
ಮಡಿಕೇರಿ ಸೆ.13 NEWS DESK : ಸ್ವಾತಂತ್ರ್ಯ ಬಂದು 78 ವರ್ಷ ಕಳೆದರೂ ಇಂದಿಗೂ ಆದಿ ದ್ರಾವಿಡ ಸಮಾಜದ ಜನಾಂಗವನ್ನು ಕಡೆಗಣಿಸುತ್ತಿರುವ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಆದಿ ದ್ರಾವಿಡ ಸಮಾಜದ ರಾಜ್ಯಾಧ್ಯಕ್ಷ ಎಚ್. ಎಂ.ಸೋಮಪ್ಪ ಎಚ್ಚರಿಕೆ ನೀಡಿದ್ದಾರೆ.
ವಿರಾಜಪೇಟೆ ತಾಲೂಕಿನ ಮಾಲ್ದಾರೆಯಲ್ಲಿ ಕೊಡಗು ಆದಿ ದ್ರಾವಿಡ ಸಮಾಜ ಸೇವಾ ಸಂಘದ ಮಾಲ್ದಾರೆ ಘಟಕದ ನೇತೃತ್ವದಲ್ಲಿ ಆಯೋಜಿತ ಸಮುದಾಯ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಆದಿ ದ್ರಾವಿಡ ಜನಾಂಗ ದಕ್ಷಿಣ ಕನ್ನಡ ಜಿಲ್ಲೆಯ ಮೂಲ ನಿವಾಸಿಗಳಾಗಿದ್ದು, ಅಲ್ಲಿನ ಜಾತಿ ಪ್ರಮಾಣ ಪತ್ರದಲ್ಲಿ ಪರಿಶಿಷ್ಟ ಜಾತಿ ಆದಿ ದ್ರಾವಿಡ ಎಂದು ನಮೂದಿಸಲಾಗಿದೆ. ಹಲವು ವರ್ಷಗಳ ಹಿಂದೆ ಅಲ್ಲಿಂದ ಕೂಲಿ ಕೆಲಸಕ್ಕಾಗಿ ಕೊಡಗು, ಚಿಕ್ಕಮಂಗಳೂರು, ಹಾಸನ, ಶಿವಮೊಗ್ಗ ಸೇರಿದಂತೆ ಏಳು ಜಿಲ್ಲೆಗಳಲ್ಲಿ ಆದಿ ದ್ರಾವಿಡ ಜನಾಂಗದ ಕುಟುಂಬ ನೆಲೆಸಿದ್ದಾರೆಂದು ತಿಳಿಸಿದರು. ಕೊಡಗು ಜಿಲ್ಲೆಯಲ್ಲಿ ಸುಮಾರು 30 ಸಾವಿರಕ್ಕೂ ಹೆಚ್ಚು ಮಂದಿ ನೆಲೆಸಿದ್ದಾರೆ. ಸರ್ಕಾರ ಇತರ ಜಿಲ್ಲೆಗಳಲ್ಲಿ ವಾಸವಾಗಿರುವ ಆದಿ ದ್ರಾವಿಡ ಜನಾಂಗದವರನ್ನು ಎಲ್ಲಾ ರೀತಿಯಲ್ಲೂ ಕಡೆಗಣಿಸುತ್ತಿದ್ದು, ಯಾವುದೇ ಮೂಲ ಸೌಲಭ್ಯಗಳಿಲ್ಲದೆ ವಂಚಿತರಾಗಿ ಜೀವನ ನಡೆಸುತ್ತಿದ್ದಾರೆ. ಜಾತಿ ಪ್ರಮಾಣ ಪತ್ರದಲ್ಲಿ ಆದಿ ದ್ರಾವಿಡ ಎಂದು ನಮೂದಿಸದೆ ಕೈಬಿಡಲಾಗಿದ್ದು, ಇದರಿಂದ ಸಮಾಜ ಬಾಂಧವರಿಗೆ ಯಾವುದೇ ರೀತಿಯ ಸೌಲಭ್ಯಗಳು ಸಿಗದೇ ವಂಚಿತರಾಗುತ್ತಿದ್ದಾರೆಂದು ಆರೋಪಿಸಿದರು. ಜಾತಿ ಪ್ರಮಾಣ ಪತ್ರದಲ್ಲಿ ಆದಿ ದ್ರಾವಿಡ ಎಂದು ನಮೂದಿಸಲು 2017ರಿಂದ ಜಿಲ್ಲಾ ಆಡಳಿತ, ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಲಾಗಿದೆ. ಬೇಡಿಕೆ ಈಡೇರಿಕೆಗಾಗಿ ಹಲವು ವರ್ಷಗಳಿಂದಲೂ ಹೋರಾಟ ಮಾಡಲಾಗುತ್ತಿದೆ. ನಮ್ಮ ಬೇಡಿಕೆ ಈಡೇರಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯಮಟ್ಟದ ಬೃಹತ್ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ವಿಜಯ, ಲಲಿತ, ರವಿ, ನಾರಾಯಣ, ಧನಂಜಯ್ ಕುಮಾರ್, ಬಾಬು, ನಾರಾಯಣ, ಮಂಜುಳಾ, ಶಾಂತಪ್ಪ ಸೇರಿದಂತೆ ಮತ್ತಿತರರಿದ್ದರು.









