಿಂದ ಗಣಹೋಮ, ಹೂವಿನ ಪೂಜೆಯ ಜೊತೆಯಲ್ಲಿ ಸುತ್ತಮುತ್ತಲಿನ ನೂರಾರು ಭಕ್ತರು ದೇವಾಲಯಕ್ಕೆ ಆಗಮಿಸಿ ಪೂಜೆ ಸಲ್ಲಿಸಿದರು. ನಂತರ ಮಧ್ಯಾಹ್ನ ನೆರೆದಿದ್ದ ಭಕ್ತರಿಗೆ ಅನ್ನಸಂತರ್ಪಣೆ ನೆರವೇರಿತು. ದೇವಾಲಯದಲ್ಲಿ ಪ್ರಧಾನ ಅರ್ಚಕ ಹಾ.ಮಾ.ಗಣೇಶ್ ಶರ್ಮಾ, ಮಂಜುನಾಥ್ ಶರ್ಮಾ, ಗಣೇಶ್ ಉಪಾಧ್ಯಯ ಅವರ ನೇತೃತ್ವದಲ್ಲಿ ವಿಶೇಷ ಪೂಜೆ, ಮಹಾಪೂಜೆ ಹಾಗೂ ದೇವಾಲಯದಲ್ಲಿ ಗೌರಿ ಗಣೇಶನ ಉತ್ಸವ ಮೂರ್ತಿಗೆ ಕೊನೆಯ ಮಹಾ ಆರತಿಯನ್ನು ಮಾಡುವುದರ ಮೂಲಕ ಜೈ ಘೋಷಣೆಯೊಂದಿಗೆ ವಿದ್ಯುತ್ ದೀಪ ಅಲಂಕೃತ ಮಂಟಪದಲ್ಲಿ ಕುಳ್ಳಿರಿಸಿ ಮೆರವಣಿಗೆ ನಡೆಸಲಾಯಿತು. ಈ ಸಂದರ್ಭ ಯುವಕ- ಯುವತಿಯರು ಡಿಜೆ ಸಂಗೀತಕ್ಕೆ ಹೆಜ್ಜೆ ಹಾಕುತ್ತಾ ಶೋಭಯಾತ್ರೆಯೊಂದಿಗೆ ಸಾಗಿದರು. ರಾಮ ಮಂದಿರದಿಂದ ಆರಂಭಗೊಂಡ ಮೆರವಣಿಗೆ ಮಾದಾಪುರ ರಸ್ತೆಯಲ್ಲಿಯಲ್ಲಿರುವ ವೃಕ್ಷೋದ್ಭವ ಮಹಾಗಣಪತಿ ದೇವಾಲಯದತ್ತ ತೆರಳಿ ಅಲ್ಲಿ ಪೂಜೆ ಸಲ್ಲಿಸಿ ನಂತರ ಅದೇ ಮಾರ್ಗವಾಗಿ ಪಟ್ಟಣದ ಪ್ರಮುಖ ಬೀದಿಯಲ್ಲಿ ಸಾಗಿ ರಾತ್ರಿ ಗದ್ದೆಹಳ್ಳದ ಯಂಕನ ಉಲ್ಲಾಸ್ ಮತ್ತು ಯಂಕನ ಕರುಂಬಯ್ಯ ಅವರ ಕೆರೆಯಲ್ಲಿ ವಿಸರ್ಜಿಸಲಾಯಿತು. ಮೆರವಣಿಗೆಯುದ್ದಕ್ಕೂ ಬಾನಂಗಳದಲ್ಲಿ ಬಣ್ಣ ಬಣ್ಣದ ಪಟಾಕಿಗಳು ಆಕರ್ಷಕವಾಗಿ ಮೂಡಿಬಂದವು. ಸಮಿತಿ ಅಧ್ಯಕ್ಷ ವಿಘ್ನೇಶ್, ಉಪಾಧ್ಯಕ್ಷರಾದ ಬಿ.ಕೆ.ಪ್ರಶಾಂತ್, ಎಂ.ಗಣೇಶ್, ಸಿ.ಸುನಿಲ್ ಕುಮಾರ್, ಪ್ರಧಾನ ಕಾರ್ಯದರ್ಶಿ ಎಂ.ಹೆಚ್.ನಿಖಿಲ್, ಹಿರಿಯರಾದ ಶಾಂತರಾಮ ಕಾಮತ್, ಧನು ಕಾವೇರಪ್ಪ, ಪಿ.ಆರ್.ಸುನಿಲ್ ಕುಮಾರ್, ಪಟ್ಟೆಮನೆ ಉದಯಕುಮಾರ್, ಸುರೇಶ್ ಗೋಪಿ, , ಪದಾಧಿಕಾರಿಗಳಾದ ಪದ್ಮನಾಭ,ಮಿಥುನ್, ಮಹೇಂದ್ರ, ದಿನುದೇವಯ್ಯ ಸೇರಿದಂತೆ ಮತ್ತಿತರರು ಇದ್ದರು. :: ರಂಜಿಸಿದ ಭಜನಾ ನೃತ್ಯ :: ರಾಮ ಮಂದಿರದಲ್ಲಿ ಪ್ರತಿಷ್ಠಾಪಿಸಿದ್ದ 61ನೇ ವರ್ಷದ ಗೌರಿಗಣೇಶೋತ್ಸವದ ವಿಸರ್ಜನಾ ಮೆರವಣಿಗೆಯಲ್ಲಿ ಕೊಡಗಿನ ಸಿದ್ದಾಪುರದ ನೆಲ್ಲಿಹುದಿಕೇರಿಯ ಶ್ರೀ ಮೂಕಾಂಬಿಕಾ ಭಜನಾ ಕುಣಿತ ಆಕರ್ಷಕವಾಗಿ ಮೂಡಿಬಂದಿತ್ತು. ಸುಮಾರು 50 ಮಂದಿ ಮಕ್ಕಳ ತಂಡದಿಂದ ಕೃಷ್ಣ, ಗೋಕುಲೆ, ದೇವಾನುದೇವತೆಗಳ ಹಾಡಿಗೆ ರಸ್ತೆಯುದ್ದಕ್ಕೂ ಕುಣಿದು ಜನಾಕರ್ಷಣ ಕೇಂದ್ರವಾಗಿತ್ತು. ಮುಸ್ಲಿಂ ಭಾಂದವರು ತಂಪು ಪಾನಿಯ ವಿತರಿಸಿ ಶುಭಾಶಯ ಕೋರಿದರು.








