
ಮಡಿಕೇರಿ ಸೆ.17 NEWS DESK : ಕರ್ನಾಟಕ ಸರಕಾರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೂಲಕ ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 7 ರವರೆಗೆ ನಡೆಸುವ ಕರ್ನಾಟಕ ರಾಜ್ಯದ ಸಮಗ್ರ ಜನತೆಯ ಜಾತಿ ಜನಗಣತಿಯ ಸಂದರ್ಭ ಕೊಡವ ಭಾಷಿಕ ಜನಾಂಗದವರು ಧರ್ಮವನ್ನು “ಹಿಂದೂ”, ಜಾತಿಯನ್ನು ಸರಕಾರದ ಜಾತಿವಾರು ಪಟ್ಟಿಯಲ್ಲಿ ಈಗಾಲೇ ಗುರುತಿಸಲ್ಪಟ್ಟಿರುವ ತಮ್ಮ ಜಾತಿಯ ಹೆಸರನ್ನು ಮತ್ತು ಭಾಷೆ ಕಾಲಂನಲ್ಲಿ ಕೊಡವ ಭಾಷೆ ಎಂದು ನಿಖರ ಮಾಹಿತಿ ನೀಡುವಂತೆ ಕೊಡವ ಭಾಷಿಕ ಸಮುದಾಯಗಳ ಕೂಟ ಮನವಿ ಮಾಡಿದೆ. ವಿರಾಜಪೇಟೆಯ ಜಯಶ್ರೀ ಸಭಾಂಗಣದಲ್ಲಿ ನಡೆದ ಕೊಡವ ಭಾಷಿಕ ಸಮುದಾಯಗಳ ಕೂಟದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೂಟದ ಅಧ್ಯಕ್ಷ ಡಾ.ಮೇಚಿರ ಸುಭಾಷ್ ನಾಣಯ್ಯ ಅವರು ಜಾತಿ ಜನಗಣತಿ ಸಂದರ್ಭ ನಿಖರ ಮಾಹಿತಿ ನೀಡಿ ಸಹಕರಿಸುವಂತೆ ತಿಳಿಸಿದರು. ಗಣತಿದಾರರು ಮನೆಗೆ ಭೇಟಿ ನೀಡಿದಾಗ ಶೈಕ್ಷಣಿಕ, ಉದ್ಯೋಗ, ಅರ್ಥಿಕ, ಸಾಮಾಜಿಕ ಮತ್ತಿತರ ಮಾಹಿತಿಯನ್ನು ಯಾವುದೇ ತಪ್ಪಿಲ್ಲದೆ ಸ್ಪಷ್ಟವಾಗಿ ನೀಡಬೇಕು. ಸರಿಯಾದ ಮಾಹಿತಿ ನೀಡುವುದರಿಂದ ಮುಂದಿನ ದಿನಗಳಲ್ಲಿ ಮೀಸಲಾತಿ ಸೇರಿದಂತೆ ಸರಕಾರಿ ಸೌಲಭ್ಯಗಳನ್ನು ಪಡೆದುಕೊಳ್ಳಲು ಅನುಕೂಲವಾಗಲಿದೆ. ಆದ್ದರಿಂದ ಕೊಡವ ಭಾಷಿಕ 21 ಸಮುದಾಯಗಳ ಜನಾಂಗ ಬಾಂಧವರು ಕಡ್ಡಾಯವಾಗಿ ಪಾಲ್ಗೊಂಡು ಸರಕಾರದ ಜೊತೆ ಕೈಜೋಡಿಸಿ ಸಮರ್ಪಕ ಮಾಹಿತಿಯನ್ನು ನೀಡಿ ಯಶಸ್ವಿಗೊಳಿಸುವಂತೆ ಕೋರಿದರು. ಕೊಡವ ಭಾಷಿಕ ಸಮುದಾಯಗಳ ಕೂಟದ ಗೌರವ ಕಾರ್ಯದರ್ಶಿ ಕೂಡಂಡ ಸಾಬಾ ಸುಬ್ರಮಣಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಪೊನ್ನೀರ ಗಗನ್ ಸೇರಿದಂತೆ ಕೊಡವ ಭಾಷಿಕ ಸಮುದಾಯಗಳ ಪ್ರಮುಖರು ಉಪಸ್ಥಿತರಿದ್ದರು.









