ಕಾರ್ಕಳ ಸೆ.13 NEWS DESK : ಕಾರ್ಕಳ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜು ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ಕಾರ್ಕಳ ತಾಲೂಕು ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ಸಪ್ತಸ್ವರ ವೇದಿಕೆಯಲ್ಲಿ “ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ” ನಡೆಯಲಿದೆ. ತಾಲೂಕು ಜನಜಾಗೃತಿ ವೇದಿಕೆಯ ಸದಸ್ಯರಾದ ಸಂತೋಷ್ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಮಾಜದ ಪ್ರಗತಿ ಆರೋಗ್ಯದ ಹಾದಿಯಲ್ಲೇ ಅಡಗಿದೆ. ಆರೋಗ್ಯದ ಅರಿವು ಬೆಳೆಯಲು ಜಾಗೃತಿ ಅತ್ಯವಶ್ಯಕ ‘ ಎಂದು ಕಿವಿಮಾತುಗಳನ್ನು ಹೇಳಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ಪ್ರಾದೇಶಿಕ ಕಛೇರಿ, ಉಡುಪಿಯ ಯೋಜನಾಧಿಕಾರಿಗಳಾದ ಗಣೇಶ್ ಆಚಾರ್ಯ ‘ ಆರೋಗ್ಯದ ಅರಿವು ಬೆಳಗಿದಾಗ ಮಾತ್ರ ಸಮಾಜ ಶ್ರೇಯೋಭಿವೃದ್ಧಿಯ ಹಾದಿ ಹಿಡಿಯುತ್ತದೆ ‘ ಎಂಬ ಸತ್ಯವಾಕ್ಯವನ್ನು ತಮ್ಮ ನಿರರ್ಗಳ ನುಡಿಗಳೊಂದಿಗೆ ತಿಳಿಸಿಕೊಟ್ಟರು. ಅಲ್ಲದೇ ಪ್ರತಿಜ್ಞಾವಿಧಿ ಕಾರ್ಯಕ್ರಮವನ್ನು ನೆರವೇರಿಸಿಕೊಟ್ಟರು. ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹ ಸಂಸ್ಥಾಪಕರಾದ ಡಾ. ಬಿ.ಗಣನಾಥ ಶೆಟ್ಟಿ, ‘ ಜಾಗೃತಿಯ ಬೆಳಕು ಮೂಡಿದಾಗಲೇ ಸಮಾಜ ಆರೋಗ್ಯ, ಅರಿವು ಮತ್ತು ಪ್ರಗತಿಯನ್ನು ಕಾಣುತ್ತದೆ ‘ ಎಂಬುದಾಗಿ ಹಲವು ಅಮೂಲ್ಯ ವಿಚಾರಗಳನ್ನು ಅಧ್ಯಕ್ಷೀಯ ನುಡಿಗಳೊಂದಿಗೆ ಹಂಚಿಕೊಂಡರು. ಈ ಸಂದರ್ಭದಲ್ಲಿ ಕರುಣಾಕರ ಕಡಂಬ, ಸದಸ್ಯರು, ತಾಲ್ಲೂಕು ಜನಜಾಗೃತಿ ವೇದಿಕೆ, ವಾಸು ಶೆಟ್ಟಿ, ಸದಸ್ಯರು, ತಾಲ್ಲೂಕು ಜನ ಜಾಗೃತಿ ವೇದಿಕೆ, ಸುಭಾಷ್, ಅಧ್ಯಕ್ಷರು, ಹಿರ್ಗಾನ ‘ಎ’ ಒಕ್ಕೂಟ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಎಲ್ಲಾ ಅತಿಥಿವರೇಣ್ಯರನ್ನು ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಸ್ಮರಣಿಕೆಗಳನ್ನು ನೀಡಿ ಗೌರವಿಸಲಾಯಿತು. ಬೋಧಕ-ಬೋಧಕೇತರ ವರ್ಗದವರು, ವಿದ್ಯಾರ್ಥಿ-ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕನ್ನಡ ಉಪನ್ಯಾಸಕಿ ಪ್ರಿಯಾಂಕ ತೀರ್ಥರಾಮ ಕಾರ್ಯಕ್ರಮ ನಿರೂಪಿಸಿ, ವಾಸು ಶೆಟ್ಟಿ ವಂದಿಸಿದರು.











