
ಮಡಿಕೇರಿ ಸೆ.19 NEWS DESK : ಜಿಲ್ಲೆಯ ಜನತೆಯ ಬಹುದಿನಗಳ ನಿರೀಕ್ಷೆಯಂತೆ ಸುಮಾರು 10.50 ಕೋಟಿ ರೂ. ವೆಚ್ಚದ ‘ಹೃದ್ರೋಗ ತಪಾಸಣಾ ಕೇಂದ್ರ’ ಶೀಘ್ರದಲ್ಲೆ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧಕ ಆಸ್ಪತ್ರೆಯಲ್ಲಿ ಆರಂಭಗೊಳ್ಳಲ್ಳಿದೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಹೆಚ್.ಕೆ.ಸೋಮಶೇಖರ್ ಅವರು ತಿಳಿಸಿದ್ದಾರೆ. ಕೊಡಗು ಪತ್ರಕರ್ತರ ಸಂಘ ಮತ್ತು ಕೊಡಗು ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧಕ ಆಸ್ಪತ್ರೆಯ ಸಹಕಾರದೊಂದಿಗೆ ನಗರದ ಕಾವೇರಿ ಹಾಲ್‍ನಲ್ಲಿ ಪತ್ರಕರ್ತರು ಹಾಗೂ ಅವರ ಕುಟುಂಬ ವರ್ಗದವರಿಗೆ ಆಯೋಜಿಸಲಾಗಿದ್ದ ‘ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಡಿಕೇರಿ ಕ್ಷೇತ್ರದ ಶಾಸಕರ ಅವಿರತ ಪರಿಶ್ರಮದಿಂದ ಹೃದ್ರೋಗ ತಪಾಸಣಾ ಕೇಂದ್ರದ ಸೌಲಭ್ಯ ಜಿಲ್ಲೆಗೆ ಲಭ್ಯವಾಗುತ್ತಿದೆ. ಉದ್ದೇಶಿತ ಹೃದ್ರೋಗ ತಪಾಸಣಾ ಕೇಂದ್ರವು ‘ಪಿಪಿಪಿ’ ಯೋಜನೆಯಡಿ ಕಾರ್ಯನಿರ್ವಹಿಸಲಿದ್ದು, ಈಗಾಗಲೇ ಉದ್ದೇಶಿತ ಹೃದ್ರೋಗ ತಪಾಸಣಾ ಕೇಂದ್ರ ಸ್ಥಾಪನೆಗೆ ಸ್ಥಳ ಪರಿಶೀಲನಾ ಕಾರ್ಯ ನಡೆದಿದೆ ಎಂದರು. ಇಲ್ಲಿಯವರೆಗು ಗಂಭೀರ ಆರೋಗ್ಯ ಸಮಸ್ಯೆಗಳ ಸಂದರ್ಭ ಸಾರ್ವಜನಿಕರು ಹೊರ ಜಿಲ್ಲೆಗಳ ಆಸ್ಪತ್ರೆಗಳತ್ತ ಮುಖಮಾಡಬೇಕಾದ ಪರಿಸ್ಥಿತಿಗಳಿತ್ತು. ಇದೀಗ ಹೃದ್ರೋಗ ತಪಾಸಣಾ ಕೇಂದ್ರ ಆರಂಭಗೊಳ್ಳುತ್ತಿದೆಯಾದರೆ, ನೆಫ್ರಾಲಜಿ ವಿಭಾಗದಲ್ಲಿ ತಜ್ಞ ವೈದ್ಯರಾದ ಡಾ.ಅತೀಶ್ ಅವರು ಕಾರ್ಯನಿರ್ವಹಿಸಲಿದ್ದಾರೆ. ನ್ಯೂರೋಲಜಿ ಸೇರಿದಂತೆ ಕೆಲ ವಿಭಾಗಗಳ ಚಿಕಿತ್ಸಾ ಸೌಲಭ್ಯಗಳ ಆರಂಭ ಇನ್ನಷ್ಟೆ ಆಗಬೇಕಿದೆ. ಉತ್ತಮ ವೈದ್ಯಕೀಯ ಸೇವೆಯನ್ನು ನೀಡುತ್ತಿರುವ ಬೋಧಕ ಆಸ್ಪತ್ರೆಯ ಪ್ರಯೋಜನವನ್ನು ಜಿಲ್ಲೆಯ ಜನತೆ ಪಡೆದುಕೊಳ್ಳುವಂತೆ ಕರೆ ನೀಡಿದರು. *1050 ಹಾಸಿಗೆಯ ಆಸ್ಪತ್ರೆ*
ನಗರದಲ್ಲಿರುವ ಬೋಧಕ ಆಸ್ಪತ್ರೆಯಲ್ಲಿ ಎರಡನೇ ಹಂತದ ಕಾಮಗಾರಿಗಳು ನಡೆಯುತ್ತಿದ್ದು, ಶೀಘ್ರದಲ್ಲೆ 1050 ಹಾಸಿಗೆಗಳ ಆಸ್ಪತ್ರೆಯಾಗಿ ರೂಪುಗೊಳ್ಳಲಿದೆ. ಅತ್ಯುನ್ನತ ಗುಣಮಟ್ಟದ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸುವ ಮೂಲಕ ಸೂಪರ್ ಸ್ಪೆಷಾಲಿಟಿ ಮಟ್ಟದ ಸೌಲಭ್ಯ ದೊರಕಲಿದೆ ಎಂದು ಡಾ.ಹೆಚ್.ಕೆ.ಸೋಮಶೇಖರ್ ವಿಶ್ವಾಸ ವ್ಯಕ್ತಪಡಿಸಿದರು. *ನಿರ್ಲಕ್ಷ್ಯ ಬೇಡ* ಜಿಲ್ಲಾ ಸರ್ಜನ್ ಡಾ.ನಂಜುಂಡಯ್ಯ ಮಾತನಾಡಿ, ನಮ್ಮ ದೇಶದಲ್ಲಿ ಆರೋಗ್ಯ ಸಂರಕ್ಷಣೆಯನ್ನು ನಿರ್ಲಕ್ಷಿಸಿಕೊಂಡು ಬರಲಾಗುತ್ತಿದೆ. ವಿದೇಶಗಳಲ್ಲಿ 40 ವರ್ಷ ಪ್ರಾಯದ ಬಳಿಕ ವಾರ್ಷಿಕ ಆರೋಗ್ಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವುದು ರೂಢಿಗತವಾಗಿದೆ. ಅಂತಹ ಮನಸ್ಥಿತಿಯನ್ನು ಬೆಳೆಸಿಕೊಳ್ಳುವ ಮೂಲಕ ಸಮಸ್ಯೆಗಳಿದ್ದಲ್ಲಿ ಅದನ್ನು ಬಗೆಹರಿಸಿಕೊಳ್ಳಬೇಕೆಂದು ಕರೆ ನೀಡಿದರು.
ಬೋಧಕ ಆಸ್ಪತ್ರೆಯಲ್ಲಿ ಪ್ರಸ್ತುತ ಲ್ಯಾಪ್ರೋ ಸ್ಕೋಪಿಕ್ ಸೇರಿದಂತೆ ವಿವಿಧ ಆಧುನಿಕ ಚಿಕಿತ್ಸಾ ಸೌಲಭ್ಯಗಳು ಲಭ್ಯವಿರುವುದಾಗಿ ತಿಳಿಸಿದರು. *ಆಸ್ಪತ್ರೆ ಮೇಲ್ದರ್ಜೆಗೆ* ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಸತೀಶ್ ಅವರು ಮಾತನಾಡಿ, ಕುಶಾಲನಗರದ 50 ಹಾಸಿಗೆ ಆಸ್ಪತೆಯನ್ನು 100 ಹಾಸಿಗೆಯ ಆಸ್ಪತ್ರೆಯನ್ನಾಗಿ ಶೀಘ್ರ ಮೇಲ್ದರ್ಜೆಗೇರಿಸಲಾಗುತ್ತದೆ. ವಿರಾಜಪೇಟೆಯ 90 ಹಾಸಿಗೆಯ ಆಸ್ಪತ್ರೆಯನ್ನು 240 ಹಾಸಿಗೆಯ ಸೌಲಭ್ಯವುಳ್ಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲಾಗುತ್ತಿದೆ ಎಂದರು. ಗೋಣಿಕೊಪ್ಪಲಿನಲ್ಲಿ ಇರುವ ಆರೋಗ್ಯ ಕೇಂದ್ರವನ್ನು ‘ತಾಯಿ ಮತ್ತು ಮಕ್ಕಳ ಆಸ್ಪತ್ರೆ’ಯನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಈಗಾಗಲೆ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಇಂದಿನ ಬದಲಾದ ಜೀವನ ಪದ್ಧತಿಗಳಿಂದ ಯುವ ಸಮೂಹ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಿದೆ. ಈ ಹಿನ್ನೆಲೆ ಆರೋಗ್ಯ ತಪಾಸಣೆಯ ಮೂಲಕ ಆರೋಗ್ಯ ಸಂರಕ್ಷಣೆಗೆ ಒತ್ತು ನಿಡುವಂತೆ ತಿಳಿಸಿದರು. *ತಪ್ಪು ಕಲ್ಪನೆ ಹೋಗಲಾಡಿಸಿ*
ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಅನಿಲ್ ಹೆಚ್.ಟಿ. ಅವರು ಮಾತನಾಡಿ, ಜಿಲ್ಲೆಯ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಅಗತ್ಯವಾದ ಕೋಟ್ಯಂತರ ಮೌಲ್ಯದ ಉಪಕರಣಗಳು ಇವೆಯಾದರು, ಇದರ ಬಳಕೆಗೆ ಅಗತ್ಯವಾದ ಸಿಬ್ಬಂದಿಗಳು, ತಜ್ಞರ ಕೊರತೆ ಇದೆ. ಜಿಲ್ಲೆಯಲ್ಲಿ ಆರು ತಿಂಗಳ ಕಾಲ ಗಾಳಿ ಮಳೆ ಇರುತ್ತದೆ, ಮಕ್ಕಳಿಗೆ ಯೋಗ್ಯ ಶಿಕ್ಷಣ ದೊರಕಲಾರದು ಎನ್ನುವ ತಪ್ಪು ಕಲ್ಪನೆಗಳಿಂದ ಇಲ್ಲಿಗೆ ವೈದ್ಯರು, ಸಿಬ್ಬಂದಿಗಳು ಬರುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಇಂತಹ ತಪ್ಪು ಕಲ್ಪನೆಗಳನ್ನು ದೂರಮಾಡಿ, ಜಿಲ್ಲೆಯ ಆಸ್ಪತ್ರೆಗಳಿಗೆ ವೈದ್ಯರು ಹಾಗೂ ಅಗತ್ಯ ಸಿಬ್ಬಂದಿಗಳನ್ನು ನೇಮಕ ಮಾಡಲು ಸರಕಾರ ಮುಂದಾಗಬೇಕೆಂದು ಮನವಿ ಮಾಡಿದರು. ಸಂಘದ ಸ್ಥಾಪಕ ಅಧ್ಯಕ್ಷ ಎಸ್.ಎ.ಮುರಳೀಧರ್ ಅವರು ಮಾತನಾಡಿ, ಹಲವು ದಶಕಗಳ ಹಿಂದೆ ನಾವು ನೋಡಿದ್ದ ಜಿಲ್ಲಾ ಆಸ್ಪತ್ರೆ ಹಾಗೂ ಈಗಿನ ಬೋಧಕ ಆಸ್ಪತೆಗೆ ಅಜಗಜಾಂತರ ವ್ಯತ್ಯಾಸವನ್ನು ನಾವಿಂದು ಕಾಣುತ್ತಿದ್ದು, ಪ್ರಸ್ತುತ ಬೋಧಕ ಆಸ್ಪತ್ರೆಯಲ್ಲಿ ಉತ್ತಮವಾದ ಚಿಕಿತ್ಸಾ ಸೌಲಭ್ಯಗಳು ದೊರಕುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಕೊಡಗು ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಜಿ.ವಿ.ರವಿ ಕುಮಾರ್ ಅವರು, ಒತ್ತಡಗಳ ನಡುವೆ ಕಾರ್ಯನಿರ್ವಹಿಸುವ ಪತ್ರಕರ್ತರು ಹಾಗೂ ಅವರ ಕುಟುಂಬದ ಆರೋಗ್ಯ ಸಂರಕ್ಷಣೆಯ ಹಿತ ದೃಷ್ಟಿಯಿಂದ ಆರೋಗ್ಯ ಶಿಬಿರವನ್ನು ಆಯೋಜಿಸಲಾಗಿದೆ. ಪ್ರಸ್ತುತ ನಗರದಲ್ಲಿ ಬೋಧಕ ಆಸ್ಪತ್ರೆಯನ್ನು ಶಾಸಕರ ಸಹಕಾರದೊಂದಿಗೆ ಮೇಲ್ದರ್ಜೆಗೇರಿಸಿರುವುದಲ್ಲದೆ, ಹೃದ್ರೋಗ ತಪಾಸಣಾ ಕೇಂದ್ರ ಸ್ಥಾಪಿಸುವ ಪ್ರಯತ್ನಗಳು ನಡೆಯುತ್ತಿದೆ. ಮುಂಬರುವ ದಿನಗಳಲ್ಲಿ ಕೀಮೋ ಥೆರಪಿ ಸೇರಿದಂತೆ ವಿವಿಧ ಸೌಲಭ್ಯಗಳು ಸಾರ್ವಜನಿಕರಿಗೆ ಲಭ್ಯವಾಗಲಿದೆಯೆನ್ನುವ ವಿಶ್ವಾಸ ವ್ಯಕ್ತಪಡಿಸಿದರು. ಕೊಡಗು ಪತ್ರಕರ್ತರ ಸಂಘದ ಖಜಾಂಚಿ ಟಿ.ಕೆ.ಸಂತೋಷ್ ಅವರು ಮಾತನಾಡಿ, ಸಂಘದಿಂದ ಪತ್ರಕರ್ತರ ಹಿತದೃಷ್ಟಿಯಿಂದ ಇಂತಹ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಇದರ ಸದುಪಯೋಗವನ್ನು ಪತ್ರಕರ್ತರು ಪಡೆದುಕೊಳ್ಳುವಂತೆ ಕೋರಿದರು. *ಸನ್ಮಾನ* ರಾಜ್ಯ ಸರ್ಕಾರ ಕೊಡಮಾಡುವ ಪ್ಲಾರೆನ್ಸ್ ನೈಂಟಿಗೆಲ್ ಪ್ರಶಸ್ತಿಗೆ ಭಾಜನರಾಗಿರುವ ನಿವೃತ್ತ ನರ್ಸಿಂಗ್ ಸೂಪರಿಂಟೆಂಡೆಂಟ್ ವಸಂತಿ ಬಿ.ಅವರನ್ನು ಸಂಘದ ಪದಾಧಿಕಾರಿಗಳು ಸನ್ಮಾನಿಸಿ ಗೌರವಿಸಿದರು.
ಇದೇ ಸಂದರ್ಭ ಡಾ.ಹೆಚ್.ಕೆ.ಸೋಮಶೇಖರ್, ಡಾ. ನಂಜುಂಡಯ್ಯ, ಡಾ.ಸತೀಶ್ ಅವರನ್ನು ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ಕೊಡಗು ಪತ್ರಕರ್ತರ ಸಂಘದ ಸೋಮವಾರಪೇಟೆ ತಾಲ್ಲೂಕು ಅಧ್ಯಕ್ಷರಾದ ಹೆಚ್.ಆರ್.ಹರೀಶ್ ಕುಮಾರ್, ಕುಶಾಲನಗರ ತಾಲ್ಲೂಕು ಅಧ್ಯಕ್ಷರಾದ ವಿಘ್ನೇಶ್ ಭೂತನಕಾಡು, ವಿರಾಜಪೇಟೆ ತಾಲ್ಲೂಕು ಅಧ್ಯಕ್ಷರಾದ ಮುಲ್ಲೇಂಗಡ ಮಧೋಶ್ ಪೂವಯ್ಯ ಉಪಸ್ಥಿತರಿದ್ದರು.
ಸಂಘದ ಸದಸ್ಯರಾದ ಟಿ.ಜೆ.ಪ್ರವೀಣ್ ಕುಮಾರ್ ಪ್ರಾರ್ಥಿಸಿ, ಸಂಘದ ನಿರ್ದೇಶಕರಾದ ಅರುಣ್ ಕೂರ್ಗ್ ಸ್ವಾಗತಿಸಿದರು. ಪಿ.ಎಂ. ರವಿ ಕಾರ್ಯಕ್ರಮ ನಿರೂಪಿಸಿ, ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ಬಿಳಿಗೇರಿ ವಂದಿಸಿದರು. ಆರೋಗ್ಯ ತಪಾಸಣೆ – ಇಂದು ಬೆಳಗ್ಗಿನಿಂದ ಮಧ್ಯಾಹ್ನ 3 ಗಂಟೆಯವರೆಗೆ ಜಿಲ್ಲಾ ವ್ಯಾಪ್ತಿಯ ಪತ್ರಕರ್ತರು ಹಾಗೂ ಅವರ ಕಟುಂಬದವರ ಆರೋಗ್ಯ ತಪಾಸಣಾ ಕಾರ್ಯ ನಡೆಯಿತು. ಕೊಡಗು ವ್ಯದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧಕ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗಳು ಆರೋಗ್ಯ ತಪಾಸಣೆ ನಡೆಸಿಕೊಟ್ಟರು.












