
ಮಡಿಕೇರಿ ಸೆ.19 NEWS DESK : ನಗರದ ನಾಲ್ಕು ಶಕ್ತಿ ದೇವತೆಗಳಲ್ಲಿ ಒಂದಾದ ಶ್ರೀ ದಂಡಿನ ಮಾರಿಯಮ್ಮ ದೇವಾಲಯದಲ್ಲಿ ದಸರಾ ಹಬ್ಬದ ಪ್ರಯುಕ್ತ ಸೆ.22 ರಿಂದ ಅ.2ರ ವರೆಗೆ ದೇವಿಗೆ ವಿಶೇಷ ಅಲಂಕಾರ ಪೂಜೆ ನಡೆಯಲಿದೆ ಎಂದು ದೇವಾಲಯದ ಟ್ರಸ್ಟಿ ಹಾಗೂ ಶತಮಾನೋತ್ಸವ ಕಾರ್ಯಾಧ್ಯಕ್ಷ ಸಿ.ಎಸ್.ರಂಜಿತ್ ಕುಮಾರ್ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀ ದಂಡಿನ ಮಾರಿಯಮ್ಮ ದೇವಾಲಯವು 95ನೇ ವರ್ಷದ ಅದ್ದೂರಿ ದಸರಾ ಉತ್ಸವವನ್ನು ಆಚರಿಸುತ್ತಿದ್ದು, ಹನ್ನೊಂದು ದಿನಗಳ ಕಾಲ ದೇವಾಲಯದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಲಿದೆ ಎಂದರು. ಸೆ.22 ರಂದು ಬೆಳ್ಳಿಯ ಅಲಂಕಾರ, ಸೆ.23 ರಂದು ಪಂಚಪುಷ್ಪ ಅಂಲಕಾರ ನಡೆಯಲಿದ್ದು, ಸಂಜೆ 6 ಗಂಟೆಗೆ ದುರ್ಗಾಪೂಜೆ ಜರುಗಲಿದೆ. ಸೆ.24 ರಂದು ವಿಳ್ಯೆದೆಲೆ ಅಲಂಕಾರ, ಸೆ.25 ರಂದು ಕೊಲ್ಲೂರು ಮೂಕಾಂಬಿಕೆ ಅಲಂಕಾರ, ಸೆ.26 ರಂದು ಮಹಾಲಕ್ಷ್ಮಿ ಅಲಂಕಾರ ನಡೆಯಲಿದ್ದು, ಸಂಜೆ 6 ಗಂಟೆಗೆ ಕಲ್ಪೋಕ್ಷ ಪೂಜೆ ನೆರವೇರಲಿದೆ. ಸೆ.27 ರಂದು ಚಾಮುಂಡೇಶ್ವರಿ ಅಲಂಕಾರ ಪೂಜೆ, ಸೆ.28 ರಂದು ಗುಲಾಬಿ ಹೂವಿನ ಅಲಂಕಾರ, ಸೆ.29 ರಂದು ಶಾರದ ದೇವಿ ಅಲಂಕಾರ, ಸೆ.30 ರಂದು ಗಾಯತ್ರಿ ದೇವಿ ಅಲಂಕಾರ, ಅ.1 ರಂದು ಬಳೆ ಅಲಂಕಾರ, ಅ.2 ರಂದು ವಿಶೇಷ ನವೀಲಿನ ಅಲಂಕಾರ ಪೂಜೆ ನಡೆಯಲಿದೆ ಎಂದು ತಿಳಿಸಿದರು. ಕರಗ ಅಲಂಕಾರ ಪೂಜೆ ಸೇರಿದಂತೆ ವಿವಿಧ ಪೂಜೆ ಮಾಡಲಿಚ್ಚಿಸುವ ಭಕ್ತಾಧಿಗಳು ದೇವಾಲಯದ ಕೌಂಟರ್‍ನಲ್ಲಿ ಮಾಹಿತಿಯನ್ನು ಪಡೆಯಬಹುದು ಎಂದು ಹೇಳಿದರು. ದಸರಾ ಪ್ರಯುಕ್ತ ದೇವಾಲಯದಲ್ಲಿ ಹತ್ತು ದಿನಗಳ ಕಾಲ ಮಧ್ಯಾಹ್ನ ಅನ್ನದಾನ ಸೇವೆ ನಡೆಯಲಿದೆ. ಪ್ರತೀ ವರ್ಷದಂತೆ ಈ ಬಾರಿಯೂ ದಶಮಂಟಪಗಳ ನಿಯಮಗಳನ್ನು ಪಾಲಿಸಿಕೊಂಡು ಆರು ಪ್ರದರ್ಶನವನ್ನು ನೀಡಲಾಗುವುದು ಎಂದರು. ದಸರಾ ಉತ್ಸವದ ನಂತರ ದೇವಾಲಯದಲ್ಲಿ ಜೀರ್ಣೋದ್ಧಾರ ಹಾಗೂ ಪುನರ್ ಪ್ರತಿಷ್ಠಾಪನಾ ಪೂಜೆಗಳನ್ನು ಹಮ್ಮಿಕೊಂಡಿರುವುದಾಗಿ ರಂಜಿತ್ ಕುಮಾರ್ ತಿಳಿಸಿದರು. ದೇವಾಲಯದ ಟ್ರಸ್ಟಿ ಹಾಗೂ ದಸರಾ ಉತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಂ.ಎಲ್.ಸತೀಶ್ ಮಾತನಾಡಿ, ಈ ಬಾರಿ ದಸರಾ ಉತ್ಸವವನ್ನು ವಿಜ್ರಂಭಣೆಯಿಂದ ನಡೆಸಲು ಮತ್ತು ಬಹುಮಾನವನ್ನು ತನ್ನದಾಗಿಸಿಕೊಳ್ಳಲು ಸಕಲ ಸಿದ್ದತೆಯನ್ನು ಮಾಡಿಕೊಂಡಿದೆ. ಅಂಧಕಾಸುರ ವಧೆ ಕಥಾ ಸಾರಾಂಶವನ್ನು ಅಳವಡಿಸಲಾಗಿದ್ದು, ಸುಮಾರು 18 ಲಕ್ಷ ರೂ.ವೆಚ್ಚದಲ್ಲಿ ಮಂಟಪ ಹೊರತರಲಾಗುತ್ತಿದೆ ಎಂದು ಮಾಹಿತಿ ನೀಡಿದರು. ದೇವಾಲಯದ ಟ್ರಸ್ಟಿ ಹಾಗೂ ಗೌರವಾಧ್ಯಕ್ಷರಾದ ನವೀನ್ ಅಂಬೆಕಲ್ ಮಾತನಾಡಿ, ನಗರದ ನಾಲ್ಕು ಶಕ್ತಿದೇವತೆಗಳಲ್ಲಿ ಒಂದಾದ ಶ್ರೀ ದಂಡಿನ ಮಾರಿಯಮ್ಮ ದೇವಿಯು ಸುಮಾರು 300 ವರ್ಷಗಳ ಹಿಂದೆ ರಾಜರ ಆಳ್ವಿಕೆ ಕಾಲದಲ್ಲಿ ಪ್ರತಿಷ್ಠಾಪಿಸಲ್ಪಟ್ಟ ದೇವಿಯಾಗಿದೆ. 95 ವರ್ಷಗಳಿಂದಲೂ ದಸರಾವನ್ನು ದಂಡಿನಮಾರಿಯಮ್ಮ ದೇವಾಲಯ ಆಚರಿಸುತ್ತ ಬಂದಿದೆ ಎಂದರು. ಸೆ.22 ರಿಂದ 2ರ ವರೆಗೆ ದೇವಾಲಯದಲ್ಲಿ ದೇವಿಪೂಜೆ, ಕರಗ ಮಹೋತ್ಸವ, ಆಯುಧಪೂಜೆ, ಕುಂಭಪೂಜೆ ಹಾಗೂ ಅನೇಕ ದೇವತಾ ಕಾರ್ಯಗಳು ಜರುಗಲಿದ್ದು, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಟ್ರಸ್ಟಿ ಹಾಗೂ ದಸರಾ ಉತ್ಸವ ಸಮಿತಿ ಗೌರವಾಧ್ಯಕ್ಷ ಎನ್.ಎ.ಸುಬ್ರಮಣಿ, ಮಂಟಪ ಸಮಿತಿ ಅಧ್ಯಕ್ಷ ಹೆಚ್.ಎಸ್.ನಾಗರಾಜು ಉಪಸ್ಥಿತರಿದ್ದರು.









