
ವಿರಾಜಪೇಟೆ ಸೆ.9 NEWS DESK : ಶ್ರೀ ಕೃಷ್ಣನ ಉಪದೇಶಾಮೃತವಾದ ಭಗವದ್ಗೀತೆ ಸರ್ವಕಾಲಿಕ ಸತ್ಯ. ಸನಾತನ ಧರ್ಮದಲ್ಲಿ ಭಗವದ್ಗೀತೆಯನ್ನು ಪವಿತ್ರ ಗ್ರಂಥವೆಂದು ಪರಿಗಣಿಸಲಾಗಿದೆ ಎಂದು ಪೊನ್ನಂಪೇಟೆ ಸಾಯಿಶಂಕರ್ ಬಿ.ಬಿಎಡ್ ಕಾಲೇಜಿನ ಪ್ರಾಂಶುಪಾಲರಾದ ಪಿ.ಎ.ನಾರಾಯಣ ಅಭಿಪ್ರಾಯಪಟ್ಟರು. ಕಾವೇರಿ ಗಣೇಶೊತ್ಸವ ಸಮಿತಿ ಮೂರ್ನಾಡು ರಸ್ತೆ ಹಾಗೂ ದಕ್ಷಿಣ ಕೊಡಗು ಮಹಿಳಾ ಲೇಖಕಿಯರ ಹಾಗೂ ಕಲಾವಿದರ ವೇದಿಕೆ ವತಿಯಿಂದ ಗಣೇಶೋತ್ಸವ ಸಮಿತಿ ವೇದಿಕೆಯಲ್ಲಿ ನಡೆದ ಭಗವದ್ಗೀತೆ ಶ್ಲೋಕ ಮತ್ತು ಭಾವಾರ್ಥ ಪಠಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿದಿನ ನಾವು ಭಗವಧ್ಗೀತೆಯ ಶ್ಲೋಕವನ್ನು ಪಠಿಸಿದರೆ ಮನಸ್ಸಿನಲ್ಲಿ ಸುಖ ಶಾಂತಿ, ಆತ್ಮಸ್ಥೇರ್ಯ ಮೂಡಲು ಸಾಧ್ಯ. ಮಕ್ಕಳಿಗೂ ಇದನ್ನು ಕಲಿಸುವಂತಾಗಬೇಕು. ಶ್ರೀಕೃಷ್ಣ ಬೋಧಿಸಿದ ಭಗವದ್ಗೀತೆಯ ಸಂದೇಶಗಳನ್ನು ವಿಶ್ವದ ಬಹುತೇಕರು ಅನುಸರಿಸುತ್ತಿದ್ದು, ಅವು ಸಾರ್ವಕಾಲಿಕ ಸತ್ಯದಿಂದ ಕೂಡಿವೆ, ಕೃಷ್ಣನ ನಾಮ ಜಪಿಸಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದರು. ಸಾಹಿತಿಗಳಾದ ಕಿಗ್ಗಾಲು ಗಿರೀಶ್ ಮಾತನಾಡಿ, ಶ್ರೀಕೃಷ್ಣನು ಕುರುಕ್ಷೇತ್ರದಲ್ಲಿ ಅರ್ಜುನನಿಗೆ ಗೀತೆಯನ್ನು ಉಪದೇಶಿಸಿದನೆಂಬ ನಂಬಿಕೆಯಿದೆ. ಮತ್ತು ಈ ಮೂಲಕ ಅವರು ಜೀವನದ ಸಾರವನ್ನು ಜನರಿಗೆ ವಿವರಿಸಲು ಪ್ರಯತ್ನಿಸಿದರು. ಯಾವಾಗ ಅರ್ಜುನನು ಕೌರವರ ವಿರುದ್ಧ ಹೋರಾಡಲು ಬಯಸಲಿಲ್ಲವೋ ಆಗ ಶ್ರೀಕೃಷ್ಣನು ನೀನು ನಿರ್ಭಯವಾಗಿ ಹೋರಾಡು ಎಂದು ಹೇಳಿದನೆಂದು ಈ ಗೀತೆಯಲ್ಲಿ ಹೇಳಲಾಗಿದೆ. ಕೊಂದರೆ ಸ್ವರ್ಗ ಸಿಗುತ್ತದೆ, ಗೆದ್ದರೆ ಭೂಮಿಯನ್ನು ಆಳುವಿರಿ. ಹಾಗಾಗಿ ಯಾವುದೇ ಕೆಲಸದಲ್ಲಿ ಯಶಸ್ಸು ಸಿಗಬೇಕಾದರೆ ಮನಸ್ಸಿನಿಂದ ಭಯವನ್ನು ತೊಲಗಿಸಬೇಕು ಎಂದು ಹೇಳುತ್ತಾನೆ. ಗೀತೆಯ ಕೆಲವು ಶ್ಲೋಕಗಳನ್ನು ಅನುಸರಿಸಿದರೆ, ಜೀವನದಲ್ಲಿ ಅಪಾರ ಯಶಸ್ಸನ್ನು ಸಾಧಿಸಬಹುದು. ಭಗವದ್ಗೀತೆ ಎಲ್ಲ ಧರ್ಮದವರಿಗೂ ಪ್ರೇರಣೆಯಾಗುವ ಗ್ರಂಥ ಎಂದರು. ಗೋಣಿಕೊಪ್ಪ ವಿದ್ಯಾನಿಕೇತನ ಕಾಲೇಜಿನ ಆಡಳಿತ ಮಂಡಳಿಯವರು, ಉಪನ್ಯಾಸಕರು ಆಗಿರುವ ಎಸ್. ರಘುನಾಥ್ ಅವರು ಶ್ರೀಕೃಷ್ಣ ಹಾಗೂ ಸುಧಾಮನ ಬಾಂಧವ್ಯ, ಗೆಳೆತನಕ್ಕೆ ಮಾದರಿಯಾಗಿದೆ. ದೇಶದಲ್ಲಿ ಆದ್ಯ ದೇವತೆಯಾಗಿ ಪೂಜಿಸಲ್ಪಡುವ ಶ್ರೀಕೃಷ್ಣನ ಸಂದೇಶಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ದಕ್ಷಿಣ ಕೊಡಗು ಮಹಿಳಾ ಲೇಖಕಿಯರ ಮತ್ತು ಕಲಾವಿದರ ವೇದಿಕೆ ಅಧ್ಯಕ್ಷೆ ಪುಷ್ಪಲತಾ ಶಿವಪ್ಪ ಮಾತನಾಡಿ ಭಗವದ್ಗೀತೆಯನ್ನು ಜೀವನದ ಮಾರ್ಗದರ್ಶನ ಮತ್ತು ಮೋಕ್ಷ ಸಾಧನೆಗಾಗಿ ಎಂದು ಅರ್ಥ ತಿಳಿದು ಪಠಿಸಬೇಕೆಂಬುದು ಪ್ರಾಜ್ಞರ ಅಭಿಮತವಾಗಿದೆ. ಶ್ರದ್ಧಾ ಭಕ್ತಿಯಿಂದ ಪಠಿಸುವದು ಮೊದಲಿನಿಂದ ನಡೆದು ಬಂದ ಪದ್ಧತಿ. ಇದರಿಂದ ಬದುಕಿನ ದಾರಿ ಯಾವ ರೀತಿಯಲ್ಲಿ ಸನ್ಮಾರ್ಗದಲ್ಲಿ ನಡೆಸಬೇಕೆಂದು ತಿಳಿಯುತ್ತದೆ. ಶ್ರೀ ಕೃಷ್ಣನ ಅವತಾರವೇ ವಿಸ್ಮಯಕಾರಿ, ಆತನ ಜನ್ಮ ಚರಿತ್ರೆ ರೋಮಾಂಚನ. ಕಂಸನ ಸಂಹಾರಕ್ಕಾಗಿಯೇ ಅವತಾರ ಎತ್ತಿ ಬಂದ ಶ್ರೀಕೃಷ್ಣ ಶಿಷ್ಟರ ರಕ್ಷಣೆ ದುಷ್ಟರ ಸಂಹಾರ ಮಾಡಿದ್ದಾನೆ. ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಮನೆಪಾಠದಂತೆ ಭಗವದಿಥೆಯನ್ನು ಕಲಿಸಿಕೊಡಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾವೇರಿ ಗಣೇಶೋತ್ಸವ ಸಮಿತಿಯ ಕೋಶಾಧಿಕಾರಿ ರಾಜೇಶ್ ಆರ್ ಶೇಟ್ ಭಗವದ್ಗೀತೆಯ ಸಂದೇಶವನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಸಭಾ ಕಾರ್ಯಕ್ರಮದ ಬಳಿಕ ಶಾಲಾ ಕಾಲೇಜು ಹಾಗೂ ಸಾರ್ವಜನಿಕ ವಿಭಾಗದಲ್ಲಿ ಭಗವದ್ಗೀತೆ ಶ್ಲೋಕ ಮತ್ತು ಭಾವಾರ್ಥ ಪಠಣ ಸ್ಪರ್ಧಾ ಕಾರ್ಯಕ್ರಮ ನಡೆಯಿತು. ಬಳಿಕ ಸ್ಪರ್ಧೆಯಲ್ಲಿ ಭಾಗವಹಿಸಿದ ಸ್ಫರ್ಧಾಳುಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ನಾಲ್ಕು ವಿಭಾಗಗಳಲ್ಲಿ ನಡೆದ ಸ್ಫರ್ಧೇಯಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದುಕೊಂಡವರಿಗೆ ಪ್ರಮಾಣ ಪತ್ರ ಹಾಗೂ ನೆನಪಿನ ಕಾಣಿಕೆ ನೀಡಲಾಯಿತು. ತೀರ್ಪುಗಾರರಾಗಿ ಗಿರೀಶ್ ಕಿಗ್ಗಾಲು, ಎಸ್ ರಘುನಾಥ್ ಕಾರ್ಯ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರಾದ ಮುಕ್ತ, ಕಾವೇರಿ ಗಣೇಶೋತ್ಸವ ಸಮಿತಿಯ ಸದಸ್ಯ ಸೋಮಣ್ಣ, ಸಮಿತಿಯ ಆಡಳಿತ ಮಂಡಳಿ ಪದಾಧಿಕಾರಿಗಳು, ಶಾಲಾ ಕಾಲೇಜಿನ ವಿದ್ಯಾರ್ಥಿಗಳು, ಪೋಷಕರು, ಸಾರ್ವಜನಿಕರು ಹಾಜರಿದ್ದರು.ಸಾಹಿತಿಗಳು, ದಕ್ಷಿಣ ಕೊಡಗು ಲೇಖಕಿಯರ ಮತ್ತು ಕಲಾವಿದರ ವೇದಿಕೆ ಉಪಾಧ್ಯಕ್ಷೆ ರಜಿತ ಕಾರ್ಯಪ್ಪ, ಕಾರ್ಯದರ್ಶಿ ವಿಮಲ ಧಶರಥ, ಪ್ರೇಮಾಂಜಲಿ ಆಚಾರ್ಯ, ನಳೀನಾಕ್ಷಿ ಕಾರ್ಯಕ್ರಮ ನಿರ್ವಹಿಸಿದರು.









