
ಮಡಿಕೇರಿ ಸೆ.10 NEWS DESK : ಮಡಿಕೇರಿ ತಾಲ್ಲೂಕಿನ ಮುಕ್ಕೋಡ್ಲು ಗ್ರಾಮದ ನಿವಾಸಿಯೊಬ್ಬರ ಎರಡು ಏಕರೆ ಕಾಫಿ ಮತ್ತು ಏಲಕ್ಕಿ ತೋಟವನ್ನು ಅರಣ್ಯ ಇಲಾಖಾ ಸಿಬ್ಬಂದಿಗಳು ನಾಶಗೊಳಿಸಿರುವ ಅಮಾನವೀಯ ಘಟನೆಯನ್ನು ಬೆಳಕಿಗೆ ತಂದಿರುವ ಕೊಡಗು ಜಿಲ್ಲಾ ರೈತ ಹೋರಾಟ ಸಮಿತಿ ಹೋರಾಟದ ಎಚ್ಚರಿಕೆಯನ್ನು ನೀಡಿದೆ. ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ರೈತ ಹೋರಾಟ ಸಮಿತಿಯ ಅಧ್ಯಕ್ಷ ಸುರೇಶ್ ಚಕ್ರವರ್ತಿ, ಮುಕ್ಕೋಡ್ಲುವಿನ ಹಿರಿಯ ಕೃಷಿಕ ಕಾಳಚಂಡ ನಾಣಿಯಪ್ಪ ಅವರ ತೋಟವನ್ನು ನಾಶಪಡಿಸಲು ಕಾರಣಕರ್ತರಾಗಿರುವ ಅರಣ್ಯ ಅಧಿಕಾರಿಗಳನ್ನು ಸೆ.26ರ ಒಳಗಾಗಿ ಹುದ್ದೆಯಿಂದ ವಜಾಗೊಳಿಸಬೇಕು ಮತ್ತು ನೊಂದ ಬೆಳೆಗಾರನಿಗೆ 30 ಲಕ್ಷ ರೂ. ಪರಿಹಾರವನ್ನು ನೀಡಬೇಕೆಂದು ಆಗ್ರಹಿಸಿದರು.
ನಿಗದಿತ ಗಡುವಿನ ಒಳಗೆ ನಮ್ಮ ಈ ಬೇಡಿಕೆಯನ್ನು ಈಡೇರಿಸಲು ಅಗತ್ಯ ಕ್ರಮ ಕೈಗೊಳ್ಳದಿದ್ದಲ್ಲಿ ಮಡಿಕೇರಿಯ ‘ಅರಣ್ಯ ಭವನ’ಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು. ನಾಣಿಯಪ್ಪ ಅವರು ಮುಕ್ಕೋಡ್ಲುವಿನ ಸಕಾರ್ಸರಿ ಪೈಸಾರಿ ಜಾಗದಲ್ಲಿ ಏಲಕ್ಕಿ, ಕಾಫಿ ತೋಟವನ್ನು ಮಾಡಿಕೊಂಡು ಬದುಕು ಕಟ್ಟಿ ಕೊಂಡಿದ್ದಾರೆ. ತಮ್ಮ ತೋಟ ಪೈಸಾರಿಯಾಗಿರುವ ಹಿನ್ನೆಲೆ ಇದನ್ನು ಮಂಜೂರು ಮಾಡಿಕೊಡುವಂತೆ 1991 ರಲ್ಲಿ ಫಾರಂ ನಂ.51 ರಲ್ಲಿ ಮತ್ತು 2018ರಲ್ಲಿ ಫಾರಂ ನಂ.53 ರಲ್ಲಿ ಅರ್ಜಿಯನ್ನು ಸಲ್ಲಿಸಿದ್ದಾರೆ. ಇವರ ತೋಟ ಪಹಣಿಯಲ್ಲಿ ಪೈಸಾರಿ ಎಂದು ಇದೆಯೇ ಹೊರತು ಅರಣ್ಯವೆಂದು ನಮೂದಾಗಿಲ್ಲ. ಹೀಗಿದ್ದೂ ಇವರ ಜಾಗದಲ್ಲಿನ ಕೃಷಿಯನ್ನು ನಾಶಮಾಡಲು ಅರಣ್ಯ ಇಲಾಖೆಗೆ ಅಧಿಕಾರವನ್ನು ನೀಡಿದವರು ಯಾರು ಎಂದು ಸುರೇಶ್ ಚಕ್ರವರ್ತಿ ಪ್ರಶ್ನಿಸಿದರು. *ಸದ್ದಿಲ್ಲದೆ ಸರ್ವೇ* ಪ್ರಸ್ತುತ ಸೋಮವಾರಪೇಟೆ ತಾಲ್ಲೂಕು ವ್ಯಾಪ್ತಿಯಲ್ಲಿ ‘ಸಿ ಮತ್ತು ಡಿ’ ಜಮೀನಿನ ವಿಚಾರದಲ್ಲಿ ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಮಸ್ಯೆ ಬಗೆಹರಿಕೆಗೆ ಕಂದಾಯ ಮತ್ತು ಅರಣ್ಯ ಇಲಾಖೆ ಜಂಟಿ ಸರ್ವೇ ನಡೆಸಬೇಕೆಂಬ ನಿಯಮವಿದೆ. ಪ್ರಸ್ತುತ ಅರಣ್ಯ ಇಲಾಖೆ ಇಂತಹ ಸೂಚನೆಗಳನ್ನು ಬದಿಗೊತ್ತಿ ಜಿಲ್ಲೆಯ ತಣ್ಣಿಮಾನಿ, ಭಾಗಮಂಡಲ ಮೊದಲಾದೆಡೆಗಳಲ್ಲಿ ಸರ್ವೆ ಕಾರ್ಯವನ್ನು ನಡೆಸುತ್ತಿದೆ. ಇದಕ್ಕೆ ನಮ್ಮ ವಿರೋಧವಿದೆ ಎಂದು ತಿಳಿಸಿದರು. ಸರ್ವೆ ನಡೆಸುವ ಸಂದರ್ಭ ಬೆಳೆಗಾರರಿಗೆ ಪೂರ್ವಭಾವಿ ಮಾಹಿತಿಯನ್ನು ನೀಡಬೇಕು. ಆದರೆ, ಇಂತಹ ಯಾವುದೇ ಸೂಚನೆಗಳನ್ನು ನೀಡದೆ ಸರ್ವೆ ಕಾರ್ಯ ನಡೆಸಲಾಗುತ್ತಿದೆ. ಸಿ ಮತ್ತು ಡಿ ಜಮೀನನ್ನು ಅರಣ್ಯವನ್ನಾಗಿ ಪರಿವರ್ತಿಸುವುದಕ್ಕೆ ಮತ್ತು ಈ ಸಂಬಂಧದ ಸೆಕ್ಷನ್ 4 ಸರ್ವೇ ಕಾರ್ಯಕ್ಕೆ ಬೆಳೆಗಾರರ ತೀವ್ರ ವಿರೋಧವಿದೆ. ಸಮಸ್ಯೆಯನ್ನು ಬಗೆಹರಿಸಿಕೊಡುವಂತೆ ಒತ್ತಾಯಿಸಿ ರೈತ ಹೋರಾಟ ಸಮಿತಿ ಬೃಹತ್ ಸ್ವರೂಪದ ಹೋರಾಟಗಳನ್ನು ನಡೆಸಿದೆಯಾದರು, ಇದಕ್ಕೆ ಸರ್ಕಾರದ ಮಟ್ಟದಲ್ಲಿ ಸೂಕ್ತ ಸ್ಪಂದನ ದೊರಕಿಲ್ಲ. ಇದಕ್ಕೆ ಬದಲಾಗಿ ಸಿ ಮತ್ತು ಡಿ ಜಮೀನುಗಳಲ್ಲಿ ಕೃಷಿ ನಡೆಸುತ್ತಿರುವ ಸಣ್ಣ ಬೆಳೆಗಾರರ ಮೇಲೆ ನಿರಂತರ ಕಿರುಕುಳ ನಡೆಯುತ್ತಿದೆ ಎಂದು ಆರೋಪಿಸಿದರು. ಸೋಮವಾರಪೇಟೆ ತಾಲ್ಲೂಕಿನ ಬಹಳಷ್ಟು ಬೆಳೆಗಾರರು ಸಿ ಮತ್ತು ಡಿ ಭೂಮಿಯಲ್ಲಿ ಅರ್ಧ, ಒಂದು ಏಕರೆ ತೋಟಗಳನ್ನು ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ. ಸಿ ಮತ್ತು ಡಿ ಜಾಗವನ್ನು ಅರಣ್ಯ ಭೂಮಿ ಎಂದು ಹೇಳುತ್ತಿರುವ ಕಾರಣ ಬೆಳೆಗಾರರಿಗೆ ಸರ್ಕಾರದ ಯಾವುದೇ ಪರಿಹಾರವಾಗಲಿ, ಸೌಲಭ್ಯಗಳಾಗಲಿ ದೊರಕುತ್ತಿಲ್ಲ ಎಂದು ಸುರೇಶ್ ಚಕ್ರವರ್ತಿ ಬೇಸರ ವ್ಯಕ್ತಪಡಿಸಿದರು. *ನಾಣಿಯಪ್ಪ ಕಣ್ಣೀರು* ಸಂತ್ರಸ್ತ ಬೆಳೆಗಾರ ಮುಕ್ಕೋಡ್ಲುವಿನ ಕಾಳಚಂಡ ನಾಣಿಯಪ್ಪ ಅವರು ಮಾತನಾಡಿ ತಮಗೆ ಎದುರಾಗಿರುವ ಸಂಕಷ್ಟದ ಕುರಿತು ಕಣ್ಣೀರು ಹಾಕಿದರು. ‘ಪತ್ನಿ ಹಾಗೂ ನಾವಿಬ್ಬರೇ ಮನೆಯಲ್ಲಿರುವುದು. ಪೈಸಾರಿ ಜಾಗದಲ್ಲಿರುವ ನಮ್ಮ ತೋಟಕ್ಕೆ ಬಂದ ಅರಣ್ಯ ಅಧಿಕಾರಿಗಳು, ಜಾಗ ದೇವರಕಾಡಾಗಿದ್ದು, ಅರಣ್ಯ ಇಲಾಖೆಗೆ ಸೇರಿದೆಯೆಂದು ತಿಳಿಸಿ ತೆರಳಿದ್ದರು. ಎರಡು ದಿನಗಳ ಬಳಿಕ ಹಠಾತ್ತನೆ ಆಗಮಿಸಿದ ಸಿಬ್ಬಂದಿಗಳು ಕಾಫಿ ಗಿಡಗಳು ಮತ್ತು ಫಸಲು ಭರಿತ ಏಲಕ್ಕಿ ಗಿಡಗಳನ್ನು ಸಂಪೂರ್ಣ ಕಡಿದು ಹಾಕಿದರು ಎಂದು ನೊಂದು ನುಡಿದರು.
ಸುದ್ದಿಗೋಷ್ಠಿಯಲ್ಲಿ ರೈತ ಹೋರಾಟ ಸಮಿತಿಯ ಭಾಗಮಂಡಲ ಹೋಬಳಿ ಅಧ್ಯಕ್ಷ ಹೊಸೂರು ಗಿರೀಶ್, ಸಂಘದ ಜಿಲ್ಲಾ ನಿರ್ದೇಶಕ ನಾಗಂಡ ಭವಿನ್, ಮುಕ್ಕೋಡ್ಲು ಗ್ರಾಮದ ಸಜನ್ ನಂದೀರ ಹಾಗೂ ಓಡಿಯಂಡ ಸುಜನ್ ಉಪಸ್ಥಿತರಿದ್ದರು.









