
ವಿರಾಜಪೇಟೆ ಸೆ.9 NEWS DESK : ಕಲ್ಲುಬಾಣೆಯ ಬದ್ರಿಯ ಜುಮಾ ಮಸೀದಿ ಹಾಗೂ ದಾರುಲ್ ಇಸ್ಲಾಂ ಮದ್ರಾಸದ ವತಿಯಿಂದ ಕಲ್ಲುಬಾಣೆಯಲ್ಲಿ ಪ್ರವಾದಿ ಹಜರತ್ ಮುಹಮ್ಮದ್ (ಸ.ಅ.ವ) ಅವರ 1500ನೇ ವರ್ಷದ ಜನ್ಮದಿನವಾದ ಈದ್ ಮಿಲಾದ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಕಲ್ಲುಬಾಣೆಯ ಬದ್ರಿಯಾ ಮಸೀದಿಯಿಂದ ಪಂಜರಪೇಟೆವರೆಗೆ ಅದ್ದೂರಿ ಸಂದೇಶ ಜಾಥಾ ನಡೆಯಿತು. ಹಸಿರು ಧ್ವಜಗಳೊಂದಿಗೆ ಮಕ್ಕಳು, ಯುವಕರು, ಹಿರಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ನಬಿಯವರ ಪ್ರೀತಿಯ ಘೋಷಣೆಗಳನ್ನು ಮೊಳಗಿಸಿದರು. ಊರಿನ ಬೀದಿಗಳಲ್ಲಿ ಮೆರವಣಿಗೆ ಸಾಗಿದಾಗ, ಧಾರ್ಮಿಕ ಉತ್ಸಾಹದ ಜೊತೆಗೆ ಸೌಹಾರ್ದತೆಯ ಸಂದೇಶ ಹರಡಿತು. ನಂತರ ಬದ್ರಿಯಾ ಶಾಲಾ ಸಭಾಂಗಣದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರ ಮನ ಸೆಳೆಯುವಂತಾಗಿತ್ತು. ವಿಶೇಷ ಆಕರ್ಷಣೆಯಾಗಿ ದಫ್ ತಂಡಗಳು ತಮ್ಮ ಮನೋಹರವಾದ ಪ್ರದರ್ಶನದಿಂದ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾದವು. ಮಕ್ಕಳ ನಾತ್ ಪಠಣ, ಭಾಷಣ ಹಾಗೂ ಕಾವ್ಯ ವಾಚನಗಳು ಪ್ರವಾದಿಯವರ ಜೀವನೋಪದೇಶಗಳನ್ನು ನೆನಪಿಗೆ ತಂದುಕೊಟ್ಟವು. ಕಾರ್ಯಕ್ರಮದ ಅಂತ್ಯದಲ್ಲಿ ನಡೆದ ಬಹುಮಾನ ವಿತರಣೆ ಸಮಾರಂಭದಲ್ಲಿ ಸ್ಪರ್ಧೆಗಳಲ್ಲಿ ಜಯಗೊಂಡ ಮಕ್ಕಳಿಗೆ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಧ್ಯಕ್ಷತೆಯನ್ನು ಪಿ.ಕೆ. ಆಪ್ಸಲ್ ವಹಿಸಿದ್ದರು. ಉಸ್ತಾದ್ ಅಲಿ ಬಕ್‍ಅವಿ ಅವರು ಘನ ಉಪಸ್ಥಿತರಾಗಿದ್ದರು. ಬದ್ರಿಯ ಜುಮಾ ಮಸೀದಿ ಹಾಗು ದಾರುಲ್ ಇಸ್ಲಾಂ ಮದ್ರಸದ ಆಡಳಿತ ಮಂಡಳಿಯ ಸದಸ್ಯರು, ಧಾರ್ಮಿಕ ಪಂಡಿತರು ಹಾಗೂ ಗಣ್ಯರು ಈ ಸಂದರ್ಭದಲ್ಲಿ ಹಾಜರಿದ್ದು, ಪ್ರವಾದಿ ಪೈಗಂಬರ್ ರವರ ಉಪದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಅಗತ್ಯವನ್ನು ಸಾರಿದರು. ಹೆಚ್ಚಿನ ಸಮಖ್ಯೆಯಲ್ಲಿ ಗ್ರಾಮಸ್ಥರು ಪಾಲ್ಗೊಂಡಿದ್ದರು. ಜನಸಾಗರದ ಮಧ್ಯೆ ಉತ್ಸಾಹಭರಿತವಾಗಿ ನಡೆದ ಈದ್ ಮಿಲಾದ್ ಹಬ್ಬ, ಧಾರ್ಮಿಕ ಏಕತೆ ಮತ್ತು ಸಾಂಸ್ಕೃತಿಕ ವೈವಿಧ್ಯತೆಯನ್ನು ಪ್ರತಿಬಿಂಬಿಸಿತು ಸಂದೇಶ ಜಾಥಾದ ಸಂದರ್ಭ ದಾರಿಯುದ್ದಕ್ಕೂ ಎಲ್ಲರಿಗೂ ಸಿಹಿ ಹಾಗೂ ಪಾನೀಯ ಹಂಚಲಾಯಿತು. ಈ ಸಂದರ್ಭ ಸ್ವಚ್ಚತೆಯನ್ನು ಕಾಪಾಡುವ ಸಲುವಾಗಿ ಮರವಣಿಗೆಯುದ್ದಕ್ಕೂ ಯಾವುದೇ ಪೇಪರ್, ಪ್ಲಾಸ್ಟಿಕ್ ಸೇರಿದಂತೆ ಇತರ ವಸ್ತುಗಳು ರಸ್ತೆಯ ಬದಿ ಹಾಕದೆ ತಾವೇ ಅದನ್ನು ಒಂದು ವಾಹನದಲ್ಲಿ ತುಂಬಿಕೊಂಡು ಸ್ವಚ್ಚತೆಗೆ ಆದಯತೆ ನೀಡಿ ಮಾದರಿಯಾದರು.









