
ಮಡಿಕೇರಿ ಸೆ.20 NEWS DESK : ರಾಜ್ಯ ಸರಕಾರದ ಮೂಲಕ ನಡೆಯಲಿರುವ ಜಾತಿ ಜನಗಣತಿ ಸಂದರ್ಭ ಸರ್ವ ಕೊಡವರು ಧರ್ಮವನ್ನು ಹಿಂದೂ ಮತ್ತು ಜಾತಿಯನ್ನು ಕೊಡವ ಎಂದು ಯಾವುದೇ ಗೊಂದಲವಿಲ್ಲದೆ ನಮೂದಿಸುವಂತೆ ವಿವಿಧ ಕೊಡವ ಸಮಾಜಗಳ ಪ್ರಮುಖರು ಮನವಿ ಮಾಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ, ನಾಪೋಕ್ಲು ಕೊಡವ ಸಮಾಜದ ಮಾಜಿ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಅವರು, ಜಾತಿ ಹಾಗೂ ಧರ್ಮ ಎರಡನ್ನೂ ಕೊಡವ ಎಂದು ನಮೂದಿಸುವಂತೆ ಕೆಲವರು ಕರೆ ನೀಡಿರುವುದು ವಿಷಾದನೀಯ ಮತ್ತು ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕೊಡವರು ಸಾಮರಸ್ಯದಿಂದ ಬದುಕು ಸಾಗಿಸುತ್ತಿದ್ದಾರೆ. ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಕೊಡವ ಜನಾಂಗ ವಿಶಿಷ್ಟವಾದ ಭವ್ಯ ಸಂಸ್ಕೃತಿಯನ್ನು ಹೊಂದಿದೆ. ಕೊಡವ ಸಂಸ್ಕೃತಿ ಹಿಂದೂ ಧರ್ಮದೊಂದಿಗೆ ಹೊಂದಿಕೊಂಡಿದೆ. ಕೊಡವರು ನಾಗನಸ್ಥಾನ, ಅಯ್ಯಪ್ಪ ಬನ ಮತ್ತು ಊರಿನಲ್ಲಿ ಭಗವತಿಯನ್ನು ಹಿಂದೂ ಸಂಪ್ರದಾಯದ ಪ್ರಕಾರವೇ ಪೂಜಿಸುತ್ತಾರೆ. ಪ್ರತಿವರ್ಷ ಭಗವತಿ ಉತ್ಸವ ಹಿಂದು ಸಂಪ್ರದಾಯದಂತೆಯೇ ನಡೆಯುತ್ತದೆ. ಭಗವತಿ ದೇವಾಲಯಗಳಲ್ಲಿ ಕೊಡವರೇ ತಕ್ಕ ಮುಖ್ಯಸ್ಥರಾಗಿರುತ್ತಾರೆ. ತಲಕಾವೇರಿಯಲ್ಲಿ ಕುಲದೇವತೆ ಕಾವೇರಿ ತೀರ್ಥ ರೂಪಿಣಿಯಾಗಿ ದರ್ಶನ ನೀಡುವ ದಿನದ ಆಚರಣೆಗಳು ಹಿಂದೂ ಸಂಪ್ರದಾಯದಂತೆಯೇ ನಡೆಯುತ್ತದೆ. ಪುತ್ತರಿ ಹಬ್ಬದಂದು ಈಶ್ವರ, ಇಗ್ಗುತ್ತಪ್ಪ ದೇವರನ್ನು ಕರೆಯುತ್ತೇವೆ ಮತ್ತು ಹಿಂದೂ ಪದ್ಧತಿಯಂತೆಯೇ ಆಚರಿಸುತ್ತೇವೆ. ಊರ್ ಮಂದ್‍ನಲ್ಲಿ ಬೊಳಕಾಟ್ ಮತ್ತು ಕೋಲಾಟ್ ನಡೆಸುವ ಸಂದರ್ಭ ಮಂದ್ ಅನ್ನು ತೆರೆಯುವಾಗ ಅಯ್ಯಪ್ಪನನ್ನು ಬೇಡುತ್ತೇವೆ. ಕೊಡವರು ತಾವಿರುವ ಪ್ರದೇಶಕ್ಕನುಗುಣವಾಗಿ ಮಹಾದೇವ, ಭಗವತಿ ಈಶ್ವರ ಹಾಗೂ ಇಗ್ಗುತ್ತಪ್ಪ ದೇವರನ್ನು ಬೇಡುತ್ತಾರೆ. ಇದೆಲ್ಲವೂ ಹಿಂದೂ ಸಂಪ್ರದಾಯಕ್ಕೆ ಪೂರಕವಾಗಿದ್ದು, ಕೊಡವರು ಹಿಂದೂಗಳೇ ಆಗಿದ್ದಾರೆ. ಆದರೆ ರಾಜ್ಯದಲ್ಲಿ ಜನಗಣತಿಯ ಮೂಲಕ ಹಿಂದೂ ಸಮಾಜವನ್ನು ಒಡೆಯುವ ದೊಡ್ಡ ಷಡ್ಯಂತ್ರ ನಡೆಯುತ್ತಿದೆ ಎಂದು ಆರೋಪಿಸಿದರು. ಸಮೀಕ್ಷೆ ಸಂದರ್ಭ ಕೊಡವರು ಯಾವುದೇ ಗೊಂದಲಕ್ಕೆ ಒಳಗಾಗಬಾರದು. ಧರ್ಮವನ್ನು ಹಿಂದೂ ಎಂದು ಮತ್ತು ಜಾತಿಯನ್ನು ಕೊಡವ ಎಂದು ನಮೂದಿಸಬೇಕು. ಹಿಂದೂ ಧರ್ಮದ ರಕ್ಷಣೆಗೆ ಒಗ್ಗಟ್ಟನ್ನು ಕಾಪಾಡಬೇಕೆಂದು ಮನು ಮುತ್ತಪ್ಪ ಕರೆ ನೀಡಿದರು. ಮಡಿಕೇರಿ ಕೊಡವ ಸಮಾಜದ ಮಾಜಿ ಅಧ್ಯಕ್ಷ ಕೆ.ಎಸ್.ದೇವಯ್ಯ ಅವರು ಮಾತನಾಡಿ ಕೊಡವರೆಲ್ಲರೂ ಹಿಂದೂ ಧರ್ಮವನ್ನೇ ಪಾಲಿಸುತ್ತಿದ್ದಾರೆ. ನಮ್ಮ ಜನರನ್ನು ಒಡೆಯುವ ಪ್ರಯತ್ನ ನಡೆಯುತ್ತಿದೆ ಎಂದು ಅಭಿಪ್ರಾಯಪಟ್ಟರು.
ಭಗವತಿ ದೇವಿಯ ಆರಾಧನೆ ಕೊಡವರೆಲ್ಲರ ಕರ್ತವ್ಯವಾಗಿದೆ. ದೇವರ ಕಾಡಿನಲ್ಲಿ ಕಲ್ಲಿನ ರೂಪದಲ್ಲಿ ಅಯ್ಯಪ್ಪನನ್ನು ಆರಾಧಿಸಲಾಗುವುದು. ಆದ್ದರಿಂದ ಕೊಡವರೆಲ್ಲರು ಹಿಂದೂ ಸಂಪ್ರದಾಯಕ್ಕೆ ಬದ್ಧರಾಗಿದ್ದಾರೆ ಎಂದರು. ಕೊಡವ ಸಮಾಜದ ಪ್ರಮುಖ ಮಾಚಿಮಾಡ ರವೀಂದ್ರ ಮಾತನಾಡಿ, ಕೊಡವರಿಗು ಹಾಗೂ ಹಿಂದೂ ಧರ್ಮಕ್ಕೂ ಸುಮಾರು ಹತ್ತು ಸಾವಿರ ವರ್ಷಗಳ ನಂಟಿದೆ. ಆದರೆ ರಾಜ್ಯ ಸರ್ಕಾರ ಜಾತಿ ಜನಗಣತಿಯ ಮೂಲಕ ಹಿಂದೂ ಸಮಾಜವನ್ನು ಸಣ್ಣ ಸಣ್ಣ ಜಾತಿಗಳನ್ನಾಗಿ ಒಡೆಯುವ ಪ್ರಯತ್ನ ಮಾಡುತ್ತಿದೆ. ಆ ಮೂಲಕ ಮತ ಪಡೆಯುವ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿದರು.
ಸಂವಿಧಾನದಲ್ಲಿ ಕೂಡ ಏಳು ಧರ್ಮಗಳನ್ನು ಮಾತ್ರ ಉಲ್ಲೇಖಿಸಲಾಗಿದೆ, ಕೊಡವ ಧರ್ಮ ಎನ್ನುವುದು ಇಲ್ಲ. ಕೊಡವ ಭಾಷಿಕ ಜನಾಂಗಗಳ ಒಕ್ಕೂಟ ಕೂಡ ಧರ್ಮವನ್ನು ಹಿಂದೂ ಎಂದು ನಮೂದಿಸಲು ಮುಂದಾಗಿರುವುದು ಸ್ವಾಗತರ್ಹ ಕ್ರಮವಾಗಿದೆ. ಕೊಡವರು ಯಾವುದೇ ಕಾರಣಕ್ಕೂ ಗೊಂದಲಕ್ಕೆ ಒಳಗಾಗುವುದು ಬೇಡ. ರಾಜ್ಯ ಸರ್ಕಾರದ ಈ ಸಮೀಕ್ಷೆಯಿಂದ ಏನೂ ಪ್ರಯೋಜನವಿಲ್ಲ ಎಂದು ಟೀಕಿಸಿದರು. ಕೊಡವ ಸಮಾಜಗಳ ಒಕ್ಕೂಟದ ಗೌರವ ಕಾರ್ಯದರ್ಶಿ ವಾಟೇರಿರ ಶಂಕರಿ ಪೂವಯ್ಯ ಮಾತನಾಡಿ, ಕೊಡವರು ಹಿಂದೂ ಧರ್ಮದ ಆಚರಣೆಗೆ ಬದ್ಧರಾಗಿರುವುದರಿಂದ ಸಮೀಕ್ಷೆಯಲ್ಲಿ ಹಿಂದೂ ಧರ್ಮವೆಂದು ನಮೂದಿಸಬೇಕು. ಕೊಡವರು ಹಿಂದೂ ಧರ್ಮವನ್ನೇ ಪಾಲಿಸುವ ಮೂಲಕ ತಮ್ಮ ಮಕ್ಕಳನ್ನು ಹಿಂದೂಗಳನ್ನಾಗಿ ಉಳಿಸಿ ಬೆಳೆಸುವಂತೆ ಕರೆ ನೀಡಿದರು. ದೇಶ ತಕ್ಕರಾದ ಬೊಳ್ಳೆರ ವಿನಯ್ ಅಪ್ಪಯ್ಯ ಅವರು ಮಾತನಾಡಿ, ಹಿಂದೂಗಳಿಗಿರುವುದು ಒಂದೇ ಭೂಮಿ, ಕೊಡವರೆಲ್ಲರೂ ಹಿಂದೂಗಳೇ ಆಗಿದ್ದಾರೆ. ಸಮೀಕ್ಷೆಯ ಹೆಸರಿನಲ್ಲಿ ಎಡರಂಗ ಷಡ್ಯಂತ್ರ ನಡೆಸುತ್ತಿದೆ ಎಂದು ಆರೋಪಿಸಿದರು. ಅಮ್ಮಕೊಡವ ಟ್ರಸ್ಟ್‍ನ ಅಧ್ಯಕ್ಷ ಎಂ.ಬಿ.ದೇವಯ್ಯ ಅವರು ಮಾತನಾಡಿ ಕೊಡವರು ಹಿಂದೂಗಳು ಎಂದು ಪ್ರತಿಪಾದಿಸಿದರು.









